ದಾವಣಗೆರೆ: ಮಾಸ್ಕ್ ಧರಿಸದ ವ್ಯಾಪಾರಿಗೆ ಎಸ್ಪಿಯಿಂದ ಕಪಾಳ ಮೋಕ್ಷ
ದಾವಣಗೆರೆ, ಎ.18: ಕೋವಿಡ್-19 ತೀವ್ರಗತಿಯಲ್ಲಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಹಮ್ಮಿಕೊಂಡಿದ್ದ ಮಾಸ್ಕ್ ಅಭಿಯಾನದ ವೇಳೆ ಮಾಸ್ಕ್ ಧರಿಸದೇ ಇದ್ದ ವ್ಯಾಪಾರಿಯೊಬ್ಬರಿಗೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆನ್ನೆಗೆ ಬಾರಿಸಿದ ಘಟನೆ ರವಿವಾರ ನಡೆದಿದೆ.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಎಸ್ಪಿ ಹನುಮಂತರಾಯ ನೇತೃತ್ವದಲ್ಲಿ ರವಿವಾರ ನಗರದಲ್ಲಿ ಮಾಸ್ಕ್ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾಸ್ಕ್ ಧರಿಸದೆ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಯೋರ್ವನನ್ನು ಗದರಿದ ಎಸ್ಪಿ ಹನುಮಂತರಾಯ ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಆದರೆ ಅದಕ್ಕೊಪ್ಪದ ವ್ಯಾಪಾರಿಯು ವಾಗ್ವಾದಕ್ಕಿಳಿದಿದ್ದರಿಂದ ಕೋಪಗೊಂಡ ಎಸ್ಪಿ ಹನುಮಂತರಾಯ ಅವರು ವ್ಯಾಪಾರಿಗೆ ಕಪಾಳ ಮೋಕ್ಷ ಮಾಡಿರುವ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆನಂತರವೂ ವ್ಯಾಪಾರಿ ವಾಗ್ವಾದ ಮುಂದುವರಿಸಿದ್ದಲ್ಲದೆ ದಂಡ ಪಾವತಿಸಲು ನಿರಾಕರಿಸಿದ್ದರಿಂದ ಪೊಲೀಸರು ಆತನನ್ನು ಅಲ್ಲಿಂದ ಬಲವಂತವಾಗಿ ಕರೆದೊಯ್ದರು.