ಕೊರೋನ ಸೋಂಕಿನ ವಿರುದ್ಧ ಅಸಹಕಾರ ಚಳವಳಿಗೆ ಮುಂದಾಗಬೇಕು: ಸಚಿವ ಸುರೇಶ್ ಕುಮಾರ್

Update: 2021-04-17 17:11 GMT

ಚಿಕ್ಕಮಗಳೂರು, ಎ.18: ಕೊರೋನ ಸೋಂಕಿನ ವಿರುದ್ಧ ದೇಶದ ಎಲ್ಲ ನಾಗರಿಕರೂ ಅಸಹಕಾರ ಚಳವಳಿ ಆರಂಭಿಸಬೇಕಿದೆ. ಕೊರೋನ ಮಾರ್ಗಸೂಚಿಗಳಿಂದ ರಾಜಕಾರಣಿಗಳಿಗೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರತ್ಯೇಕ ವಿನಾಯಿತಿ ಎಂಬುದಿಲ್ಲ. ಎಲ್ಲರೂ ಕೊರೋನ ಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಲೇಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್ ಕರೆ ನೀಡಿದ್ದಾರೆ.

ಶನಿವಾರ ನಗರದ ಜಿಪಂ ಕಚೇರಿಯ ಸಭಾಂಗಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿ ಸಂದರ್ಭ, ರಾಜಕಾರಣಿಗಳು ಕೊರೋನ ಮಾರ್ಗಸೂಚಿಗಳನ್ನು ಪಾಲಿಸದೇ ರಾಜಕೀಯ ಸಮಾವೇಶಗಳಲ್ಲಿ ಭಾಗವಹಿಸುತ್ತಿರುವುದು ಹಾಗೂ ಧಾರ್ಮಿಕ ಕಾರ್ಯಕ್ರಮಗಳಲಿ ಕೊರೋನ ಮಾರ್ಗಸೂಚಿಗಳನ್ನು ಪಾಲಿಸದಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಕೊರೋನ ನಿಯಂತ್ರಣ ಸಂಬಂಧ ಸರಕಾರ ಹೊರಡಿಸಿರುವ ಎಲ್ಲ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕು. ಕೊರೋನ ನಿಯಂತ್ರಣ ಸಂಬಂಧ ಸರಕಾರ ರಾಜಕಾರಣಿಗಳಿಗೊಂದು ಕಾನೂನು, ಧಾರ್ಮಿಕ ಕಾರ್ಯಕ್ರಮಗಳಿಗೊಂದು ಕಾನೂನು, ಜನಸಾಮಾನ್ಯರಿಗೊಂದು ಕಾನೂನನ್ನು ಜಾರಿ ಮಾಡಿಲ್ಲ. ಆದರೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕಾರಣಿಗಳು ಮಾರ್ಗಸೂಚಿಗಳನ್ನು ಉಲ್ಲಂಘಿಸಿಸುತ್ತಿರುವುದು ಸತ್ಯ. ಧಾರ್ಮಿಕ ಕಾರ್ಯಕ್ರಮಗಳಲ್ಲೂ ಈ ನಿಯಮಗಳ ಪಾಲನೆಯಾಗುತ್ತಿಲ್ಲ. ರಾಜಕಾರಣಿಗಳು ಕಡ್ಡಾಯವಾಗಿ ಕೊರೋನ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಎಲ್ಲರಿಗೂ ಮೇಲ್ಪಂಕ್ತಿಯಾಗಿ ಮಾದರಿಯಾಗಬೇಕೆಂದರು.

ಕೊರೋನ ವೈರಸ್ ಒಂದು ರೀತಿಯಲ್ಲಿ ಅಹಂಕಾರದ ವೈರಾಣು ಆಗಿದೆ. ಜನರು ಕೊರೋನ ಮಾರ್ಗಸೂಚಿಗಳನ್ನು ಪಾಲಿಸದೇ ಸೋಂಕು ಹರಡಲು ಸಹಕಾರ ನೀಡಿದರೆ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತದೆ. ಮಾರ್ಗಸೂಚಿಗಳನ್ನು ಪಾಲಿಸಿ ಕೊರೋನ ವೈರಸ್‍ಗೆ ಸಹಕಾರ ನೀಡದಿದ್ದರೆ ಅದು ನಮ್ಮನ್ನು ಬಾಧಿಸುವುದಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ಅಸಹಕಾರ ಚಳವಳಿ ನಡೆದಿದ್ದು, ಇಂದಿನ ಕಾಲದವರು ಆ ಚಳವಳಿಯನ್ನು ನೋಡಿಯೇ ಇಲ್ಲ. ಸದ್ಯ ಕೊರೋನ ಸೋಂಕು ತೀವ್ರವಾಗಿ ಹರಡುತ್ತಿರುವ ಸಂದರ್ಭದಲ್ಲಿ ಈ ಸೋಂಕಿನ ವಿರುದ್ಧ ಪ್ರತಿಯೊಬ್ಬರೂ ಅಸಹಕಾರ ಚಳವಳಿ ಆರಂಭಿಸಿದಲ್ಲಿ ಕೊರೋನ ವೈರಸ್ ಸೋಂಕು ನಿಯಂತ್ರಣ ಸಾಧ್ಯ ಎಂದರು.

ಕೋವಿಡ್ ಸಂಕ್ರಮಣದ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆಗೆ ಬೆಡ್ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರತೀ ಸರಕಾರಿ ಆಸ್ಪತ್ರೆಗಳಿಗೆ ಓರ್ವ ನೋಡಲ್ ಅಧಿಕಾರಿಯನ್ನು ಸರಕಾರ ನೇಮಿಸಿದ್ದು, ಈ ಅಧಿಕಾರಿ ಆಸ್ಪತ್ರೆಯ ಸ್ಥಿತಿಗತಿಗಳ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡಲಿದ್ದಾರೆ. ಶೀಘ್ರ ಆಸ್ಪತ್ರೆಗಳಲ್ಲಿನ ಬೆಡ್‍ಗಳ ಸಮಸ್ಯೆ ಬಗೆಹರಿಯಲಿದೆ ಎಂದರು.

ಬೆಂಗಳೂರಿನಲ್ಲಿ ಕೊರೋನ ಸೋಂಕು ಸೃಷ್ಟಿಸಿರುವ ಅವಾಂತರಗಳ ಬಗ್ಗೆ ಮಾತನಾಡಿದ ಸಚಿವ ಸುರೇಶ್‍ ಕುಮಾರ್, ಗಂಡ ಹೆಂಡತಿ ಇಬ್ಬರೇ ಇದ್ದ ಕುಟುಂಬವೊಂದರಲ್ಲಿ ಪತಿಗೆ ಕೊರೋನ ಪಾಸಿಟಿವ್ ಇರುವುದು ತಿಳಿದು ಬಂದಿದೆ. ಆಗ ದಂಪತಿ ಆಸ್ಪತ್ರೆಗೆ ತೆರಳದೇ ಸೀದಾ ಮನೆಗೆ ಬಂದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಕೊರೋನ ಪೀಡಿತ ಪತಿ ಮನೆಯಲ್ಲೇ ಮೃತಪಟ್ಟಿದ್ದಾರೆ. ಪತ್ನಿ ಮನೆಯ ಮತ್ತೊಂದು ಕೊಠಡಿಯಲ್ಲಿ ಜ್ವರದಿಂದ ಬಳಲುತ್ತ ಮಲಗಿದ್ದರು. ಸ್ಥಳೀಯರು ಮಾಹಿತಿ ನೀಡಿದ ಮೇರೆಗೆ ತಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೆ. ನಂತರ ಮೃತ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ತನ್ನ ಸಂಗಡಿಗರೊಂದಿಗೆ ಕೆಂಗೇರಿಯ ಚಿತಾಗಾರವೊಂದರಲ್ಲಿ ನೆರವೇರಿಸಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಲಾಕ್‍ಡೌನ್ ಹೇರಿಕೆ ಸಂಬಂಧ ಎ.18ರಂದು ಸರ್ವಪಕ್ಷಗಳ ಸಭೆ ಕರೆಯಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಸಭೆಯನ್ನು ಮುಂದೂಡಲಾಗಿದೆ. ಈ ಸಂಬಂಧ ತಾಂತ್ರಿಕ ಸಮಿತಿಯ ಸಲಹೆ ಮೇರೆಗೆ ಮುಂದಿನ ದಿನಾಂಕ ಗೊತ್ತು ಮಾಡಿ ಸರ್ವಪಕ್ಷಗಳ ಸಭೆ ನಡೆಸಲಾಗುವುದು. ಸಭೆ ಬಳಿಕ ಲಾಕ್‍ಡೌನ್ ಬೇಕೋ, ಬೇಡವೋ ಎಂಬ ಬಗ್ಗೆ ಸರಕಾರ ನಿರ್ಧಾರ ಕೈಗೊಳ್ಳಲಿದೆ.

- ಸುರೇಶ್ ಕುಮಾರ್, ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News