ಮುಂದಿನ ಆದೇಶದವರೆಗೂ ವಿಧಾನ ಮಂಡಲ ಸಮಿತಿ ಸಭೆಗಳು ಸ್ಥಗಿತ: ಸ್ಪೀಕರ್ ಕಾಗೇರಿ

Update: 2021-04-19 15:26 GMT

ಬೆಂಗಳೂರು, ಎ. 19: ಕೋವಿಡ್ ಎರಡನೆ ಅಲೆ ಹಿನ್ನೆಲೆಯಲ್ಲಿ ವಿಧಾನಸಭೆಯ ಎಲ್ಲ ಸದಸ್ಯರು ತಮ್ಮ ತಮ್ಮ ಕ್ಷೇತ್ರ ಸೋಂಕು ವ್ಯಾಪಿಸುತ್ತಿರುವುದನ್ನು ತಡೆಗಟ್ಟಲು ಎಲ್ಲ ಪ್ರಯತ್ನ ಮಾಡಲು ಅನುಕೂಲ ಆಗುವಂತೆ ವಿಧಾನ ಮಂಡಲ ಸಮಿತಿ ಸಭೆಗಳನ್ನು ಎ.26ರಿಂದ ಮುಂದಿನ ಆದೇಶದವರೆಗೂ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಸೋಮವಾರ ಕೋವಿಡ್ ತಡೆಗಟ್ಟುವ ಸಂಬಂಧ ಲೋಕಸಭೆ ಸ್ಪೀಕರ್ ಅಧ್ಯಕ್ಷತೆಯಲ್ಲಿ ನಡೆದ ಎಲ್ಲ ರಾಜ್ಯಗಳ ಸ್ಪೀಕರ್ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ವಿಡಿಯೋ ಕಾನ್ಫೆರೆನ್ಸ್ ಸಭೆಯಲ್ಲಿ ಮೇಲ್ಕಂಡ ಅಂಶಗಳನ್ನು ಗಮನಕ್ಕೆ ತರಲಾಗಿದೆ. ಅಲ್ಲದೆ, ವಿಧಾನಸಭೆ ಸದಸ್ಯರು ಸ್ವತಃ ಕೋವಿಡ್ ಲಸಿಕೆ ಪಡೆಯಲು ಪ್ರೇರೇಪಿಸಲಾಗಿದೆ. ಎಲ್ಲ ಸದಸ್ಯರು ಸರಕಾರದ ಮಾರ್ಗಸೂಚಿ ಪಾಲಿಸಲು ಸೂಚಿಸಲಾಗಿದೆ. ಕೋವಿಡ್ ಸೋಂಕು ತಡೆಗೆ ಜನ ಜಾಗೃತಿ ಮೂಡಿಸಲು ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಸ್ಪೀಕರ್ ಕಚೇರಿ ತಿಳಿಸಿದೆ.

ಪಕ್ಷಗಳ ಹಿತಾಸಕ್ತಿ ಮೀರಿ ಕೆಲಸ ಮಾಡಬೇಕು: ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಾನೂನು ಸಚಿವ ಬಸವರಾಜ ಬೊಮ್ಮಾಯಿ, ಕೋವಿಡ್ ಮಹಾಮಾರಿ ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ ಎಲ್ಲ ಜನಪ್ರತಿನಿಧಿಗಳು ತಮ್ಮ ರಾಜಕೀಯ ಹಿತಾಸಕ್ತಿಯನ್ನು ಮೀರಿ ಸೋಂಕು ತಡೆಗಟ್ಟಲು ಬದ್ಧತೆಯಿಂದ ಸವಾಲು ಎದುರಿಸಲು ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಶಾಸಕರು ಅತ್ಯಂತ ಜವಾಬ್ದಾರಿಯಿಂದ ಸರಕಾರದ ಮಾರ್ಗಸೂಚಿಯನ್ನು ಪಾಲಿಸುವುದರ ಜೊತೆಗೆ ಕೊರೋನ ಸೋಂಕು ತಡೆಗಟ್ಟಲು ಸರಕಾರಕ್ಕೆ ಸಹಕಾರ ನೀಡಬೇಕು. ಎಲ್ಲ ಜನ ಜಾಗೃತಿ ಮೂಡಿಸಲು ನೆರವಾಗುವುದುರ ಜೊತೆಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಆ ಹಿನ್ನೆಲೆಯಲ್ಲಿ ಲೋಕಸಭೆ ಸ್ಪೀಕರ್ ಎಲ್ಲ ರಾಜ್ಯಗಳ ಸ್ಪೀಕರ್ ಗಳು, ಸಭಾಪತಿಗಳು ಮತ್ತು ಕಾನೂನು ಸಂಸದೀಯ ವ್ಯವಹಾರಗಳ ಸಚಿವರ ಸಭೆ ನಡೆಸಿದ್ದಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News