ಕಠಿಣ ಲಾಕ್‌ಡೌನ್ ಜಾರಿಗೊಳಿಸುವಂತೆ ಸಿಎಂ ಬಿಎಸ್‌ವೈಗೆ ಪತ್ರ ಬರೆದ ಡಾ.ಎಚ್.ಸಿ.ಮಹದೇವಪ್ಪ

Update: 2021-04-19 12:22 GMT

ಬೆಂಗಳೂರು, ಎ.19: ಕೊರೋನ ಎರಡನೇ ಅಲೆಯು ರಾಜ್ಯಾದ್ಯಂತ ವ್ಯಾಪಿಸುತ್ತಿರುವ ಹಿನ್ನೆಲೆ ಮಾಜಿ ಆರೋಗ್ಯ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, 10 ರಿಂದ 15 ದಿನಗಳ ಕಾಲ ಕಠಿಣವಾದ ಲಾಕ್ಡೌನ್ ಅನ್ನು ಜಾರಿಗೊಳಿಸಲು ಮನವಿ ಮಾಡಿದ್ದಾರೆ.

ಯಡಿಯೂರಪ್ಪನವರೇ, ಕೊರೋನ ಎರಡನೇ ಅಲೆಯು ರಾಜ್ಯಾದ್ಯಂತ ವೇಗವಾಗಿ ವ್ಯಾಪಿಸುತ್ತಿರುವುದು ನಿಜಕ್ಕೂ ಜನರ ಆರೋಗ್ಯದ ದೃಷ್ಟಿಯಿಂದ ಆತಂಕದ ವಿಷಯ. ಸಾಂಕ್ರಾಮಿಕ ಖಾಯಿಲೆಯೊಂದು ಇಷ್ಟೊಂದು ವ್ಯಾಪಕವಾಗಿ ಹರಡುತ್ತಿದ್ದರೂ ಸಹ ರಾಜ್ಯ ಸರ್ಕಾರವು ಫಲಪ್ರದ ಎನಿಸುವಂತಹ ಕ್ರಮಗಳನ್ನು ಕೈಗೊಳ್ಳದೇ ಭಯ ಮೂಡಿಸುವ ವಾತಾವರಣವನ್ನು ನಿರ್ಮಿಸಿರುವುದು ನಿಜಕ್ಕೂ ಬೇಸರದ ಸಂಗತಿ. ಕೊರೋನ ಸೋಂಕು ಹೆಚ್ಚಾಗುತ್ತಿದೆ ಎಂದು ತಿಳಿದರೂ ಸಹ ಯಾವುದೇ ಸಮರ್ಪಕವಾದ ಕ್ರಮವನ್ನು ಕೈಗೊಳ್ಳದೇ ಚುನಾವಣಾ ಸಮಾವೇಶಗಳಲ್ಲಿ ಪಾಲ್ಗೊಳ್ಳುತ್ತಿದ್ದದ್ದು ನಿಜಕ್ಕೂ ನಿಮ್ಮ ಸರ್ಕಾರದ ಬೇಜವಾಬ್ದಾರಿತನವೇ ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಕೊರೋನ ಸೋಂಕಿನ ಪ್ರಮಾಣ ಕೈಮೀರಿ ಹೋಗುತ್ತಿದ್ದು ಮೇ ತಿಂಗಳ ವೇಳೆಗೆ ಪ್ರತಿದಿನ 15 ಸಾವಿರ ಪ್ರಕರಣಗಳು ದಾಖಲಾಗಬಹುದೆಂದು ಹೇಳಲಾಗುತ್ತಿದೆ. ಇಂತಹ ಆತಂಕದ ಸಂದರ್ಭದಲ್ಲಿ ಸೋಂಕು ನಿಯಂತ್ರಣದೆಡೆಗೆ ಸಿದ್ಧತೆ ನಡೆಸಬೇಕಿದ್ದ ಸರ್ಕಾರವು ಕೇಂದ್ರ ಸರ್ಕಾರ ಏನು ಮಾಡುತ್ತದೆ ಮತ್ತು ಪ್ರಧಾನಿಗಳು ಏನು ಹೇಳುತ್ತಾರೆ ಎಂದು ಅತ್ತಕಡೆ ನೋಡುತ್ತಾ ಕುಳಿತಿದ್ದು ತಾವು ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ಮರೆತು ಕೂತಿವೆ ಎಂದು ಟೀಕಿಸಿದ್ದಾರೆ.

ಕೊರೋನ ನಿಯಂತ್ರಣದ ವಿಷಯದಲ್ಲಿ ಸರ್ಕಾರದ ಸಚಿವರೇ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿರುವುದು ಜನ ಸಾಮಾನ್ಯರ ವಿಶ್ವಾಸವನ್ನು ಕುಂದಿಸುವಂತಹ ಸಂಗತಿಯಾಗಿದೆ. ಕೊರೋನ ಸೋಂಕು ತಡೆಯುವಲ್ಲಿ ರಾಜ್ಯ ಸರ್ಕಾರ ಸರಿಯಾದ ಕಾರ್ಯಸೂಚಿಯನ್ನು ರೂಪಿಸಿಲ್ಲ. ಅದರಲ್ಲೂ ಸರ್ಕಾರ ರೂಪಿಸಿರುವ ಟಾಸ್ಕ್ ಫೋರ್ಸ್ ನಲ್ಲಿ ತಳಮಟ್ಟದ ಅನುಭವ ಇರುವಂತವರು ಇಲ್ಲ. ಇಲ್ಲಿ ಅವರ ಬದಲಾಗಿ ಎಲ್ಲಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರನ್ನು ನಿರ್ವಹಣಾ ಸ್ಥಾನಕ್ಕೆ ನಿಯೋಜಿಸಲಾಗಿದ್ದು ಇದು ಅಷ್ಟೊಂದು ಅನುಕೂಲಕರವಾದ ಕ್ರಮವಲ್ಲ ಎಂದು ಅವರು ತಿಳಿಸಿದ್ದಾರೆ.

ಕೊರೋನ ಸೋಂಕು ಈಗಾಗಲೇ ಕೈಮೀರಿ ಹೊರಟು ಹೋಗಿದ್ದು ಸರ್ಕಾರವು 10 ರಿಂದ 15 ದಿನಗಳ ಕಾಲ ಕಠಿಣವಾದ ಲಾಕ್ ಡೌನ್ ಅನ್ನು ಜಾರಿಗೊಳಿಸಿ, ಈ ಸೋಂಕು ಸರಪಳಿಯನ್ನು ಕಡಿದುಹಾಕಬೇಕು. ತದನಂತರದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ತ್ವರಿತವಾಗಿ ಕಾರ್ಯಪ್ರವೃತ್ತರಾಗಬೇಕು. ಇನ್ನು ಲಾಕ್ ಡೌನ್ ವೇಳೆ ಜನ ಸಾಮಾನ್ಯರ ಬದುಕಿಗೆ ತೊಂದರೆಯಾಗದಂತೆ ಅವರಿಗೆ ಅಗತ್ಯವಾದ ಆಹಾರ ಮತ್ತು ದಿನಬಳಕೆ ವಸ್ತುಗಳನ್ನು ಸರ್ಕಾರವೇ ಒದಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ನೀಡಲಾಗಿರುವ ಕೊರೋನ ಲಸಿಕೆಯ ಪ್ರಮಾಣವು ಕೇವಲ 10% ಇದ್ದು, ಲಸಿಕೆ ನೀಡುವಿಕೆ ಪ್ರಮಾಣವವನ್ನು 80% ಗೆ ಏರಿಕೆ ಮಾಡಬೇಕು. ಆಗ ಸೋಂಕು ನಿಯಂತ್ರಣಾ ಕ್ರಮಗಳು ಹೆಚ್ಚು ಫಲಪ್ರದವಾಗಿರುತ್ತವೆ ಮತ್ತು ರೋಗದ ನಿಯಂತ್ರಣದ ಸರ್ಕಾರದ ಪ್ರಯತ್ನಗಳ ಮೇಲೆ ಸರ್ಕಾರದ ಮೇಲೆ ಜನರಿಗೆ ವಿಶ್ವಾಸ ಮೂಡುತ್ತದೆ. ನಮ್ಮ ದೇಶದ ಜನರಿಗೇ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಇಲ್ಲದಿರುವಾಗ ಹುಸಿ ಪ್ರಚಾರಕ್ಕಾಗಿ ಬೇರೆ ದೇಶಗಳಿಗೆ 6 ಕೋಟಿಗೂ ಅಧಿಕ ಪ್ರಮಾಣದ ಲಸಿಕೆಯನ್ನು ವಿತರಿಸಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಸರ್ಕಾರ ದೇಶದ ನಾಗರೀಕರ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಕೊರೋನ ನಿಯಂತ್ರಣದಲ್ಲಿ ಸರ್ಕಾರವು ಈಗ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳು ಮತ್ತು ಬ್ಲಾಕ್ ಮಟ್ಟದ ಆರೋಗ್ಯ ಸಲಹೆಗಾರರ ಸೇವೆಯನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಹೀಗಾದರೆ ವ್ಯಾಪಕವಾಗಿ ಹರಡುತ್ತಿರುವ ಸೋಂಕನ್ನು ತಡೆಗಟ್ಟುವುದಾಗಲೀ ಮತ್ತು ಆ ಬಗ್ಗೆ ಜಾಗೃತಿ ಮೂಡಿಸುವುದಾಗಲೀ ಹೇಗೆ ಸಾಧ್ಯ ಎಂದು ಎಚ್.ಸಿ.ಮಹದೇವಪ್ಪ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News