ಸೋಲಿನ ಭೀತಿಯಿಂದ ಟಿಎಂಸಿ ಹಿಂಸಾಚಾರ: ನಳಿನ್‍ ಕುಮಾರ್ ಕಟೀಲು

Update: 2021-04-19 16:19 GMT

ಬೆಂಗಳೂರು, ಎ.19: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯ ಮೇಲೆ ನಡೆದ ಗುಂಡಿನ ದಾಳಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಖಂಡಿಸಿದ್ದು, ಸೋಲಿನ ಭೀತಿಯಿಂದ ಟಿಎಂಸಿ ಇಂಥ ದುಷ್ಕೃತ್ಯಗಳಿಗೆ ಮುಂದಾಗುತ್ತಿದೆ ಎಂದು ತಿಳಿಸಿದ್ದಾರೆ.

ಸೋಲಿನ ಭೀತಿಯಿಂದ ಹತಾಶೆಗೊಂಡ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರ ಪ್ರೇರಣೆಯಿಂದ ಮಾಲ್ದಾದಲ್ಲಿ ಬಿಜೆಪಿ ಅಭ್ಯರ್ಥಿ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಹದಗೆಟ್ಟಿರುವುದನ್ನು ಇದು ಪ್ರತಿಬಿಂಬಿಸುತ್ತದೆ. ಚುನಾವಣಾ ಫಲಿತಾಂಶ ತಮ್ಮ ವಿರುದ್ಧ ಬರಲಿದೆ ಎಂದು ಸ್ಪಷ್ಟಗೊಂಡ ಬಳಿಕ ಟಿಎಂಸಿ ಮುಖಂಡರು ಇಂಥ ದುಷ್ಕೃತ್ಯಗಳಿಗೆ ಮುಂದಾಗುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಆದರೆ, ಹಿಂಸೆಯ ರಾಜಕೀಯದಿಂದ ಗೆಲುವು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಪರ ಚಿಂತನೆಗಳನ್ನು ಬೆಂಬಲಿಸುವುದನ್ನು ಮತದಾರರು ತಮ್ಮ ಅಮೂಲ್ಯ ಮತಗಳನ್ನು ಬಿಜೆಪಿಗೆ ನೀಡುವ ಮೂಲಕ ಸ್ಪಷ್ಟಪಡಿಸಲಿದ್ದಾರೆ ಎಂಬುದಾಗಿ ನಳಿನ್‍ಕುಮಾರ್ ಕಟೀಲ್ ಪ್ರಕಟಣೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News