ಅಲ್ಪಸಂಖ್ಯಾತ ಸಂಶೋಧನಾ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಕಡಿತಗೊಳಿಸಿದ್ದ ಆದೇಶ ಹಿಂಪಡೆದ ಸರಕಾರ

Update: 2021-04-19 16:11 GMT

ಬೆಂಗಳೂರು, ಎ.19: ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದ ರಾಜ್ಯ ಸರಕಾರವು, ಪಿಎಚ್‍ಡಿ ಹಾಗೂ ಎಂ.ಫಿಲ್ ಮಾಡುವಂತಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕಡಿತಗೊಳಿಸಿ ಹೊರಡಿಸಿದ್ದ ಆದೇಶ ಹಿಂಪಡೆದಿದೆ. ಅಲ್ಲದೆ, ಪಿಎಚ್‍ಡಿ ಹಾಗೂ ಎಂ.ಫಿಲ್ ವ್ಯಾಸಂಗ ಮಾಡುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಈ ಹಿಂದೆ ನೀಡುತ್ತಿದ್ದಂತೆ ವಿದ್ಯಾರ್ಥಿ ವೇತನವನ್ನು ಮುಂದುವರಿಸಿ ರಾಜ್ಯ ಸರಕಾರವು ಎ.15ರಂದು ತಿದ್ದುಪಡಿ ಆದೇಶ ಹೊರಡಿಸಿದೆ.

ಅಲ್ಪಸಂಖ್ಯಾತರ ವಿಷಯಗಳ ಬಗ್ಗೆ ಪ್ರಥಮ ಆದ್ಯತೆ ನೀಡಿ ಇನ್ನುಳಿದ ವಿಷಯಗಳಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಪಿಎಚ್‍ಡಿ ವ್ಯಾಸಂಗ ಮಾಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 3 ವರ್ಷ ಮತ್ತು ಎಂ.ಫಿಲ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಜೆ.ಆರ್.ಎಫ್ ಮಾದರಿಯಲ್ಲಿ ಎರಡು ವರ್ಷ ಅವಧಿಗೆ ಮಾತ್ರ ಪ್ರತಿ ತಿಂಗಳು 25 ಸಾವಿರ ರೂ.ಗಳನ್ನು ಮತ್ತು ಪ್ರತಿ ವರ್ಷಕ್ಕೆ ಒಂದು ಬಾರಿಗೆ 10 ಸಾವಿರ ರೂ.ನಿರ್ವಹಣಾ ವೆಚ್ಚವನ್ನು (ಪ್ರತಿ ವರ್ಷಕ್ಕೆ ಒಟ್ಟು 3.10 ಲಕ್ಷ ರೂ.) ಫೆಲೋಶಿಪ್ ಮೂಲಕ ನೀಡಲು ಸರಕಾರ ಆದೇಶ ಹೊರಡಿಸಿದೆ.

ಈ ಸಂಬಂಧ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಜೆಡಿಎಸ್ ಮುಖಂಡ ಇಮ್ರಾನ್ ಪಾಷ, ಪಿಎಚ್‍ಡಿ ಹಾಗೂ ಎಂ.ಫಿಲ್ ವ್ಯಾಸಂಗ ಮಾಡುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 25 ಸಾವಿರ ರೂ.ಗಳಂತೆ 3 ಲಕ್ಷ ರೂ.ಗಳ ಫೆಲೋಶಿಪ್ ಸಿಗುತ್ತಿತ್ತು. ಆದರೆ, ರಾಜ್ಯ ಸರಕಾರ ಈ ಬಾರಿ ಬಜೆಟ್ ಸಮಸ್ಯೆಯಿಂದ ಪ್ರತಿ ತಿಂಗಳು ನೀಡುವ 25 ಸಾವಿರ ರೂ.ಗಳನ್ನು 8 ಸಾವಿರ ರೂ.ಗಳಿಗೆ ಇಳಿಸಿತ್ತು ಎಂದರು.

ಇದರಿಂದ ಕಂಗಾಲಾದ ಸಂಶೋಧನಾ ವಿದ್ಯಾರ್ಥಿಗಳು ಈ ವಿಷಯವನ್ನು ನಮ್ಮ ಗಮನಕ್ಕೆ ತಂದಾಗ ನಾನು ಹಾಗೂ ನಜ್ಮಾ ನಝೀರ್ ಇಬ್ಬರು ಸೇರಿ ಚರ್ಚೆ ಮಾಡಿ, ಎಚ್.ಡಿ.ಕುಮಾರಸ್ವಾಮಿ ಅವರ ಮೂಲಕ ಮುಖ್ಯಮಂತ್ರಿಗೆ ಪತ್ರ ಬರೆಸಿ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟೆವು. ಸರಕಾರಿ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆವು ಎಂದು ಅವರು ಹೇಳಿದರು.

ಆದರೆ, ಏನು ಪ್ರಯೋಜನವಾಗದೆ ಇದ್ದಾಗ ನಾವು ಅನಿವಾರ್ಯವಾಗಿ ವಿದ್ಯಾರ್ಥಿಗಳ ಜೊತೆ ಸೇರಿ ನಗರದ ಮೌರ್ಯ ಸರ್ಕಲ್‍ನಲ್ಲಿರುವ ಗಾಂಧಿ ಪ್ರತಿಮೆ ಬಳಿ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ಕೈಗೊಂಡೆವು. ನಮ್ಮ ಹೋರಾಟಕ್ಕೆ ರಾಜ್ಯದ ವಿದ್ಯಾರ್ಥಿಗಳು, ಧಾರ್ಮಿಕ ಮುಖಂಡರು, ಸಂಘ ಸಂಸ್ಥೆಗಳ ಪ್ರಮುಖರು ಬೆಂಬಲ ನೀಡಿದರು ಎಂದು ಇಮ್ರಾನ್ ಪಾಷ ತಿಳಿಸಿದರು.

ಈ ವಿಷಯ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರ ಗಮನ ಸೆಳೆಯುತ್ತಿದ್ದಂತೆ, ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸರಕಾರದ ಪರವಾಗಿ ಆಶ್ವಾಸನೆ ನೀಡಿದರು. ಆನಂತರ ನಾವು ಉಪವಾಸ ಸತ್ಯಾಗ್ರಹ ಕೈ ಬಿಟ್ಟೆವು. ಇದೀಗ ರಾಜ್ಯ ಸರಕಾರ ಕೊಟ್ಟ ಮಾತಿನಂತೆ ವಿದ್ಯಾರ್ಥಿಗಳಿಗೆ ಈ ಹಿಂದಿನಂತೆಯೆ ವಿದ್ಯಾರ್ಥಿವೇತನ ನೀಡಲು ತಿದ್ದುಪಡಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News