ಪ್ರಧಾನಿ ಸೂಚನೆ ಹಿನ್ನೆಲೆಯಲ್ಲಿ ರಾಜ್ಯಪಾಲರ ಸಭೆ: ಗೃಹ ಸಚಿವ ಬೊಮ್ಮಾಯಿ ಸ್ಪಷ್ಟನೆ

Update: 2021-04-20 11:48 GMT

ಬೆಂಗಳೂರು, ಎ. 20: ರಾಜ್ಯದಲ್ಲಿ ಕೋವಿಡ್ ಸೋಂಕು ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ರಾಜಕಾರಣ ಮಾಡುವುದು ಸರಿಯಲ್ಲ. ಎಲ್ಲರೂ ಒಗ್ಗಟ್ಟಿನಿಂದ ಸೋಂಕು ನಿಯಂತ್ರಿಸಲು ಆಸ್ಥೆ ವಹಿಸಬೇಕು ಎಂದು ಗೃಹ ಸಚಿವ ಬವಸರಾಜ ಬೊಮ್ಮಾಯಿ ಇಂದಿಲ್ಲಿ ಆಕ್ಷೇಪಿಸಿದ್ದಾರೆ.

ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲರೂ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಸೋಂಕು ನಿಯಂತ್ರಣದಲ್ಲಿ ಸಫಲತೆ ಕಾಣಲು ಸಾಧ್ಯ. ಕೇವಲ ತಪ್ಪು ಕಂಡು ಹಿಡಿಯುವುದರಿಂದ ಉಪಯೋಗವಿಲ್ಲ. ಪ್ರಧಾನಿ ಮೋದಿ ಅವರು ಎಲ್ಲ ರಾಜ್ಯಗಳ ರಾಜ್ಯಪಾಲರೊಂದಿಗೆ ಮಾತನಾಡಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರಕಾರ ಹಾಗೂ ವಿಪಕ್ಷಗಳ ಜೊತೆ ಸಮಾಲೋಚನೆ ನಡೆಸುವಂತೆ ಸೂಚನೆ ಕೊಟ್ಟಿದ್ದಾರೆ. ಆ ಹಿನ್ನೆಲೆಯಲ್ಲಿ ರಾಜ್ಯಪಾಲರು ಸಭೆ ನಡೆಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ರಾಜ್ಯಪಾಲರು, ವಿಪಕ್ಷ ನಾಯಕರೂ ಸೇರಿದಂತೆ ಸರ್ವಪಕ್ಷಗಳ ನಾಯಕರ ಸಭೆ ಕರೆದಿರುವ ಬಗ್ಗೆ ರಾಜ್ಯಪಾಲರ ಆಡಳಿತ ಜಾರಿಗೆ ಬರುವ ರೀತಿ ಕಾಣುತ್ತಿದೆ ಎಂದು ಟೀಕಿಸಿರುವುದು ಸರಿಯಲ್ಲ. ರಾಜ್ಯದಲ್ಲಿ ಚುನಾಯಿತ ಸರಕಾರವಿದ್ದಾಗ ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷರಾದವರು ಈ ರೀತಿಯ ಹೇಳಿಕೆ ನೀಡುವುದು ಸಮಂಜಸವಲ್ಲ ಎಂದ ಅವರು, ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರವಿದೆ. ಅಲ್ಲಿ ರಾಜ್ಯಪಾಲರು ಸಭೆ ನಡೆಸಿದರೆ ರಾಜ್ಯಪಾಲರ ಆಡಳಿತ ಬಂದಂತಾಯಿತೇ? ಎಂದು ತಿರುಗೇಟು ನೀಡಿದರು.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಮೈತ್ರಿ ಸರಕಾರವಿದೆ. ಅಲ್ಲಿ ರಾಜ್ಯಪಾಲರು ಸಭೆ ನಡೆಸಿದರೆ ರಾಜ್ಯಪಾಲರ ಆಡಳಿತ ಎಂದು ಭಾವಿಸಬೇಕೆ? ಪ್ರತಿಯೊಂದು ವಿಚಾರದಲ್ಲೂ ರಾಜಕಾರಣ ಮಾಡುವುದು ಸರಿಯಲ್ಲ. ಮೊಸರಲ್ಲಿ ಕಲ್ಲು ಹುಡುಕಬಾರದು ಎಂದ ಅವರು, ಕೋವಿಡ್ ಸೋಂಕು ಕಳೆದ ಬಾರಿಗಿಂತ ವೇಗವಾಗಿ ಹರಡುತ್ತಿದೆ. ಕೇವಲ ಮೂರು ವಾರದಲ್ಲಿ ತೀವ್ರವಾಗಿ ಹೆಚ್ಚಳವಾಗಿದೆ. ಆದರೂ ಸಾವಿರಾರು ಜನರಿಗೆ ಹಾಸಿಗೆ ಹಾಗೂ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News