ಕೊರೋನ ನಿಯಂತ್ರಣಕ್ಕೆ ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ?: ಸಚಿವ ಆರ್.ಅಶೋಕ್ ಹೇಳಿದ್ದು ಹೀಗೆ...

Update: 2021-04-18 12:05 GMT

ಬೆಂಗಳೂರು, ಎ. 18: ಕೊರೋನ ಎರಡನೆ ಅಲೆ ನಿಯಂತ್ರಣಕ್ಕೆ ರಾಜ್ಯದಲ್ಲಿ ಲಾಕ್‍ಡೌನ್ ಹೇರುವ ಅಗತ್ಯವಿಲ್ಲ. ಲಾಕ್‍ಡೌನ್ ಪ್ರಸ್ತಾವವೂ ಸರಕಾರದ ಮುಂದಿಲ್ಲ. ಆದರೆ, ರಾಜಧಾನಿ ಬೆಂಗಳೂರಿನಲ್ಲಿ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ರವಿವಾರ ಇಲ್ಲಿನ ಕುಮಾರಕೃಪಾ ಅತಿಥಿಗೃಹದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್‍ನಿಂದ ಈಗಾಗಲೇ ಬಡ ಜನರಿಗೆ ಸಮಸ್ಯೆ ಆಗಿದೆ. ಹೀಗಾಗಿ ಲಾಕ್‍ಡೌನ್ ಹೊರತುಪಡಿಸಿ ಕಟ್ಟುನಿಟ್ಟಿನ ಕ್ರಮಗಳನ್ನು ರೂಪಿಸಲಾಗುವುದು. ತಜ್ಞ ವೈದ್ಯರು ಇದೇ ಸಲಹೆ ಮಾಡಿದ್ದು, ನಾಳೆ(ಎ.19) ನಡೆಯಲಿರುವ ಬೆಂಗಳೂರು ನಗರದ ಶಾಸಕರು, ಸಂಸದರ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದರು.

ಲಾಕ್‍ಡೌನ್ ಬೇಡ ಎಂದು ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ನಾಳೆ ಏನೇ ತೀರ್ಮಾನವಾದರೂ ಸಿಎಂ ಗಮನಕ್ಕೆ ತರುತ್ತೇವೆ. ಸೋಂಕು ಹರಡುವುದನ್ನು ನಿಯಂತ್ರಿಸಲು ಜನರು ಆದಷ್ಟು ಮದುವೆ, ಬೀಗರಕೂಟ, ಬಾಡೂಟಗಳಿಂದ ದೂರ ಇರಬೇಕು ಎಂದ ಅಶೋಕ್, ರಾಜ್ಯ ವಿಪತ್ತು ನಿರ್ವಹಣೆ ಪಡೆಗೆ ನಾನು ಉಪಾಧ್ಯಕ್ಷ, ಸಿಎಂ ಅಧ್ಯಕ್ಷರಾಗಿದ್ದಾರೆ. ಸಿಎಂ ಕೋವಿಡ್ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿದ್ದು, ನಾನು ಸಭೆ ನಡೆಸುತ್ತಿದ್ದೇನೆ ಎಂದರು.

ಕೋವಿಡ್ ನಿರ್ವಹಣೆಗೆ ಹಣ ಬಿಡುಗಡೆ ಮಾಡಬೇಕೆಂದರೆ ನಾನೇ ಬಿಡುಗಡೆ ಮಾಡಬೇಕು. ಹಣ ಬಿಡುಗಡೆ ಲೆಕ್ಕದ ಬಗ್ಗೆ ಕೇಂದ್ರ ಸರಕಾರಕ್ಕೆ ಮಾಹಿತಿ ಕೊಡಬೇಕು. ಅದಕ್ಕಾಗಿ ನನ್ನ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ ಅಷ್ಟೇ. ಮುಖ್ಯಮಂತ್ರಿ ಆದೇಶದ ಮೇರೆಗೆ ನಾನು ಸಭೆ ಮಾಡುತ್ತಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸಚಿವ ಆರ್.ಅಶೋಕ್ ಇದೇ ವೇಳೆ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News