ಅಶ್ಲೀಲ ಸೀಡಿ ಪ್ರಕರಣ: ಮಂಗಳವಾರ ರಮೇಶ್ ಜಾರಕಿಹೊಳಿ ವಿಚಾರಣೆ ಸಾಧ್ಯತೆ

Update: 2021-04-19 16:34 GMT

ಬೆಳಗಾವಿ, ಎ.19: ಅಶ್ಲೀಲ ಸೀಡಿ ಪ್ರಕರಣ ಸಂಬಂಧ ತನಿಖೆ ಸಂದರ್ಭದಲ್ಲಿ ಕೋವಿಡ್ ಸೋಂಕಿಗೆ ಗುರಿಯಾಗಿದ್ದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ನಾಳೆ(ಎ.20) ಸಿಟ್(ವಿಶೇಷ ತನಿಖಾ ತಂಡ) ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್ ಆಗಿದ್ದ ಸಚಿವ ರಮೇಶ್ ಜಾರಕಿಹೊಳಿ ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ಹಂತ-ಹಂತವಾಗಿ ಮೂರು ಬಾರಿ  ಕೋವಿಡ್ ಟೆಸ್ಟ್ ಮಾಡಲಾಗಿದೆ.

ಈ ಮೂರು ವರದಿಯೂ ನೆಗೆಟಿವ್ ಬಂದಿದೆ. ಹೀಗಾಗಿ, ರಮೇಶ್ ಜಾರಕಿಹೊಳಿ ಕೋವಿಡ್‍ಯಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಆದರೆ, ನಿಶಕ್ತಿ ಹೆಚ್ಚಾಗಿರುವ ಕಾರಣ ಮತ್ತಷ್ಟು ದಿನ ವಿಶ್ರಾಂತಿ ಪಡೆಯುವಂತೆ ರಮೇಶ್ ಜಾರಕಿಹೊಳಿಗೆ ಸಲಹೆ ನೀಡಲಾಗಿದೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಇನ್ನು, ಸೀಡಿ ಸಂಬಂಧ ಎ.20ರಂದು ಸಂಜೆ 4ಕ್ಕೆ ವಿಚಾರಣೆಗೆ ಹಾಜರಾಗುವಂತೆ ಕೆಲ ದಿನಗಳ ಹಿಂದೆಯೇ ರಮೇಶ್ ಜಾರಕಿಹೊಳಿಗೆ ಸಿಟ್ ನೋಟಿಸ್ ನೀಡಿತ್ತು. ಹಾಗಾಗಿ, ತನಿಖಾಧಿಕಾರಿಗಳ ಮುಂದೆ ಅವರು ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News