12 ದಿನ ಪೂರೈಸಿದ ಸಾರಿಗೆ ನೌಕರರ ಮುಷ್ಕರ: ಕೆಲವು ಕಡೆ ಬಸ್ ಸಂಚಾರ ಪುನರಾರಂಭ

Update: 2021-04-18 16:15 GMT

ಬೆಂಗಳೂರು, ಎ.18: ಆರನೇ ವೇತನ ಆಯೋಗ ಶಿಫಾರಸ್ಸು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯದ ನಾಲ್ಕು ವಿಭಾಗಗಳ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಇಂದಿಗೆ(ಎ.19) ಹನ್ನೆರಡನೇ ದಿನ ಪೂರೈಸಿದ್ದು, ಇದರ ನಡುವೆ ರವಿವಾರ ರಾಜ್ಯದ ಕೆಲವೆಡೆ ಬಸ್ ಸಂಚಾರ ಆರಂಭವಾಗಿದೆ.

ಬಿಎಂಟಿಸಿ ಸೇರಿದಂತೆ ಹಲವು ಬಸ್ ಘಟಕಗಳ ಅಧಿಕಾರಿಗಳು ಮುಷ್ಕರ ನಿರತ ನೌಕರರಿಗೆ ಅಮಾನತು ಪತ್ರವನ್ನು ತಲುಪಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. 

ಬೆಂಗಳೂರು, ಮೈಸೂರು ಮತ್ತು ಕಲಬುರ್ಗಿ ಸೇರಿದಂತೆ ಪೊಲೀಸ್ ಭದ್ರತೆಯಲ್ಲಿ ಕೆಲ ಸರಕಾರಿ ಬಸ್‍ಗಳ ಸಂಚಾರ ಆರಂಭಿಸಲಾಗಿದೆ. ಆದರೂ, ಬಸ್ ಸಂಚಾರ ವ್ಯವಸ್ಥೆ ಸಾಮಾನ್ಯ ಸ್ಥಿತಿಗೆ ತಲುಪಿಲ್ಲ. ಇನ್ನು, ಹೊರ ಜಿಲ್ಲೆಗಳಿಂದ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಿಗೆ ತಲುಪಲು ಪ್ರಯಾಣಿಕರು ಎಂದಿನಂತೆ ತೊಂದರೆಗೆ ಸಿಲುಕಿದರು.

ನಾಳೆ ಜೈಲು ಭರೋ: ತಮ್ಮ ಸರಣಿ ಹೋರಾಟಕ್ಕೆ ರಾಜ್ಯ ಸರಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿ ನಾಳೆ (ಎ.19) ಜೈಲ್ ಭರೋ ಚಳವಳಿ ನಡೆಸಲಾಗುವುದು ಎಂದು ಮುಷ್ಕರದ ನೇತೃತ್ವ ವಹಿಸಿರುವ ಕೆಎಸ್ಸಾರ್ಟಿಸಿ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ಗಡುವು: ಆರನೆ ವೇತನಕ್ಕಾಗಿ ಮುಷ್ಕರ ನಿರತ 2,443 ಬಿಎಂಟಿಸಿ ಸಿಬ್ಬಂದಿಯನ್ನು ಆಡಳಿತ ಮಂಡಳಿ ಅಮಾನತುಗೊಳಿಸಿದ್ದು, ಈ ಸಂಬಂಧ ನಾಳೆ(ಎ.19)ಉತ್ತರ ನೀಡಲು ಗಡುವು ನೀಡಲಾಗಿದೆ. ಅಮಾನತು ಆದವರ ಪೈಕಿ 1,974 ಮಂದಿ ಹಿರಿಯ ನೌಕರರು ಇದ್ದು, ನೋಟಿಸ್‍ಗೆ ಸೂಕ್ತ ಕಾರಣ ನೀಡದಿದ್ದರೆ ಎಲ್ಲ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಲಾಗುವುದು ಎಂದು ಬಿಎಂಟಿಸಿ ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News