×
Ad

'ರಾಜ್ಯಪಾಲರಿಂದ ಸರ್ವಪಕ್ಷ ಸಭೆ' ಬಿಎಸ್‌ವೈ ಮುಕ್ತ ಬಿಜೆಪಿ ಅಭಿಯಾನದ ಭಾಗವೇ: ಕಾಂಗ್ರೆಸ್ ಪ್ರಶ್ನೆ

Update: 2021-04-20 16:21 IST

ಬೆಂಗಳೂರು, ಎ.20: ಯುಪಿಯ ಬಿಜೆಪಿ ಸರ್ಕಾರದ ಕೊರೋನ ನಿರ್ವಹಣೆಯ ವೈಫಲ್ಯಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ. ಸುಡುಗಾಡಲ್ಲೂ ಜಾಗವಿಲ್ಲದ ಸ್ಥಿತಿ ನಿರ್ಮಿಸಿ, ತನ್ನ ವೈಫಲ್ಯ ಮುಚ್ಚಿಕೊಳ್ಳಲು ಸ್ಮಶಾನಕ್ಕೆ ತಗಡು ಮುಚ್ಚಿದ ತಗಡು ಯೋಗಿ ಇಲ್ಲಿನ ಬಿಜೆಪಿ ನಾಯಕರಿಗೆ "ಮಾಡೆಲ್" ಆಗಿರುವುದರಲ್ಲಿ ಯಾವ ಅತಿಶಯೋಕ್ತಿ ಇಲ್ಲ. ಏಕೆಂದರೆ ಇವರೂ ಅಂತಹ ಅಯೋಗ್ಯರೆ! ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಯಾವ ಕೊರತೆಯೂ ಇಲ್ಲ ಎಲ್ಲವೂ ಸುಳ್ಳು ವದಂತಿಗಳು ಎಂದು ವಾಸ್ತವವನ್ನು ಮುಚ್ಚಿಡಲು, ಸತ್ಯವನ್ನೇ ಸುಳ್ಳು ಮಾಡುತ್ತಿದ್ದ ಬಿಜೆಪಿ ಜನರ ಮುಂದೆ ಬೆತ್ತಲಾಗಿದೆ. ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲವೇ ಇಲ್ಲ, ವಿಪಕ್ಷಗಳ ಸುಳ್ಳು ಹಬ್ಬಿಸುತ್ತಿವೆ ಎಂದಿದ್ದ ಬಿಜೆಪಿ ಉತ್ತರಿಸಲಿ, ಕೊರತೆ ಇಲ್ಲವೆಂದ ಮೇಲೆ ಸಿಎಂ ಕೇಂದ್ರಕ್ಕೆ ಪತ್ರ ಬರೆದಿದ್ದೇಕೆ? ಎಂದು ಪ್ರಶ್ನಿಸಿದೆ.

ರಾಜ್ಯಪಾಲರು ಸರ್ವಪಕ್ಷ ಸಭೆ ಕರೆದಿರುವುದು ಏನು ಸೂಚಿಸುತ್ತದೆ? ರಾಜ್ಯದಲ್ಲಿ ಚುನಾಯಿತ ಸರ್ಕಾರವಿಲ್ಲವೇ? ಸರ್ಕಾರದ ಅಸಮರ್ಥವೇ ಅಥವಾ ಬಿಎಸ್ವೈ ಮುಕ್ತ ಬಿಜೆಪಿ ಅಭಿಯಾನದ ಭಾಗವೇ? ಸರ್ಕಾರಕ್ಕೆ ವಿಪಕ್ಷಗಳನ್ನು ಎದುರಿಸುವ ಮುಖವಿಲ್ಲವೇ? ಅಥವಾ ಪರಿಸ್ಥಿತಿ ಎದುರಿಸಲಾಗದೆ ಕೈ ಚೆಲ್ಲಿದೆಯೇ? ಇಂತಹ ಮುಖಹೇಡಿ ಸರ್ಕಾರದಿಂದ ಜನರ ಜೀವ ಉಳಿಸುವುದು ಸಾಧ್ಯವಿಲ್ಲ ಎಂದು ಟೀಕಿಸಿದೆ.

ಆಕ್ಸಿಜನ್ ಬೇಡಿಕೆ ಹೆಚ್ಚಿದೆ, ಪೂರೈಕೆ ಕಡಿಮೆ ಇದೆ, ಇದ್ದಿದ್ದೂ ಕಾಳ ಸಂತೆಯ ಪಾಲಾಗುತ್ತಿದೆ. ಹೀಗಿರುವಾಗ ಬಿಜೆಪಿ ಸರ್ಕಾರ ಕಾಳ ಸಂತೆಯನ್ನು ನಿಯಂತ್ರಿಸಿ, ಉತ್ಪಾದನೆ ಹೆಚ್ಚಿಸಿ ಹಾಗೂ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುವುದನ್ನ ಬಿಟ್ಟು ವಾರ್ ರೂಮ್ ಎನ್ನುವ ಕಣ್ಣೊರೆಸುವ ಕೆಲಸದಿಂದ ನಯಾಪೈಸೆ ಉಪಯೋಗವಾಗುತ್ತಿಲ್ಲ ಎಂದು ಕಿಡಿಕಾರಿದೆ.

ಕೊರೊನದಿಂದ ಆರ್ಥಿಕ ಚಟುವಟಿಕೆಗಳಿಗೆ ಹಿನ್ನೆಡೆಯಾಗಿದೆ, ಉದ್ಯೋಗ ನಷ್ಟವಾಗುತ್ತಿವೆ. ಈ ಹೊತ್ತಿನಲ್ಲಿ ಜನತೆಗೆ ಆರ್ಥಿಕ ಪ್ಯಾಕೇಜ್ ಘೋಷಿಸಿ ನೆರವಾಗಬೇಕಿದ್ದ ಬಿಜೆಪಿ ಸರ್ಕಾರ ಇದ್ದ ಅನ್ನಭಾಗ್ಯ ಯೋಜನೆಯನ್ನೂ ಕಡಿತಗೊಳಿಸುತ್ತಿರುವುದು ಅಮಾನವೀಯ. ನೆರವು ನೀಡಬೇಕಾದ ಸರ್ಕಾರ, ಬಡವರ ಹೊಟ್ಟೆ ಮೇಲೆ ಹೊಡೆಯುವುದನ್ನ ಜನತೆ ಕ್ಷಮಿಸುವುದಿಲ್ಲ.

ಎಲ್ಲಾ ವಯಸ್ಕರಿಗೆ ಲಸಿಕೆ ಘೋಷಿಸಿದ ಕೇಂದ್ರ ಸರ್ಕಾರ ಸ್ಪಷ್ಟ ರೂಪುರೇಷೆಗಳೇ ಹೊಂದಿಲ್ಲ. ಮುಕ್ತ ಮಾರುಕಟ್ಟೆಯಲ್ಲಿ ಲಸಿಕೆ ಬೆಲೆ ನಿಗದಿ ಇಲ್ಲ. ಲಸಿಕೆ ಉತ್ಪಾದನೆ ವೃದ್ಧಿಗೆ ಕ್ರಮವಿಲ್ಲ. ಬಡವರಿಗೆ ಉಚಿತ ಲಸಿಕೆಯ ಭರವಸೆ ಇಲ್ಲ. ಲಸಿಕೆಯ ಮಾರುಕಟ್ಟೆ ನಿಯಂತ್ರಣಕ್ಕೆ ಕ್ರಮವಿಲ್ಲ. ಎಲ್ಲಾ ಜುಮ್ಲಾಗಳಂತೆ ಇದೂ ಮತ್ತೊಂದು #ವ್ಯಾಕ್ಸಿನ್ ಜುಮ್ಲಾ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News