ಪರೀಕ್ಷೆ ಇಲ್ಲದೆ ತೇರ್ಗಡೆ ಕ್ರಮ ಸ್ವಾಗತಾರ್ಹ: ಶಿಕ್ಷಣ ತಜ್ಞ ನಿರಂಜನಾರಾಧ್ಯ

Update: 2021-04-20 12:57 GMT

ಬೆಂಗಳೂರು, ಎ.20: ರಾಜ್ಯದಲ್ಲಿ 1 ರಿಂದ 9ನೇ ತರಗತಿಯ ಮಕ್ಕಳನ್ನು ಮುಂದಿನ ತರಗತಿಗಳಿಗೆ ಯಾವುದೇ ಆನ್‍ಲೈನ್, ಆಫ್ಲೈನ್  ಪರೀಕ್ಷೆಯಿಲ್ಲದೆ ಮೌಲ್ಯಾಂಕನದ ಮೂಲಕ ಮುಂದಿನ ತರಗತಿಗೆ ತೇರ್ಗಡೆ ಮಾಡಲು ಹೊರಡಿಸಿರುವ ಸರಕಾರದ ಸುತ್ತೋಲೆ ಸ್ವಾಗತಾರ್ಹ ಕ್ರಮವೆಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಿಕ್ಷಣ ಇಲಾಖೆ ಶಿಕ್ಷಣ ಹಕ್ಕು ಕಾಯಿದೆ 2009 ಹಾಗು ನಿಯಮಗಳ ಮೂಲ ಆಶಯದಂತೆ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ(ಸಿಸಿಇ) ಅಡಿಯಲ್ಲಿ ಮಕ್ಕಳ ಕಲಿಕೆಯನ್ನು ಸಮಗ್ರವಾಗಿ ಪರಿಶೀಲಿಸಿ, ಸಿಸಿಇ ಅನ್ವಯ ಹಲವು ಹಂತಗಳಲ್ಲಿ ನಡೆದಿರುವ ಸಂಚಿತ ಕಲಿಕೆ (Cumulative learning) ಹಾಗು ಮಗವಿನ ಸಾಧನೆಯ ಸಂಕ್ಷಿಪ್ತಚಿತ್ರಣ ವನ್ನು ಆಧರಿಸಿ ತೇರ್ಗಡೆ ಮಾಡುವ ತೀರ್ಮಾನ ಶಿಕ್ಷಣದ  ಮೂಲಭೂತ ಹಕ್ಕಿನ ಆಶಯವನ್ನು ಎತ್ತಿ ಹಿಡಿಯುತ್ತದೆ ಎಂದು ತಿಳಿಸಿದ್ದಾರೆ.

ಮಕ್ಕಳನ್ನು ಉತ್ತೀರ್ಣ, ಅನುತ್ತೀರ್ಣ ಎಂದು ಅವೈಜ್ಞಾನಿಕವಾಗಿ ತೀರ್ಮಾನಿಸುವ ಬದಲು, ಮೇಲಿನ ತೇರ್ಗಡೆ ಪ್ರಕ್ರಿಯೆಗೆ ಅನುಸರಿಸುವ ಮಾನದಂಡವನ್ನು ಆಧರಿಸಿ ಮಕ್ಕಳಲ್ಲಿ ಕಂಡುಬರುವ ಕಲಿಕಾ ನ್ಯೂನತೆಯನ್ನು ವಿಷಯವಾರು, ತರಗತಿವಾರು ಗುರುತಿಸಿ, ವಿಶ್ಲೇಷಿಸಿ ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾದ ಕೂಡಲೇ ಮಕ್ಕಳು ಈ ಕಲಿಕಾ ನ್ಯೂನತೆಗಳನ್ನು ಸರಿಪಡಿಸಲು ಶಾಲೆಗಳು ಅಗತ್ಯ ಕ್ರಮ ವಹಿಸುವ ಬಗ್ಗೆ ಸುತ್ತೋಲೆಯಲ್ಲಿ  ಪ್ರಸ್ತಾಪಿಸಿರುವುದು ಮಕ್ಕಳ ಕಲಿಕಾ ದೃಷ್ಟಿಯಿಂದ ಮಹತ್ವದ ಹೆಜ್ಜೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶೈಕ್ಷಣಿಕ ಪ್ರಗತಿಗಾಗಿಯೇ ಇರುವ ಗುಚ್ಛ ಸಂಪನ್ಮೂಲ ಕೇಂದ್ರ(ಸಿಆರ್‍ಸಿ), ಕ್ಷೇತ್ರ ಸಂಪನ್ಮೂಲ ಕೇಂದ್ರ(ಬಿಆರ್‍ಸಿ), ಡಯಟ್ ಮತ್ತು ಡಿಎಸ್‍ಇಆರ್‍ಟಿಗಳು ಈ ಕೆಲಸವನ್ನು ಮೇ1 ರಿಂದಲೇ ಪ್ರಾರಂಭಿಸುವುದು ಸೂಕ್ತ. ಈ ಫಲಿತಾಂಶಗಳ ಕಲಿಕಾ ವಿಶ್ಲೇಷಣೆಗಳ ಆಧಾರದಲ್ಲಿ, ಶಿಕ್ಷಣ ಇಲಾಖೆ ಒಂದು ಕಾರ್ಯಯೋಜನೆ ತಯಾರಿಸಿ, ಶಾಲಾವಾರು ಶಿಕ್ಷಕರು ಮಾಡಿಕೊಳ್ಳಬೇಕಾದ ಸಿದ್ಧತೆ ಹಾಗು ವ್ಯವಸ್ಥೆಗಳನ್ನು ಆನ್‍ಲೈನ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ರಜಾ ಅವಧಿಯಲ್ಲಿ ತರಬೇತಿ ನೀಡಿದಲ್ಲಿ ಶಾಲೆಗಳು ಪುನಾರಂಭವಾದ ತಕ್ಷಣ ಕಾರ್ಯ ಸನ್ನದ್ಧರಾಗಲು ಸಹಾಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News