ಯಾವುದೇ ಕಾರಣಕ್ಕೂ ಲಾಕ್‌ಡೌನ್ ಬೇಡ: ಬೆಂಗಳೂರು ಜನಪ್ರತಿನಿಧಿಗಳ ಸಭೆಯಲ್ಲಿ ಒಕ್ಕೊರಲ ಒತ್ತಾಯ

Update: 2021-04-19 12:45 GMT

ಬೆಂಗಳೂರು, ಎ.19: ಬೆಂಗಳೂರಿನಲ್ಲಿ ಕೋವಿಡ್ 19 ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಸಚಿವರು, ಸಂಸದರು ಹಾಗೂ ಶಾಸಕರ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ಆಸ್ಪತ್ರೆಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.

ಸಭೆಯಲ್ಲಿ 'ಯಾವುದೇ ಕಾರಣಕ್ಕೂ ಲಾಕ್‌ಡೌನ್ ಮಾಡುವುದು ಬೇಡ. ಬೇಕಾದರೆ ಸೆಕ್ಷನ್ ಕಲಂ 144 ಅನ್ವಯ ನಿಷೇಧಾಜ್ಞೆ ಜಾರಿ ಮಾಡಿ' ಎಂದು ಆಡಳಿತ ಮತ್ತು ವಿಪಕ್ಷಗಳ ನಾಯಕರು ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅಂತಿಮ ನಿರ್ಧಾರವನ್ನು ನಾಳೆ ಕೈಗೊಳ್ಳುವುದಾಗಿ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ಶಾಸಕ ರಾಮಲಿಂಗಾರೆಡ್ಡಿ, ಈ ಸಂದರ್ಭದಲ್ಲಿ ನಮ್ಮ ಸಂಪೂರ್ಣ ಸಹಕಾರ ತಮಗೆ ಇದೆ. ನಾವು ಇಲ್ಲಿ ರಾಜಕಾರಣ ಮಾಡಲು ಬಂದಿಲ್ಲ. ತಾವೂ ಈ ವಿಚಾರದಲ್ಲಿ ರಾಜಕಾರಣ ಮಾಡಬೇಡಿ. ಆಹಾರವಾಗಲೀ ಅಥವಾ ಔಷಧಿಯಾಗಲೀ ನ್ಯಾಯಯುತವಾಗಿ ವಿತರಿಸಿ. ರಾಜ್ಯದಲ್ಲಿ ಒಂದೆಡೆ ಹಾಸಿಗೆ ಇಲ್ಲ, ಮತ್ತೊಂದೆಡೆ ತೀವ್ರ ನಿಗಾ ಘಟಕದಲ್ಲಿ ಸ್ಥಳಾವಕಾಶ ಇಲ್ಲ, ಮಗದೊಂದೆಡೆ ಆಮ್ಲಜನಕದ ದಾಸ್ತಾನು ಇಲ್ಲ ಎಂಬ ಭಯಾನಕ ಪರಿಸ್ಥಿತಿ ಉಂಟಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಬೆಂಗಳೂರು ನಗರದಲ್ಲಿ ಕನಿಷ್ಠ 25,000 ಹಾಸಿಗೆಗಳನ್ನು ವ್ಯವಸ್ಥೆ ಮಾಡಿ. ಮನೆಯಲ್ಲಿ ದಿಗ್ಬಂಧನದಲ್ಲಿರುವ (ಹೋಮ್ ಐಸೋಲೇಷನ್) ಜನರು ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಲಾಕ್ಡೌನ್ ಬೇಡ. ದಂಡಪ್ರಕ್ರಿಯೆ ಸಂಹಿತೆ ಪರಿಚ್ಛೇಧ 144 ಜಾರಿ ಮಾಡಿ ಗುಂಪು ಸೇರುವುದನ್ನು ತಡೆಯುವುದು ಉತ್ತಮ ಎಂದು ತಿಳಿಸಿದರು.

ಕಲ್ಯಾಣ ಮಂಟಪ, ಸಮುದಾಯ ಭವನ, ಮಾರುಕಟ್ಟೆಗಳಲ್ಲಿ ಜನಸಂದಣಿ ನಿಯಂತ್ರಿಸಿ. ನೈಟ್ ಕರ್ಫ್ಯೂ ಸಮಯ ಬದಲಾವಣೆ ಅಗತ್ಯವಿಲ್ಲ. ಕೊಳಗೇರಿಗಳಲ್ಲಿ ಲಸಿಕಾ ಆಭಿಯಾನಕ್ಕೆ ಒತ್ತು ಕೊಡಿ ಎಂದು ಮನವಿ ಮಾಡಿದರು.

ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಲಾಕ್ ಡೌನ್ ಮಾಡುವುದು ಬೇಡ ಎಂದು ಹೇಳಿದ್ದೇವೆ. ಬೇಕಾದರೆ 24 ಗಂಟೆಯೂ ಸೆಕ್ಷನ್ ಜಾರಿ ಮಾಡಿ. ಆದರೆ ಲಾಕ್ ಡೌನ್ ಬೇಡ ಎಂದು ಒತ್ತಾಯಿಸಿದ್ದೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News