ಎ.19ರೊಳಗೆ ಬೇಡಿಕೆ ಈಡೇರಿಸದಿದ್ದರೆ ಜೈಲ್ ಭರೋ ಚಳವಳಿ: ಕೋಡಿಹಳ್ಳಿ ಚಂದ್ರಶೇಖರ್

Update: 2021-04-17 14:34 GMT

ಬೆಂಗಳೂರು, ಎ.17: ಆರನೇ ವೇತನ ಆಯೋಗ ಶಿಫಾರಸ್ಸು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯದ ನಾಲ್ಕು ವಿಭಾಗಗಳ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಇಂದಿಗೆ ಹನ್ನೊಂದನೇ ದಿನ ಪೂರೈಸಿದೆ. ಎ.19ರಂದು ಜೈಲ್ ಭರೋ ಚಳವಳಿ ನಡೆಸಲಾಗುವುದು ಎಂದು ಮುಷ್ಕರದ ನೇತೃತ್ವ ವಹಿಸಿರುವ ಕೆಎಸ್ಸಾರ್ಟಿಸಿ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ಶುಕ್ರವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರವು ಎ.19ರೊಳಗೆ ತಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ, ಜೈಲು ಭರೋ ಚಳವಳಿ ನಡೆಸಲಾಗುವುದು ಎಂದು ಹೇಳಿದರು.

ಸತತ ಹನ್ನೊಂದು ದಿನಗಳಿಂದ ಮುಷ್ಕರ ನಡೆಸುತ್ತಿದ್ದರೂ, ಈ ರಾಜ್ಯ ಸರಕಾರ ಯಾವುದೇ ಮಾತುಕತೆಗೆ, ಸಂಧಾನಕ್ಕೆ ಹೆಜ್ಜೆ ಹಾಕಿಲ್ಲ. ಬದಲಿಗೆ ಭಯೋತ್ಪಾದಕರ ರೀತಿ ನಡೆದುಕೊಳ್ಳುವುದು ಸರಿಯಾದ ಕ್ರಮವೂ ಅಲ್ಲ. ಮತ್ತೊಂದೆಡೆ ಭಯದಲ್ಲೇ ಎಲ್ಲ ನೌಕರರಯ ಕೆಲಸ ಮಾಡುವುದಾದರೆ, ಭಯ ಹುಟ್ಟಿಸುವ ಸರಕಾರ ನಿಮ್ಮದಾಗುತ್ತೆ ಎಂದು ಅವರು ಟೀಕಿಸಿದರು.

ರಾಜ್ಯಪಾಲರಿಗೆ ಪತ್ರ: ರಾಜ್ಯ ಸರಕಾರ ನಮ್ಮ ಬೇಡಿಕೆಗಳನ್ನು ನಿರ್ಲಕ್ಷ್ಯ ವಹಿಸುತ್ತಿರುವ ಕಾರಣದಿಂದಾಗಿ ರಾಜ್ಯಪಾಲರಿಗೆ ನೌಕರರ ಕೂಟದಿಂದ ಮನವಿ ಪತ್ರವನ್ನು ತಲುಪಿಸುತ್ತಿದ್ದೇವೆ. ಶೀಘ್ರದಲ್ಲಿಯೇ ಸರಕಾರವನ್ನು ಕರೆದು ಬುದ್ದಿ ಹೇಳುವ ಕೆಲಸವನ್ನು ರಾಜ್ಯಪಾಲರು ಮಾಡಬೇಕೆಂದು ತಿಳಿಸಿದರು.

ನಾವು ಈವರೆಗೆ ಶಾಂತಿಯುತ ಮುಷ್ಕರ ನಡೆಸುತ್ತಿದ್ದೇವೆ. ಎಲ್ಲಿಯೂ ಹಿಂಸೆ ಮಾಡಿಲ್ಲ. ಬಾಗಲಕೋಟೆಯಲ್ಲಿ ನಡೆದ ಘಟನೆಗೂ ನಮಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಆದರೆ, ಚಾಲಕನ ಸಾವು ನಿಜಕ್ಕೂ ದುಃಖ ತಂದಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಿ ಎಂದು ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.

ಮುಂದುವರಿದ ಪರದಾಟ: ಸಾರಿಗೆ ನೌಕರರ ಮುಷ್ಕರ ಹನ್ನೊಂದನೆ ದಿನವಾದ ಶನಿವಾರವೂ ಪ್ರಯಾಣಿಕರು ಸೂಕ್ತ ರೀತಿಯಲ್ಲಿ ಬಸ್‍ಗಳ ಸಂಪರ್ಕ ಇಲ್ಲದೆ, ಪರದಾಟ ನಡೆಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕೋಡಿಹಳ್ಳಿ ವಿರುದ್ಧ ಮೊಕದ್ದಮೆ ದಾಖಲು

ಸಾರಿಗೆ ನೌಕರರ ಮುಷ್ಕರಕ್ಕೆ ಪ್ರಚೋದನೆ ಆರೋಪ ಸಂಬಂಧ ಕೆಎಸ್ಸಾರ್ಟಿಸಿ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಅಧ್ಯಕ್ಷ ಚಂದ್ರಶೇಖರ್, ಆನಂದ್ ಸೇರಿ ಹಲವರ ವಿರುದ್ಧ ಇಲ್ಲಿನ ವಿಲ್ಸನ್‍ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಇಲ್ಲಿನ ಶಾಂತಿನಗರ ಬಸ್ ಘಟಕದ ವಿಭಾಗೀಯ ಅಧಿಕಾರಿ ಮುನಿಕೃಷ್ಣ ಎಂಬವರು ದೂರು ನೀಡಿದ್ದು, ಮುಷ್ಕರಕ್ಕೆ ಪ್ರಚೋದನೆ ನೀಡಿ ಸಿಬ್ಬಂದಿ ಗೈರಾಗಲು ಇವರೇ ಕಾರಣ. ಕರ್ತವ್ಯಕ್ಕೆ ಹಾಜರಾಗದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಧ್ವನಿ ಸಂದೇಶ ರವಾನೆ ಮಾಡಲಾಗಿದೆ. ಹೀಗಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News