ಭಾರೀ ಬೇಡಿಕೆ ಇರುವ ವೈರಸ್ ನಿರೋಧಕ ಔಷಧ ರೆಮ್ಡೆಸಿವಿರ್ ಕಳ್ಳತನ!

Update: 2021-04-17 14:58 GMT

ಭೋಪಾಲ್: ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಹೆಚ್ಚಿನ ಬೇಡಿಕೆಯಿರುವ ವೈರಸ್ ನಿರೋಧಕ ಔಷಧ ರೆಮ್ಡೆಸಿವಿರ್ ನ 860 ಇಂಜೆಕ್ಷನ್ ಗಳನ್ನು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಸರಕಾರಿ ಸ್ವಾಮ್ಯದ ಹಮೀದಿಯಾ ಆಸ್ಪತ್ರೆಯ ದಾಸ್ತಾನು ಕೊಠಡಿಯಿಂದ "ಕಳವು" ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಹಿಂದೆ ಆಸ್ಪತ್ರೆಯ ಒಳಗಿನವರ ಕೃತ್ಯವನ್ನು ತಳ್ಳಿಹಾಕುವಂತಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"860 ರೆಮ್ಡೆಸಿವಿರ್ ಚುಚ್ಚುಮದ್ದು ಕಳ್ಳತನವಾಗಿರುವುದು ಕಂಡುಬಂದಿದೆ. ನಾವು ಈ ಕುರಿತು ತನಿಖೆ ನಡೆಸುತ್ತಿದ್ದೇವೆ" ಎಂದು ಭೋಪಾಲ್ ಉಪ ಪೊಲೀಸ್ ಇನ್ಸ್‌ಪೆಕ್ಟರ್ ಇರ್ಷಾದ್ ವಾಲಿ ಪಿಟಿಐಗೆ ತಿಳಿಸಿದ್ದಾರೆ.

"ಇಂಜೆಕ್ಷನ್ ಕಳ್ಳತನವಾಗಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ. ಇದು ತುಂಬಾ ಗಂಭೀರ ವಿಷಯವಾಗಿದೆ. ವಿಭಾಗೀಯ ಆಯುಕ್ತ ಕವೀಂದ್ರ ಕಿಯಾವಾತ್ ಹಾಗೂ  ಭೋಪಾಲ್ ಪೊಲೀಸ್ ಇನ್ಸ್‌ಪೆಕ್ಟರ್ ಇರ್ಷಾದ್ ವಾಲಿ ಸ್ಥಳಕ್ಕೆ ತಲುಪಿದ್ದಾರೆ. ತನಿಖೆಯನ್ನು ಆರಂಭಿಸಿದ್ದಾರೆ ಎಂದು ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಸುದ್ದಿಗಾರರಿಗೆ ತಿಳಿಸಿದರು.

ಕೊಹ್-ಎ-ಫಿಜಾ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 457 (ರಾತ್ರಿ ಹೊತ್ತಿಗೆ ಮನೆ ಮುರಿಯುವುದು) ಹಾಗೂ  380 (ಯಾವುದೇ ಕಟ್ಟಡದಲ್ಲಿ ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News