ಸಚಿವರು ಆಗಮಿಸುವ ಮಾಹಿತಿ ಮುಡಾ ಅಧ್ಯಕ್ಷರಿಗೆ ಸಿಗುತ್ತದೆ, ಶಾಸಕನಿಗೆ ಏಕಿಲ್ಲ: ಚಾಮರಾಜ ಶಾಸಕ ಅಸಮಾಧಾನ

Update: 2021-04-20 09:40 GMT

ಮೈಸೂರು, ಎ.20: ''ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಮೈಸೂರಿಗೆ ಬರುವುದು, ಎಲ್ಲಿಗೆ ಭೇಟಿ ನೀಡುತ್ತಾರೆ ಎಂಬ ಮಾಹಿತಿ ಮುಡಾ ಅಧ್ಯಕ್ಷರಿಗೆ ಗೊತ್ತಾಗುತ್ತದೆ, ನನ್ನ ಕ್ಷೇತ್ರದ ವ್ಯಾಪ್ತಿಗೆ ಭೇಟಿ ನೀಡಿದರೂ ಸ್ಥಳೀಯ ಶಾಸಕನಾದ ನನಗೆ ಮಾಹಿತಿ ದೊರೆಯುವುದಿಲ್ಲ, ಹಾಗಿದ್ದ ಮೇಲೆ ನಾನು ಏಕೆ ಸಚಿವರೊಂದಿಗೆ ಇರಬೇಕು?" ಎಂದು ಸಚಿವ ಎಸ್.ಟಿ.ಸೋಮಶೇಖರ್ ಆಪ್ತ ಸಹಾಯಕನ ಬಳಿ ಅಸಮಾಧಾನಗೊಂಡು ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್.ನಾಗೇಂದ್ರ ಹೊರ ಹೋದ ಘಟನೆ ನಡೆಯಿತು.

ಕೆ.ಆರ್. ಆಸ್ಪತ್ರೆಯಲ್ಲಿರುವ ಆಕ್ಸಿಜನ್ ಪ್ಲಾಂಟ್ ಗೆ ಸಂಸದ ಪ್ರತಾಪ್ ಸಿಂಹ ಮಂಗಳವಾರ ಭೇಟಿ ನೀಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಹ ಸಂಸದರ ಒಟ್ಟಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಶಾಸಕರ ಅಸಮಾಧಾನಕ್ಕೆ ಕಾರಣವಾಯಿತು.

 ಕೊರೋನಾ ನಿಯಂತ್ರಣ ಸಂಬಂಧ ಆಕ್ಸಿಜನ್ ನೀಡಿಕೆಯ ಮಾಹಿತಿ ಪಡೆಯಲು  ನಗರದ ಕೆ.ಆರ್.ಆಸ್ಪತ್ರೆಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ದಿಢೀರ್ ಭೇಟಿ ನೀಡಿ ಪರಿಶೀಲಿಸುವ ವೇಳೆ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಬಿಜೆಪಿ ಶಾಸಕ ಎಲ್.ನಾಗೇಂದ್ರ ನನಗೆ ಮಾಹಿತಿಯೇ ಇಲ್ಲ ಎಂದು ಸಚಿವರ ಆಪ್ತ ಸಹಾಯಕನ ಮುಂದೆ ತಮ್ಮ ಸಿಟ್ಟನ್ನು ಪ್ರದರ್ಶಿಸಿದರು.

ಇದಕ್ಕೆ ಸಮಜಾಯಿಷಿ ಕೊಡಲು ಮುಂದಾದ ಸಚಿವರ ಆಪ್ತ ಸಹಾಯಕ ಸಚಿವರು ಆಗಮಿಸುವ ಮಾಹಿತಿ ಇರಲಿಲ್ಲ, ದಿಢೀರನೆ ಬಂದಿದ್ದಾರೆ ಎಂದರು. ಈ ವೇಳೆ ಸಚಿವರ ಜೊತೆಗೆ ಇದ್ದ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಅವರನ್ನು ಕಂಡು ಕೋಪಗೊಂಡ ಶಾಸಕ ಎಲ್‌.ನಾಗೇಂದ್ರ, ಮುಡಾ ಅಧ್ಯಕ್ಷರಿಗೆ ಸಚಿವರು ಬರುವ ಮಾಹಿತಿ ಇರುತ್ತದೆ, ಸ್ಥಳೀಯ ಶಾಸಕನಾದ ನನಗೆ ಮಾಹಿತಿ ದೊರೆಯುವುದಿಲ್ಲ. ಹಾಗಿದ್ದ ಮೇಲೆ ನಾನು ಏಕೆ ಬರಬೇಕು ಎಂದು ಆಕ್ರೋಶಗೊಂಡು ಅಲ್ಲಿಂದ ಹೊರಟು ಹೋದರು.

ಸಚಿವ ಎಸ್.ಟಿ.ಸೋಮಶೇಖರ್ ಮಾತ್ರ ನನಗೇನು ಗೊತ್ತೇ ಇಲ್ಲ ಎಂಬಂತೆ ಜಿಲ್ಲಾಧಿಕಾರಿ, ಸಂಸದ ಪ್ರತಾಪ್ ಸಿಂಹ ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News