ಕೊಲೆಗಡುಕ ಫಕೀರನಿಗೆ ಕೊರೋನ ಸಾವುಗಳಿಂದ ಹೃದಯ ಕರಗದು: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಕಿಡಿ

Update: 2021-04-19 14:49 GMT

ಬೆಂಗಳೂರು, ಎ.19: ಗುಜರಾತ್ ಗಲಭೆ-ಸಾವಿರಾರು ಜನ, ನೋಟ್ ಬ್ಯಾನ್-ನೂರಾರು ಜನ, ರೈತ ಹೋರಾಟ-300ಕ್ಕೂ ಹೆಚ್ಚು ಜನ, ವಲಸೆ ಕಾರ್ಮಿಕರು-ಸಾವಿರಾರು ಜನ, ಸಾವಿನ ಮೆರವಣಿಗೆಯನ್ನೆ ಮಾಡಿದ ಇತಿಹಾಸ ಹೊಂದಿದ ಕೊಲೆಗಡುಕ ಫಕೀರನಿಗೆ ಕೊರೋನ ಸಾವುಗಳಿಂದ ಹೃದಯ ಕರಗದು. ಆತ ಸಾವುಗಳನ್ನು ಸಂಭ್ರಮಿಸುವ ವಿಕೃತ ವ್ಯಕ್ತಿ #ResignModi ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಗಾರಿದೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಕಾಂಗ್ರೆಸ್, ಚಿಕಿತ್ಸೆಯ ವ್ಯವಸ್ಥೆ ಇರಲಿ ಶವಸಂಸ್ಕಾರಕ್ಕೂ ವ್ಯವಸ್ಥೆ ಇಲ್ಲದಂತ ಸ್ಥಿತಿ ದೇಶಾದ್ಯಂತ ನಿರ್ಮಾಣವಾಗಿದೆ. ‘ಊರ್ ಮೇಲ್ ಊರ್ ಬಿದ್ರೆ ಶ್ಯಾನುಭೋಗನ ಗಡ್ಡಕ್ಕೇನು’ ಎನ್ನುವ ಮಾತಿನಂತೆ ‘ಸಾವಿನ ವ್ಯಾಪಾರಿ' ನರೇಂದ್ರ ಮೋದಿ ದೇಶವಾಸಿಗಳನ್ನು ಸಾವಿನ ಮನೆಗೆ ಕಳಿಸುತ್ತಿದ್ದಾರೆ. ರಾಜ್ಯ ಬಿಜೆಪಿ ಪ್ರಧಾನಿಗೆ ಜವಾಬ್ದಾರಿಯ ಅರಿವಿಲ್ಲವೇಕೆ? ಎಂದು ಪ್ರಶ್ನಿಸಿದೆ.

ಆಕ್ಸಿಜನ್ ಕೊರತೆಯೇ ಇಲ್ಲ, ಬೆಡ್‍ಗಳ ಕೊರತೆ ಇಲ್ಲ ಎಂದು ಮರ್ಯಾದೆ ಬಿಟ್ಟು ವೈಫಲ್ಯ ಮುಚ್ಚಿಕೊಳ್ಳಲು ಪುಂಖಾನುಪುಂಖವಾಗಿ ಸುಳ್ಳು ಹೇಳುತ್ತಿರುವ ರಾಜ್ಯ ಬಿಜೆಪಿ ನಿಮ್ಮ ದುರಾಡಳಿತ, ಭ್ರಷ್ಟಾಚಾರದ ಪರಿಣಾಮ ಜನ ಗೋಳಾಡಿಕೊಂಡು ಹಾದಿ ಬೀದಿಯಲ್ಲಿ ಜೀವ ಬಿಡುತ್ತಿದ್ದಾರೆ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ? ಈ ಸಾವುಗಳಿಗೆ ಬಿಜೆಪಿಯೇ ನೇರ ಹೊಣೆ ಎಂದು ಕಾಂಗ್ರೆಸ್ ಟೀಕಿಸಿದೆ.

‘ಪರಿಸ್ಥಿತಿ ಇನ್ನೂ ಕೈಮೀರಿಲ್ಲ’ ಎಂದು ಸಚಿವ ಆರ್.ಅಶೋಕ್ ಹೇಳುತ್ತಿದ್ದಾರೆ. ‘ಎಲ್ಲರೂ ಸತ್ತಿಲ್ಲ ಇನ್ನೂ ಹಲವು ಜನ ಬದುಕಿದ್ದಾರೆ’ ಎಂಬ ಅರ್ಥವೇ ಬೇಜವಾಬ್ದಾರಿ ಸಚಿವರೇ? ಎಂದು ಕಾಂಗ್ರೆಸ್ ಕಿಡಿಗಾರಿದೆ.

ರಾಜ್ಯ ಬಿಜೆಪಿ, ಮಾಧ್ಯಮಗಳ ವರದಿಗಳು ವದಂತಿಗಳೇ, ಸುಳ್ಳುಗಳೇ? ಅದು ಸುಳ್ಳೇ ಆಗಿದ್ದರೆ ವದಂತಿ ಹಬ್ಬಿಸುವವರ ಮೇಲೆ ಕ್ರಮ ಜರುಗಿಸುತ್ತೇವೆ ಎಂದಿದ್ದ ನಿಮ್ಮ ಸರಕಾರ ಸುಮ್ಮನಿರುವುದೇಕೆ? ಇಲ್ಲವೇ ವಾಸ್ತವವನ್ನು, ನಿಮ್ಮ ವೈಫಲ್ಯವನ್ನು ಒಪ್ಪಿಕೊಳ್ಳಿ. ಸಾವಿನ ಮನೆಯಲ್ಲೂ ಸುಳ್ಳಿನ ಮಹಲು ಕಟ್ಟುವ ನಿಮ್ಮ ಜನ್ಮಕ್ಕೆ ನಾಚಿಕೆ ಇಲ್ಲವೇ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ರೆಮಿಡಿಸಿವಿರ್ ಔಷಧ ಕೊರತೆಯಿಂದ ಚಿಕಿತ್ಸೆ ಫಲಕಾರಿಯಾಗದೆ ಜನ ಸಾಯುತ್ತಿರುವುದು ವದಂತಿಯೇ? ಅದೆಲ್ಲವೂ ಸುಳ್ಳೇ? ಅಥವಾ ನಿಮ್ಮ ಕಚೇರಿಯಲ್ಲಿ ದಾಸ್ತಾನು ಇಟ್ಟಿದ್ದೀರಾ? ಸಾವು ನೋವುಗಳ ಸಂದರ್ಭದಲ್ಲೂ ಇಂತಹ ಸುಳ್ಳುಗಳ ಲಜ್ಜೆಗೆಟ್ಟ ಬದುಕು ಬೇಕಾ ನಿಮಗೆ ರಾಜ್ಯ ಬಿಜೆಪಿ? ನಿಮ್ಮ ಸುಳ್ಳುಗಳಿಂದ ಜನರ ಪ್ರಾಣ ಉಳಿಯದು ಎಂದು ಕಾಂಗ್ರೆಸ್ ಹೇಳಿದೆ.

ಸರಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳುವ ಮೊದಲು ಕಾರ್ಮಿಕರಿಗೆ, ಚಾಲಕರಿಗೆ ಸೇರಿದಂತೆ ಎಲ್ಲ ಬಡಜನರಿಗೆ ಮಾಸಿಕ 10 ಸಾವಿರ ರೂ.ಪ್ಯಾಕೇಜ್ ನೀಡಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ, ರಾಜ್ಯಕ್ಕೆ ಎದುರಾಗಿರುವ ಬಿಕ್ಕಟ್ಟು ನಿರ್ವಹಿಸಲು ಕೂಡಲೇ ಕೇಂದ್ರದಿಂದ ಬರಬೇಕಾದ ಎಲ್ಲ ಹಣದ ಬಿಡುಗಡೆಗೆ ಆಗ್ರಹಿಸಿ, ಅದಲ್ಲದೆ ಹೆಚ್ಚುವರಿ ಆರ್ಥಿಕ ನೆರವು ಕೇಳಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News