3-4 ಆಸ್ಪತ್ರೆಗೆ ಹೋದರೂ ಚಿಕಿತ್ಸೆ ನೀಡಿಲ್ಲ, ಚಿಕಿತ್ಸೆ ನೀಡಿದ್ದರೆ ನನ್ನ ಪತಿ ಉಳಿಯುತ್ತಿದ್ದರು: ಕಣ್ಣೀರಿಟ್ಟ ಮಹಿಳೆ

Update: 2021-04-19 16:22 GMT

ಚಿಕ್ಕಮಗಳೂರು, ಎ.19: ಚಿಕ್ಕಮಗಳೂರು ಮೂಲದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ಆಕ್ಸಿಜನ್ ಸಿಗದೇ ಪರದಾಟ ನಡೆಸಿ ಮೃತಪಟ್ಟಿರುವ ಮನಕಲುಕುವ ಘಟನೆ ವರದಿಯಾಗಿದ್ದು, ಪತ್ನಿ, ಮಗಳು ಇದೀಗ ದಿಕ್ಕಿಲ್ಲದೇ ಕಂಗಾಲಾಗಿದ್ದಾರೆ.

ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದ ಜಗನ್ನಾಥ್(38) ಮೃತ ವ್ಯಕ್ತಿಯಾಗಿದ್ದು, ಕೆಲ ವರ್ಷಗಳ ಹಿಂದೆ ಉತ್ತಮ ಜೀವನದ ಕನಸು ಕಂಡು ಪತ್ನಿ ಅನಿತಾ ಹಾಗೂ ಮಗಳೊಂದಿಗೆ ಬೆಂಗಳೂರಿಗೆ ತೆರಳಿದ್ದ ಜಗನ್ನಾಥ್ ಅಲ್ಲೇ ಕ್ಯಾಬ್ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು. ಇತ್ತೀಚಿಗೆ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಕಳೆದ ಶನಿವಾರ ಈ ಸಮಸ್ಯೆ ಗಂಭೀರವಾಗಿದ್ದರಿಂದ ಪತ್ನಿ ಅನಿತಾ ಹಾಗೂ ಮಗಳು ಕೂಡಲೇ ಬೆಂಗಳೂರಿನ ಹಲವು ಆಸ್ಪತ್ರೆಗಳಿಗೆ ತೆರಳಿ ಜಗನ್ನಾಥ್ ಅವರನ್ನು ದಾಖಲಿಸಲು ಮುಂದಾಗಿದ್ದಾರೆ.

ಆದರೆ ಕೋವಿಡ್ ರಿಪೋರ್ಟ್ ಇಲ್ಲದೇ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬೆಂಗಳೂರಿನ ಹಲವು ಆಸ್ಪತ್ರೆಗಳು ಚಿಕಿತ್ಸೆಗೆ ನಿರಾಕರಿಸಿವೆ ಎನ್ನಲಾಗಿದೆ. ಈ ವೇಳೆ ಪತ್ನಿ ಅನಿತಾ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಯನ್ನು ಅಂಗಲಾಚಿದರೂ ಪ್ರಯೋಜನವಾಗಿಲ್ಲ. ತೀವ್ರ ಉಸಿರಾಟದ ತೊಂದರೆಯಿಂದ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಜಗನ್ನಾಥ್‍ರಿಗೆ ಕೋವಿಡ್ ಸೋಂಕು ಇಲ್ಲ, ಮೊದಲು ಆಕ್ಸಿಜನ್ ವ್ಯವಸ್ಥೆ ಕಲ್ಪಿಸಿ ನಂತರ ಕೋವಿಡ್ ಟೆಸ್ಟ್ ರಿಪೋರ್ಟ್ ತರುವುದಾಗಿ ಬೇಡಿಕೊಂಡರೂ ಬೆಂಗಳೂರಿನ ಆಸ್ಪತ್ರೆಗಳು ಆಕ್ಸಿಜನ್ ನೀಡಲು ನಿರಾಕರಿಸಿವೆ ಎಂದು ಆರೋಪಿಸಲಾಗಿದೆ.

ಜಗನ್ನಾಥ್ ಪತ್ನಿ ಅನಿತಾ ಶನಿವಾರ ಹಾಗೂ ರವಿವಾರ ಬೆಂಗಳೂರಿನಲ್ಲಿ ಹಲವು ಆಸ್ಪತ್ರೆಗಳ ಬಾಗಿಲು ಬಡಿದು, ವೈದ್ಯರು, ಆಸ್ಪತ್ರೆ ಮುಖ್ಯಸ್ಥರನ್ನು ಅಂಗಲಾಚಿದರೂ ಕೋವಿಡ್ ರಿಪೋರ್ಟ್ ಇಲ್ಲ ಎಂಬ ಒಂದೇ ಕಾರಣಕ್ಕೆ ಚಿಕಿತ್ಸೆ ನೀಡಲು ನಿರ್ಲಕ್ಷ್ಯ ವಹಿಸಿವೆ. ಸತತ ಎರಡು ದಿನಗಳ ಕಾಲ ಅಲೆದಾಟದ ಬಳಿಕ ಜಗನ್ನಾಥ್‍ರಿಗೆ ಉಸಿರಾಟದ ಸಮಸ್ಯೆ ತೀವ್ರವಾಗಿ ಮತ್ತೊಂದು ಆಸ್ಪತ್ರೆಗೆ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭವೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ರವಿವಾರ ಜಗನ್ನಾಥ್ ಅವರ ಮೃತ ದೇಹವನ್ನು ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮಕ್ಕೆ ತರಲಾಗಿದ್ದು, ಪತ್ನಿ ಅನಿತಾ ತನ್ನ ಮಗಳು ಹಾಗೂ ಕುಟುಂಬಸ್ಥರೊಂದಿಗೆ ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಘದ ಸದಸ್ಯರ ನೆರವು ಪಡೆದು ಕೋವಿಡ್ ಮಾರ್ಗಸೂಚಿಯಂತೆ ಜಗನ್ನಾಥ್ ಮೃತ ದೇಹದ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಜಗನ್ನಾಥ್‍ರನ್ನು ಕಳೆದುಕೊಂಡ ಪತ್ನಿ ಹಾಗೂ ಅವರ ಮಗಳು ಸದ್ಯ ದಿಕ್ಕು ತೋಚದಂತಾಗಿದ್ದಾರೆ.

ನನ್ನ ಪತಿ ಚೆನ್ನಾಗಿಯೇ ಇದ್ದರು. ಆಗಾಗ್ಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿತ್ತು. ಆಕ್ಸಿಜನ್ ನೀಡಿದರೆ ಸರಿಯಾಗುತ್ತಿದ್ದರು. ಅವರಿಗೆ ಕೋವಿಡ್‍ನ ಯಾವ ಲಕ್ಷಣಗಳೂ ಇರಲಿಲ್ಲ. ಕಳೆದ ಶನಿವಾರ ಪತಿಗೆ ಮತ್ತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಬೆಂಗಳೂರಿನ ಕೆಲ ಆಸ್ಪತ್ರೆಗಳಿಗೆ ಹೋಗಿ ಆಕ್ಸಿಜನ್ ನೀಡಲು ಕೇಳಿಕೊಂಡಿದ್ದೇವೆ. ಆದರೆ ಕೋವಿಡ್ ಟೆಸ್ಟ್ ರಿಪೋರ್ಟ್ ಇಲ್ಲದೇ ಚಿಕಿತ್ಸೆ ನೀಡಲ್ಲ ಎಂದು ನಾವು ಹೋದ ಆಸ್ಪತ್ರೆಗಳಲ್ಲೆಲ್ಲ ಹೇಳಿದರು. ನನ್ನ ಪತಿಯ ಸಾವಿಗೆ ಖಾಸಗಿ ಆಸ್ಪತ್ರೆಗಳೇ ಕಾರಣ. ಸಕಾಲದಲ್ಲಿ ಆಕ್ಸಿಜನ್ ನೀಡಿದ್ದರೆ ಅವರು ಬದುಕುಳಿಯುತ್ತಿದ್ದರು. ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳು ಸಾಮಾನ್ಯ ಜನರಿಗೆ ಕೊರೋನ ನೆಪ ಹೇಳಿಕೊಂಡು ಚಿಕಿತ್ಸೆ ನೀಡಲು ಮುಂದಾಗುತ್ತಿಲ್ಲ. ಸರಕಾರ ಇಂತಹ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ನನ್ನ ಪತಿಯ ಸಾವಿಗೆ ನ್ಯಾಯ ಕೊಡಿಸಬೇಕು.
- ಅನಿತಾ, ಜಗನ್ನಾಥ್ ಪತ್ನಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News