×
Ad

ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಶಾಸಕ ಕೆ.ರಾಜು

Update: 2021-04-18 17:24 IST

ಬೆಂಗಳೂರು, ಎ. 18: ರಾಮನಗರದ ಮಾಜಿ ಶಾಸಕ ಕೆ.ರಾಜು ಅವರು ತಮ್ಮ ಬೆಂಬಲಿಗರೊಂದಿಗೆ ಇಂದಿಲ್ಲಿ ಜೆಡಿಎಸ್ ಪಕ್ಷ ತ್ಯಜಿಸಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. ರವಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದ ರಾಜು ಅವರಿಗೆ ಪಕ್ಷದ ಶಾಲು ಹೊದಿಸಿ, ಬಾವುಟವನ್ನು ನೀಡಿ ಸ್ವಾಗತಿಸಿದರು.

ಬಳಿಕ ಮಾತನಾಡಿದ ಶಿವಕುಮಾರ್, ಪಕ್ಷಕ್ಕೆ ಬರುವವರಿಗೆ ಮುಕ್ತ ಆಹ್ವಾನ ನೀಡುತ್ತೇವೆ. ಪಕ್ಷದ ಸಿದ್ದಾಂತ ಒಪ್ಪಿ ಬರುವವರಿಗೆ ಸ್ವಾಗತ. ನಾವು ಯಾರನ್ನು ಬಲವಂತವಾಗಿ ಇಲ್ಲಿಗೆ ಕರೆತಂದಿಲ್ಲ. ಯಾರನ್ನೂ ಒಡೆದು ಇಲ್ಲಿಗೆ ಕರೆತರುವ ಅಗತ್ಯವೂ ನಮಗೆ ಇಲ್ಲ. ರಾಜು ಸೇರ್ಪಡೆ ಪಕ್ಷಕ್ಕೆ ಬಲ ಬಂದಿದೆ ಎಂದು ಶಿವಕುಮಾರ್ ಇದೇ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

''ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನನ್ನನ್ನು ಶಾಸಕರನ್ನಾಗಿ ಮಾಡಿದ್ದರು. ನಾನೂ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದೆ. ಆದರೆ, ಆ ಬಳಿಕ ನನಗೆ ಮಾನಸಿಕ ಹಿಂಸೆ ನೀಡಲು ಆರಂಭಿಸಿದರು. ಆ ಹಿನ್ನೆಲೆಯಲ್ಲಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದೆ. ಕಿರಿಕಿರಿ ಸಹಿಸದೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ತೀರ್ಮಾನಿಸಿದೆ'' ಎಂದು ಮಾಜಿ ಶಾಸಕ ಕೆ.ರಾಜು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸದ ಡಿ.ಕೆ.ಸುರೇಶ್, ಮೇಲ್ಮನೆ ಸದಸ್ಯರಾದ ಸಿಎಂ ಲಿಂಗಪ್ಪ, ಎಸ್.ರವಿ, ಮಾಜಿ ಶಾಸಕ ಬಾಲಕೃಷ್ಣ ಸೇರಿದಂತೆ ಪಕ್ಷದ ಮುಖಂಡರು ಹಾಗೂ ರಾಜು ಬೆಂಬಲಿಗರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News