ನಾನು ಕೊರೋನದಿಂದ ಸತ್ತರೆ ಅದಕ್ಕೆ ಸರಕಾರವೇ ಹೊಣೆ: ಫೇಸ್‌ಬುಕ್ ಲೈವ್ ನಲ್ಲಿ ನಿರ್ದೇಶಕ ಗುರುಪ್ರಸಾದ್ ಆರೋಪ

Update: 2021-04-19 12:34 GMT

ಬೆಂಗಳೂರು, ಎ.19: ಸಿನಿಮಾ ನಿರ್ದೇಶಕ ಗುರುಪ್ರಸಾದ್ ಅವರಿಗೆ ಕೊರೋನ ಸೋಂಕು ಪಾಸಿಟಿವ್ ಬಂದಿದೆ. ಈ ಬಗ್ಗೆ ಫೇಸ್‌ಬುಕ್ ಲೈವ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಗುರುಪ್ರಸಾದ್ ಒಂದು ವೇಳೆ ನಾನು ಕೊರೋನದಿಂದ ಸತ್ತರೆ ಅದಕ್ಕೆ ಈ ಸರಕಾರದ ಮಂತ್ರಿಗಳೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫೇಸ್‌ಬುಕ್ ಲೈವ್ ನಲ್ಲಿ ಮಾತನಾಡಿದ ಗುರುಪ್ರಸಾದ್ 'ನಾನು ಕೊರೋನ ಪಾಸಿಟಿವ್ ಬಂದಿರುವ ನೋವಿನಲ್ಲಿ ಮಾತನಾಡುತ್ತಿದ್ದೇನೆ. ನನ್ನ ಮನೆಯವರೆಗೆ ಕೊರೋನವನ್ನು ತಂದು ಬಿಟ್ಟ ಮುಖ್ಯಮಂತ್ರಿ ಯಡಿಯೂರಪ್ಪ, ವಿಜಯೇಂದ್ರ ಸೇರಿ ಎಲ್ಲರಿಗೆ ಧನ್ಯವಾದ. ಒಂದೊಂದು ಮನೆಗೂ ವೈರಸ್ ಹಂಚುತ್ತಿದ್ದೀರಲ್ಲಾ. ನನಗೆ ವೈರಸ್ ತಂದು ಕೊಟ್ಟವರಿಗೆ ಧಿಕ್ಕಾರವಿರಲಿ. ರಾಜಕೀಯ ಅನ್ನೋದು ಬ್ಯುಸಿನೆಸ್ ಅಲ್ಲ, ಮನೆ ಮನೆಯಲ್ಲಿಯೂ ಕೊರೋನದಿಂದ ಸಾಯುತ್ತಿರುವುದಕ್ಕೆ ಆರೋಗ್ಯ ಸಚಿವ ಸುಧಾಕರ್, ಸಿಎಂ ಯಡಿಯೂರಪ್ಪ ಅವರೇ ಕಾರಣ, ರಾಜಕಾರಣಿಗಳಾರೂ ಸಾಚಾಗಳಲ್ಲ ಎಂದು ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ ಕೋವಿಡ್‌ನಿಂದ ಸತ್ತ ಪ್ರತಿಯೊಂದು ಸಾವಿಗೂ ನೀವು ಕಾರಣ. ಪ್ರಾಮಾಣಿಕವಾಗಿ ಆಡಳಿತ ನಡೆಸಿ. ಡಿ.ಕೆ.ಶಿವಕುಮಾರ್‌, ಕುಮಾರಸ್ವಾಮಿ, ದೇವೇಗೌಡರು ಯಾರೂ ಸಾಚಾ ಅಲ್ಲ. ಇದು ನನ್ನ ಡೆತ್‌ ನೋಟ್‌. ಈ ನೋವು ನಿಮ್ಮನ್ನು ಸುಮ್ಮನೆ ಬಿಡಲ್ಲ. ಜಾರಕಿಹೊಳಿ ಸಿಡಿ ವಿಷಯ ನಮಗೆ ಬೇಡ. ಪ್ರತಿಯೊಬ್ಬ ಪ್ರಜೆಯನ್ನು ಸಾಕುವುದು ಮುಖ್ಯ. ನನ್ನ ಸಾವಿಗೆ ನೀವೆಲ್ಲರೂ ಕಾರಣ. ತುಂಬಾ ನೋವಿನಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ. ಪ್ರಾಮಾಣಿಕವಾಗಿ ಬದುಕಿದವರ ಶಾಪ ನಿಮ್ಮ ಮೇಲಿದೆ’ ಎಂದು ಗುರುಪ್ರಸಾದ್‌ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News