ವೇದಿಕೆಯಲ್ಲೇ ಶಾಸಕ ಶ್ರೀಕಂಠಯ್ಯ- ಸಚಿವ ನಾರಾಯಣಗೌಡ ನಡುವೆ ವಾಕ್ಸಮರ !

Update: 2021-04-18 16:45 GMT

ಮಂಡ್ಯ, ಎ.18: ಶ್ರೀರಂಗಪಟ್ಟಣದ ಮಿನಿ ವಿಧಾನಸೌಧದಲ್ಲಿ ಶನಿವಾರ ಸಂಜೆ ನಡೆದ ಕಂದಾಯ ಅದಾಲತ್ ಮತ್ತು ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಣಾ ಸಮಾರಂಭದ ವೇಳೆ, ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ತಹಶೀಲ್ದಾರ್ ರೂಪಾ ಅವರ ನಡುವಿನ ಮಾತಿನ ಚಕಮಕಿ ಅಂತಿಮವಾಗಿ ರವೀಂದ್ರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡರ ನಡುವೆ ವಾಗ್ವಾದಕ್ಕೆ ಕಾರಣವಾದ ಘಟನೆ ಜರುಗಿದೆ.

‘ನೀವು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಜನರ ಸಮಸ್ಯೆ ಆಲಿಸುತ್ತಿಲ್ಲ. ಜನರನ್ನು ಅಲೆಸುತ್ತಿದ್ದೀರಿ, ನೀವು ನಡೆದದ್ದೇ ದಾರಿಯಾಗಿದೆ’ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ತಹಶೀಲ್ದಾರ್ ರೂಪಾ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ತೀಷ್ಣವಾಗಿಯೇ ಪ್ರತಿಕ್ರಿಯಿಸಿದ ರೂಪಾ ಅವರು, ‘ತಾನು ಸರಿಯಾಗಿಯೇ ಕೆಲಸ ಮಾಡುತ್ತಿದ್ದೇನೆ. ಅನಗತ್ಯ ಆರೋಪ ಸರಿಯಲ್ಲ’ ಎಂದು ಶಾಸಕರಿಗೆ ಉತ್ತರ ನೀಡಿದರು. ‘ಸೋಮವಾರ ಮಾಧ್ಯಮದ ಮುಂದೆ ನಿನ್ನ ಬಂಡವಾಳ ಬಯಲು ಮಾಡುತ್ತೇನೆ’ ಎಂದು ರವೀಂದ್ರ ಸಿಟ್ಟುಗೊಂಡು ತಹಶೀಲ್ದಾರ್ ಗೆ ಹೊಡೆಯುವ ರೀತಿ ಮುಂದಡಿ ಇಟ್ಟರು. 

ಮಧ್ಯೆಪ್ರವೇಶಿಸಿದ ಸಚಿವ ನಾರಾಯಣಗೌಡ, ‘ಏನ್ರಿ ಶಾಸಕರಾಗಿ ತಾಳ್ಮೆ ಕಳೆದುಕೊಂಡು ಅಧಿಕಾರಿಗೇ ಹೊಡೆಯಲು ಹೋಗುತ್ತೀರ, ಹೊಡೆಯಿರಿ ನೋಡೋಣ’ ಎಂದು ರವೀಂದ್ರ ಅವರಿಗೆ ಸವಾಲು ಹಾಕಿದರು. ‘ನಿಮ್ಮದು ಜನವಿರೋಧಿ ಸರಕಾರ, ಅಧಿಕಾರಿಗಳು ಲೂಟಿ ಹೊಡೆಯುತ್ತಿದ್ದು, ಹದ್ದುಬಸ್ತಿನಲ್ಲಿಡಲು ನಿಮಗೆ ಸಾಧ್ಯವಾಗಿಲ್ಲ’ ಎಂದು ರವೀಂದ್ರ ತಿರುಗೇಟು ನೀಡಿದರು. ಮಧ್ಯೆ ಪ್ರವೇಶಿಸಿದ ಮುಖಂಡರು ಸಮಾಧಾನ ಹೇಳಿ ಪರಿಸ್ಥಿತಿ ತಿಳಿಗೊಳಿಸಿದರು.

ಈ ಸಂದರ್ಭದಲ್ಲಿ ವೇದಿಕೆ ಸುತ್ತುವರಿದ ಪೊಲೀಸರು ಮೂಕಪ್ರೇಕ್ಷಕರಾಗಿ ನಿಂತಿದ್ದರೆ, ರವೀಂದ್ರ ಅಭಿಮಾನಿಗಳು ಕೆಲವರು ಸಚಿವ ನಾರಾಯಣಗೌಡರ ವಿರುದ್ಧ ಟೀಕೆ ಮಾಡುತ್ತಾ, ಶಾಸಕರು ಅಧಿಕಾರಿಯನ್ನು ಪ್ರಶ್ನಿಸುವುದು ತಪ್ಪಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದುದು ಕಂಡುಬಂದಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News