ನಿಲ್ಲದ ಸಾರಿಗೆ ನೌಕರರ ಮುಷ್ಕರ: ಜೈಲ್ ಭರೋ ಚಳವಳಿ ನಡೆಸಿದ ನೌಕರರು ಪೊಲೀಸ್ ವಶಕ್ಕೆ

Update: 2021-04-19 14:45 GMT

ಬೆಂಗಳೂರು, ಎ.19: ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳಿಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಹತ್ವದ ಸಭೆ ನಡೆಯಲಿದೆ ಎಂದು ಕೆಎಸ್ಸಾರ್ಟಿಸಿ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಸಾರಿಗೆ ನೌಕರರು ಮುಷ್ಕರ ಹನ್ನೆರಡನೆ ದಿನವಾದ ಸೋಮವಾರ ನಗರದಲ್ಲಿ ಜೈಲು ಭರೋ ಚಳವಳಿ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಭೆ ನಡೆಸಿ ಚರ್ಚಿಸಿದ್ದು, ಅವರು ಎರಡು ದಿನಗಳ ಕಾಲಾವಕಾಶ ಕೇಳಿದ್ದಾರೆ. ಹೀಗಾಗಿ, ಶೀಘ್ರದಲ್ಲೇ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಯುವ ವಿಶ್ವಾಸವಿದ್ದು, ಅಲ್ಲಿಯವರೆಗೂ ನಮ್ಮ ಹೋರಾಟ ಶಾಂತಿಯುತವಾಗಿ ನಡೆಯಲಿದೆ ಎಂದು ಹೇಳಿದರು.

ವೇತನ ಹೆಚ್ಚಿಸಿ: ಸಾರಿಗೆ ನಿಗಮಗಳ ನೌಕರರಿಗೆ ಶೇಕಡ 20ರಷ್ಟು ವೇತನ ಹೆಚ್ಚಳ ಮತ್ತು ಬಾಕಿ ಮೊತ್ತಕ್ಕೆ ಶೇ.6ರಷ್ಟು ಬಡ್ಡಿ ನೀಡುವಂತೆ 2004ರಲ್ಲಿ ಹೈಕೋರ್ಟ್ ಆದೇಶ ನೀಡಿತ್ತು. ಅದರಂತೆ ಕ್ರಮ ಕೈಗೊಳ್ಳಬೇಕು ಎಂಬುದು ನೌಕರರ ಬೇಡಿಕೆ ಎಂದು ಅವರು ತಿಳಿಸಿದರು.

ಇನ್ನು, ನೌಕರರ ಮುಷ್ಕರದ ನಡುವೆಯೂ ಸಂಚರಿಸುತ್ತಿರುವ ಸರಕಾರಿ ಬಸ್‍ಗಳಿಗೆ ಕಲ್ಲು ಹೊಡೆದಿರುವವರ ಜತೆ ತಮಗೆ ಯಾವುದೇ ಸಂಬಂಧವಿಲ್ಲ. ನಾವು ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದೇವೆ. ಮುಷ್ಕರದ ನಡುವೆಯೂ ಬಸ್‍ಗಳು ಸಂಚರಿಸುತ್ತಿರುವ ಕಾರಣದಿಂದ ಅಸಮಾಧಾನಗೊಂಡ ಜನರು ಕಲ್ಲು ತೂರುವ ಕೆಲಸ ಮಾಡಿರಬಹುದು ಎಂದರು.

13ನೇ ದಿನಕ್ಕೆ ಕಾಲಿಟ್ಟ ಮುಷ್ಕರ: ಸಾರಿಗೆ ನೌಕರರ ಮುಷ್ಕರ ಇಂದಿಗೆ 13ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರಯಾಣಿಕರ ಪರದಾಟ ಮುಂದುವರಿದಿದೆ. ಇನ್ನು, ಕೆಲಸಕ್ಕೆ ಹಾಜರಾಗಿರುವ ಸಿಬ್ಬಂದಿ ಸಹ ಭಯದ ವಾತಾವರಣದಲ್ಲಿಯೇ ಬಸ್ ಚಾಲನೆ ಮಾಡುವ ಪರಿಸ್ಥಿತಿ ಉಂಟಾಗಿದೆ.

ತರಬೇತಿ ಸಿಬ್ಬಂದಿ ವಜಾ: ಮುಷ್ಕರ ನಿರತ ತರಬೇತಿ ಸಿಬ್ಬಂದಿ ಮೇಲೆ ಕೆಸ್ಸಾರ್ಟಿಸಿ ಕ್ರಮಕ್ಕೆ ಮುಂದಾಗಿದೆ. 251 ತರಬೇತಿ ನೌಕರರನ್ನು ವಜಾ ಮಾಡಿದೆ. ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದರೂ, ಸಿಬ್ಬಂದಿ ಬಾರದ ಹಿನ್ನಲೆ, ತರಬೇತಿ ನೌಕರರನ್ನ ವಜಾ ಮಾಡಿ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ಶಿವಯೋಗಿ ಕಳಸದ್ ಆದೇಶ ಹೊರಡಿಸಿದ್ದಾರೆ. ಅದೇ ರೀತಿ, ಬಿಎಂಟಿಸಿ ಸಹ 200ಕ್ಕೂ ಅಧಿಕ ಸಿಬ್ಬಂದಿಯನ್ನು ವಜಾಗೊಳಿಸಿದೆ.

ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗಳ ಮೇಲೆ ಹಲ್ಲೆ ಹಾಗೂ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸುವ ದುಷ್ಕರ್ಮಿಗಳು ಕಠಿಣ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಕೆಎಸ್ಸಾರ್ಟಿಸಿ ಹೇಳಿದ್ದು, ಕರ್ತವ್ಯಕ್ಕೆ ಹಾಜರಾಗುವ ನಮ್ಮ ನಿಷ್ಠಾವಂತ ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ನೀಡಲಾಗುವುದೆಂದು ಪ್ರಕಟನೆಯೊಂದನ್ನು ಹೊರಡಿಸಿದೆ.

ಕಲ್ಲು ತೂರಾಟ: ಬಂಧನ

ಮುಷ್ಕರದ ನಡುವೆ ಬಸ್ ಚಾಲನೆ ಮಾಡಿದ ಕೆಲವು ಕಡೆಗಳಲ್ಲಿ ದುಷ್ಕರ್ಮಿಗಳು ಕಲ್ಲೂ ತೂರಿ ಚಾಲಕನಿಗೆ ಗಾಯಗೊಳಿಸಿದ ಆರೋಪದಡಿ ಮೂವರನ್ನು ಇಲ್ಲಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿಎಂಟಿಸಿ ನೌಕರರಾದ ಸೀತೇಗೌಡ, ತಿಮ್ಮೇಗೌಡ, ಜೀವನ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.

ಸಿ.ಟಿ.ಮಾರ್ಕೆಟ್‍ನಿಂದ ಜಾಲಹಳ್ಳಿ ಕ್ರಾಸ್ ಮಾರ್ಗವಾಗಿ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್‍ಗೆ ದುಷ್ಕರ್ಮಿಗಳು ರವಿವಾರ ಮಧ್ಯಾಹ್ನ ಕಲ್ಲು ತೂರಿದರು. ಈ ಸಂದರ್ಭದಲ್ಲಿ ಚಾಲಕ ನಂಜೇಗೌಡ ಅವರಿಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಜೈಲು ಭರೋ ಚಳವಳಿ: ನೌಕರರು ವಶಕ್ಕೆ

ಆರನೇ ವೇತನ ಆಯೋಗದ ಶಿಫಾರಸ್ಸು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜೈಲು ಭರೋ ಚಳವಳಿ ನಡೆಸಿದ ಸಾರಿಗೆ ನೌಕರರನ್ನು ಪೊಲೀಸರು ವಶಕ್ಕೆ ಪಡೆದರು.

ಸೋಮವಾರ ನಗರದ ಫ್ರೀಡಂ ಪಾರ್ಕ್ ಬಳಿ ಜಮಾಯಿಸಿದ ನೌಕರರನ್ನು ಸ್ಥಳದಲ್ಲಿದ್ದ ಪೊಲೀಸರು ಧರಣಿಗೆ ಅವಕಾಶ ನೀಡದೆ ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು.

ಕೋವಿಡ್ ಹಿನ್ನಲೆಯಲ್ಲಿ ಮುಷ್ಕರಕ್ಕೆ ಅವಕಾಶವಿರದ ಕಾರಣ ಪ್ರತಿಭಟನೆಗೆ ಮುಂದಾದ ನೌಕರರನ್ನು ಪೊಲೀಸರು ವಶಕ್ಕೆ ಪಡೆದು ಮೈಸೂರು ರಸ್ತೆಯ ಸಿಎಆರ್ ಮೈದಾನಕ್ಕೆ ಕಳುಹಿಸಿಕೊಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಇದಕ್ಕೂ ಮೊದಲು ಚಳವಳಿಯನ್ನುದ್ದೇಶಿಸಿ ಮಾತನಾಡಿದ ನೌಕರರು, ನಮ್ಮ ಬೇಡಿಕೆಗಳ ಈಡೇರಿಕೆಗೆ ನಿರಂತರ 13 ದಿನಗಳಿಂದ ಮುಷ್ಕರ ಮಾಡುತ್ತಿದ್ದೇವೆ. ಸರಕಾರ ನಮ್ಮನ್ನು ತಿರಸ್ಕಾರ ಮನೋಭಾವದಿಂದ ನೋಡುತ್ತಿದೆ ಎಂದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News