ಕೊರೋನ ಸಾವುಗಳು ಸರಕಾರಿ ಪ್ರಾಯೋಜಿತ ಕೊಲೆ: ಎಸ್.ಆರ್.ಪಾಟೀಲ್ ಆರೋಪ

Update: 2021-04-20 11:58 GMT

ಬೆಂಗಳೂರು, ಎ.20: ರಾಜ್ಯದಲ್ಲಿ ಕೊರೋನದಿಂದ ಸಂಭವಿಸುತ್ತಿರುವ ಪ್ರತಿ ಸಾವೂ ಕೂಡ ಸರಕಾರಿ ಪ್ರಾಯೋಜಿತ ಕೊಲೆ. ಆಸ್ಪತ್ರೆಗಳಲ್ಲಿ ರೆಮ್ಡಿಸಿವಿರ್ ಇಲ್ಲ, ಬೆಡ್ ಇಲ್ಲ, ಆಕ್ಸಿಜನ್ ಇಲ್ಲ, ವೆಂಟಿಲೇಟರ್ ಇಲ್ಲ, ವ್ಯಾಕ್ಸಿನ್ ಕೊರತೆಯ ಸ್ಥಿತಿ ನಿರ್ಮಾಣವಾಗಿದೆ. ಜನರಿಗೆ ಕನಿಷ್ಠ ಚಿಕಿತ್ಸೆಯನ್ನೂ ನೀಡಲಾಗದ ಈ ಸರಕಾರ ಯಾವ ಪುರುಷಾರ್ಥಕ್ಕೆ ಬೇಕು? ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಟ್ವೀಟ್ ಮಾಡಿದ್ದಾರೆ.

ರಾಜ್ಯದಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಬಿಜೆಪಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕೊರೋನ 2ನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ ನಂತರವೂ ಸರಕಾರ ಎಚ್ಚೆತ್ತುಕೊಳ್ಳದ ಪರಿಣಾಮ ಇವತ್ತು ರಾಜ್ಯದ ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ, ಆಕ್ಸಿಜನ್ ಇಲ್ಲದೇ ಜನ ಸಾಯುವಂತಹ ಪರಿಸ್ಥಿತಿ ನಿರ್ಮಾಣಕ್ಕೆ ಸರಕಾರದ ನಿರ್ಲಕ್ಷ್ಯವೇ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಮೇ ತಿಂಗಳ ಅಂತ್ಯದ ವೇಳೆಗೆ ರಾಜ್ಯದಲ್ಲಿ ಕೊರೋನ ವೈರಸ್‍ನ ತೀವ್ರತೆ ಇನ್ನಷ್ಟು ಹೆಚ್ಚಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಮುಂದೆ ಎದುರಾಗಲಿರುವ ಭೀಕರ ಪರಿಸ್ಥಿತಿಗೆ ಸಜ್ಜಾಗಬೇಕಾದ ಸರಕಾರ ಆಸ್ಪತ್ರೆಗಳಲ್ಲಿ ಬೆಡ್ ಹೆಚ್ಚಳ, ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆ ಮಾಡುವುದು ಬಿಟ್ಟು ಜನರ ಜೀವಗಳ ಜತೆ ಚೆಲ್ಲಾಟವಾಡುತ್ತಿದೆ ಎಂದು ಎಸ್.ಆರ್.ಪಾಟೀಲ್ ದೂರಿದ್ದಾರೆ.

ಬೆಂಗಳೂರು ನಗರದಲ್ಲಂತೂ ಪರಿಸ್ಥಿತಿ ಕೈ ಮೀರಿ ಹೋಗಿದೆ ರೋಗಿಗಳು ಬೆಡ್ ಇಲ್ಲದೇ ಸಾಯುತ್ತಿದ್ದಾರೆ. ಆಕ್ಸಿಜನ್ ಇಲ್ಲದೇ, ವೆಂಟಿಲೇಟರ್ ಇಲ್ಲದೇ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಷ್ಟಾದರೂ ಸರಕಾರ ಏನೂ ಆಗೇ ಇಲ್ಲ, ಆಕ್ಸಿಜನ್ ಕೊರತೆ ಇಲ್ಲ ಎಂದು ಭಂಡತನದ ಮಾತುಗಳನ್ನಾಡುತ್ತಿದೆ ಎಂದು ಅವರು ಕಿಡಿಗಾರಿದ್ದಾರೆ.

ಕೊರೋನ ನಿಯಂತ್ರಣ ಸಂಬಂಧ ಬಿಜೆಪಿ ಸರಕಾರ ಇದುವರೆಗೂ ತೆಗೆದುಕೊಂಡಿರುವ ಯಾವ ಕ್ರಮಗಳೂ ಸಮರ್ಪಕವಾಗಿಲ್ಲ. ಪರಿಸ್ಥಿತಿ ನಿರ್ವಹಣೆಯಲ್ಲಿ ಸರಕಾರ ಖಚಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಂಪೂರ್ಣ ವಿಫಲವಾಗಿದೆ ಎಂದು ಎಸ್.ಆರ್.ಪಾಟೀಲ್ ಆರೋಪಿಸಿದ್ದಾರೆ.

ಹಲವು ರಾಜ್ಯಗಳು ಈಗಾಗಲೇ ಕಠಿಣ ನಿರ್ಬಂಧದ ಕ್ರಮಗಳನ್ನು ತೆಗೆದುಕೊಂಡಿವೆ. ಆದರೆ ಈ ಸರಕಾರ ಯಾವುದೇ ಖಚಿತ ನಿರ್ಧಾರಕ್ಕೆ ಬರುವುದರಲ್ಲಿ ವಿಫಲವಾಗಿದೆ. ಜನ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿರೋ ಪರಿಸ್ಥಿತಿಯಲ್ಲಿ ಸರಕಾರ ಜನರ ಜೀವದೊಂದಿಗೆ ಆಟವಾಡುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News