ಚುನಾಯಿತ ಪ್ರತಿನಿಧಿಗಳ ಸರಕಾರ ಇರುವಾಗ ರಾಜ್ಯಪಾಲರು ಸಭೆ ಕರೆದಿರುವುದೇಕೆಂದು ಅರ್ಥವಾಗುತ್ತಿಲ್ಲ: ಸಚಿವ ಈಶ್ವರಪ್ಪ

Update: 2021-04-20 06:59 GMT

ಶಿವಮೊಗ್ಗ, ಎ.20: ಕೋವಿಡ್ ನಿಯಂತ್ರಣಕ್ಕೆ ಚುನಾಯಿತ ಪ್ರತಿನಿಧಿಗಳ ಸರ್ಕಾರ ಇರುವ ಸಂದರ್ಭದಲ್ಲಿ ರಾಜ್ಯಪಾಲರನ್ನು ಸಭೆಗೆ ಕರೆದಿರುವುದು ಆಶ್ಚರ್ಯವನ್ನುಂಟು ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿಂದು ರಾಜ್ಯದಲ್ಲಿ ಕೊರೋನ ನಿಯಂತ್ರಣಕ್ಕೆ ರಾಜ್ಯಪಾಲರ ಮಧ್ಯಪ್ರವೇಶ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕೋವಿಡ್ ನಿಯಂತ್ರಣಕ್ಕೆ ರಾಜ್ಯಪಾಲರು ನೇರವಾಗಿ ಬಂದಿರುವುದು ಆಶ್ಚರ್ಯವಾಗಿದೆ. ಚುನಾಯಿತ ಪ್ರತಿನಿಧಿಗಳ ಸರ್ಕಾರ ಇರುವ ಸಂದರ್ಭದಲ್ಲಿ ಅವರು ಸಭೆ ಯಾವುದಕ್ಕೆ ಕರೆದಿದ್ದಾರೋ ಅರ್ಥವಾಗುತ್ತಿಲ್ಲ ಎಂದರು.

ಸಿಎಂ, ವಿಪಕ್ಷ ನಾಯಕರು ಸೇರಿದಂತೆ ಹಲವರನ್ನು ಸಭೆಗೆ ಕರೆದಿದ್ದಾರೆ. ಇದು ಒಳ್ಳೆಯದೇ. ರಾಜ್ಯಪಾಲರು ಸಭೆ ಕರೆಯಬಾರದು ಎಂದು ಹೇಳುತ್ತಿಲ್ಲ. ಆದರೂ ಇದು ರಾಜ್ಯದಲ್ಲಿ ಒಂದು ಹೊಸ ವ್ಯವಸ್ಥೆಗೆ ನಾಂದಿಯಾಯಿತೇ ಎಂಬ ಅನುಮಾನ ಉಂಟಾಗಿದೆ ಎಂದು ಹೇಳಿದರು.

ಕೋವಿಡ್ ಸೋಂಕು ವೇಗವಾಗಿ ಪ್ರಸರಣಗೊಳ್ಳುತ್ತಿರುವುದನ್ನು ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಿ ಸಭೆ ಕರೆದಿರಬಹುದು. ಚುನಾಯಿತ ಪ್ರತಿನಿಧಿಗಳು ಜಾಗೃತಿ ಆಗಬೇಕು ಅನ್ನೊ ಉದ್ದೇಶದಿಂದ ಕರೆದಿರಬಹುದು. ಅವರು ಏನೇ ಮಹತ್ವದ ತೀರ್ಮಾನ ಕೈಗೊಂಡರೂ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದರು.

ಲಾಕ್ ಡೌನ್ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ರಾಜ್ಯದಲ್ಲಿ ಲಾಕ್ ಡೌನ್ ಆವಶ್ಯಕತೆಯಿಲ್ಲ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೂ, ರಾಜ್ಯಪಾಲರು ತೆಗೆದುಕೊಂಡ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿರುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News