''ಶಿವಸೇನೆಯ ಮೈತ್ರಿಯಿಂದ ಹೊರಬರುವಿರಾ ಅಥವಾ ಗಾಂಧಿ ಕುಟುಂಬದ ಆದೇಶದಂತೆ ತಲೆತಗ್ಗಿಸಿ ನಿಲ್ಲುವಿರಾ?''

Update: 2021-04-20 11:03 GMT

ಬೆಂಗಳೂರು, ಎ.20: ಕೋವಿಡ್‌ ಸಂಕಷ್ಟದ ನಡುವೆಯೂ ಕಾಂಗ್ರೆಸ್ ಪಕ್ಷದ‌ ಭಾಗವಾಗಿರುವ ಶಿವಸೇನೆಯ ಸಂಜಯ್‌ ರಾವತ್ ಅವರು‌ ಕನ್ನಡಿಗರಿಗೆ ಮುಂಬೈಯಲ್ಲಿ ವ್ಯವಹಾರ ನಡೆಸಲು ಬಿಡುವುದಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ. ತಾವೇ ಕನ್ನಡ ನಾಡಿಗಾಗಿ ಶ್ರಮಿಸುತ್ತಿರುವವರು ಎಂದು ಬಿಂಬಿಸಿಕೊಳ್ಳುವ ರಾಜ್ಯದ ಕಾಂಗ್ರೆಸ್ ಪಕ್ಷದ ನಾಯಕರು ಇದಕ್ಕೆ ಸಮ್ಮತಿಸುತ್ತಾರೆಯೇ? ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಮೈತ್ರಿಯ ಭಾಗವಾಗಿರುವ ಶಿವಸೇನೆಯ ಸಖ್ಯವನ್ನು ತೊರೆಯಲು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರು ಕೇಂದ್ರದ ಕಾಂಗ್ರೆಸ್ ನಾಯಕರಿಗೆ ಒತ್ತಾಯಿಸುವ ಧೈರ್ಯ ತೋರಬಹುದೇ? ಕನ್ನಡಗಿರಿಗೆ ಅವಮಾನ ಮಾಡುತ್ತಿರುವ ಶಿವಸೇನೆಯ ಮೈತ್ರಿಯಿಂದ ಹೊರಬರುವಿರಾ ಅಥವಾ ದೆಹಲಿಯ ನಕಲಿ ಗಾಂಧಿ ಕುಟುಂಬದಿಂದ ಬರುವ ಆದೇಶದಂತೆ ಶಿವಸೇನೆಯ ಮುಂದೆ ತಲೆತಗ್ಗಿಸಿ ನಿಲ್ಲುವಿರಾ? ಎಂದು ಖಾರವಾಗಿ ಪ್ರಶ್ನಿಸಿದೆ.

ಪ್ರಧಾನಿ, ಮುಖ್ಯಮಂತ್ರಿ ಮೊದಲು ಲಸಿಕೆ ತೆಗೆದುಕೊಂಡಿದ್ದರೆ ಡಿ.ಕೆ ಶಿವಕುಮಾರ್ ಅವರು ಜನರನ್ನು ಕಡೆಗಣಿಸಿದ್ದೀರಿ ಎಂದು ಟೀಕಿಸುತ್ತಿದ್ದರು. ಜನರಿಗೆ ಮೊದಲು ಲಸಿಕೆ ನೀಡಿದಾಗ ಜನರ ಮೇಲೆ ಪ್ರಯೋಗಿಸುತ್ತಿದ್ದೀರಿ ಎನ್ನುತ್ತಿದ್ದಿರಿ. ಕೊರೋನ ಯೋಧರಿಗೆ ಮೊದಲು ಲಸಿಕೆ ಪಡೆಯುವ ಅವಕಾಶ ನೀಡಿದ್ದು ಧೈರ್ಯ ತುಂಬಲು ಹೊರತು ಆಟವಾಡುವುದಕ್ಕಲ್ಲ.

ಪ್ರಧಾನಿ, ಮುಖ್ಯಮಂತ್ರಿಗಳು ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಲಸಿಕೆಯನ್ನು ತೆಗೆದುಕೊಂಡಿದ್ದಾರೆ. ಕಾಂಗ್ರೆಸ್‌ ಏನು ಮಾಡುತ್ತಿದೆ? ನಕಲಿ ಗಾಂಧಿ ಕುಟುಂಬ ಯಾವ ದೇಶದ ಲಸಿಕೆಗಾಗಿ ಕಾಯುತ್ತಿದೆ? ಲಸಿಕೆಯ ಮೇಲೆ ಇನ್ನೂ ಭರವಸೆ ಬಂದಿಲ್ಲವೇ? ನೀವು ಲಸಿಕೆ ತೆಗೆದುಕೊಂಡಿದ್ದೀರಾ ಡಿ.ಕೆ ಶಿವಕುಮಾರ್? ಹುಡುಗಾಟ ನಿಲ್ಲಿಸಿ ಡಿಕೆಶಿ! ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News