ರಾಜ್ಯದಲ್ಲಿ ಆಮ್ಲಜನಕದ ಕೊರತೆ ಇಲ್ಲ: ಸಚಿವ ಜಗದೀಶ್ ಶೆಟ್ಟರ್

Update: 2021-04-19 16:47 GMT

ಬೆಂಗಳೂರು, ಎ. 19: ರಾಜ್ಯದಲ್ಲಿ ಆಮ್ಲಜನಕದ ಉತ್ಪಾದನೆ ಮಾಡಲಾಗುತ್ತಿದ್ದು, ಕೊರತೆ ಇಲ್ಲ. ರಾಜ್ಯದ ಇತರೆ ಜಿಲ್ಲೆಗಳಿಗೆ ಹೊರತುಪಡಿಸಿದರೆ ಬೆಂಗಳೂರು ನಗರದಲ್ಲಿರುವ ಆಕ್ಸಿಜನ್ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಕೋವಿಡ್ ರೋಗಿಗಳಿಗೆ ಆಮ್ಲಜನಕ ಪೂರೈಕೆ ಮತ್ತು ಲಭ್ಯತೆಯ ಬಗ್ಗೆ ಚರ್ಚೆ ನಡೆಸಲು ಆರೋಗ್ಯ ಸಚಿವ ಡಾ ಸುಧಾಕರ್ ಉಪಸ್ಥಿತಿಯಲ್ಲಿ ಸಭೆ ನಡೆಸಿದ ಅವರು, ಬೆಂಗಳೂರು ನಗರಕ್ಕೆ ಹೆಚ್ಚಿನ ಆಮ್ಲಜನಕದ ಅವಶ್ಯಕತೆ ಕಂಡುಬರುತ್ತಿದೆ. ರಾಜ್ಯದಲ್ಲಿ ಆಮ್ಲಜನಕದ ಕೊರತೆ ಇಲ್ಲ. ರಾಜ್ಯಕ್ಕೆ ಅಗತ್ಯವಿರುವಷ್ಟು ಆಮ್ಲಜನಕದ ಉತ್ಪಾದನೆ ರಾಜ್ಯದಲ್ಲಿ ಆಗುತ್ತಿದೆ ಎಂದರು.

ಸಿಲಿಂಡರ್ ಗಳ ಕೊರತೆ ಇದ್ದು, ಅದನ್ನು ನಿವಾರಿಸುವ ನಿಟ್ಟಿನಲ್ಲಿ ಈಗಾಗಲೇ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ. ನಗರಕ್ಕೆ ತಲುಪುವ ಆಮ್ಲಜನಕವನ್ನು ಸರಿಯಾದ ರೀತಿಯಲ್ಲಿ ಹಾಗೂ ಪ್ರಮಾಣದಲ್ಲಿ ಆಸ್ಪತ್ರೆಗಳಿಗೆ ತಲುಪಿಸಲು ವಿಧಾನವನ್ನು ರೂಪಿಸುವ ಅಗತ್ಯದೆ ಇದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದೇವೆ. ಆಮ್ಲಜನಕ ಉತ್ಪಾದನೆ ಮಾಡುವ ಉತ್ಪಾದಕರೊಂದಿಗೂ ಸಮಾಲೋಚನೆ ನಡೆಸಿದ್ದು, ಜನರ ಆರೋಗ್ಯ ಕಾಪಾಡುವುದು ಮೊದಲ ಆದ್ಯತೆ ಆಗಿದೆ. ಈ ನಿಟ್ಟಿನಲ್ಲಿ ಆಸ್ಪತ್ರೆಗಳಿಗೆ ಬೇಕಾಗಿರುವ ಆಮ್ಲಜನಕದ ಪೂರೈಕೆ ಮಾಡಬೇಕು, ಕೈಗಾರಿಕೆಗಳಿಗೆ ಆಮ್ಲಜನಕ ಪೂರೈಸುವುದನ್ನು ಕಡಿಮೆ ಮಾಡಬೇಕು ಎಂದು ಅವರು ಹೇಳಿದರು.

ಆರೋಗ್ಯ ಸಚಿವ ಡಾ. ಸುಧಾಕರ್ ಮಾತನಾಡಿ, ರಾಜ್ಯದಲ್ಲಿ ಉತ್ಪಾದನೆ ಆಗುತ್ತಿರುವ ಆಮ್ಲಜನಕವನ್ನು ಅಕ್ಕ-ಪಕ್ಕದ ರಾಜ್ಯಗಳಿಗೂ ಕಳುಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುವ ನಿಟ್ಟಿನಲ್ಲಿ ರಾಜ್ಯದಲ್ಲೇ ಅದರ ಉಪಯೋಗ ಮಾಡಿಕೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ಕಾರ್ಖಾನೆಗಳಿಗೆ ಅಗತ್ಯ ಸೂಚನೆ ನೀಡಬೇಕು. ಅಲ್ಲದೆ, ರಾಜ್ಯಕ್ಕೆ ಬೇಕಾಗಿರುವ ಸಿಲಿಂಡರ್ ಗಳನ್ನು ಒದಗಿಸುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.

ಸಭೆಯಲ್ಲಿ ಆಕ್ಸಿಜನ್ ಉತ್ಪಾದಕರು ಹಾಗೂ ಪೂರೈಕೆ ಸಂಸ್ಥೆಗಳ ಪ್ರತಿನಿಧಿಗಳು, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಡಾ.ರಾಜ್‍ಕುಮಾರ್ ಖತ್ರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News