ಮೃತರಿಗೆ ಗೌರವಯುತ ವಿದಾಯಕ್ಕೆ ಅವಕಾಶ ಸಿಗದಿದ್ದರೆ ಇದ್ಯಾವ ಸೀಮೆ ಸರಕಾರ?: ಡಿ.ಕೆ.ಶಿವಕುಮಾರ್

Update: 2021-04-20 14:29 GMT

ಬೆಂಗಳೂರು, ಎ.20: ಕೋವಿಡ್ ಮೊದಲ ಅಲೆ ಚೀನಾದಿಂದ ಬಂದರೆ, ಎರಡನೇ ಅಲೆ ಇಲ್ಲಿನ ಸರಕಾರಗಳಿಂದ ಬಂದಿದೆ. ಕೋವಿಡ್ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಈ ಸರಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕಮಾರ್ ಕಿಡಿಗಾರಿದರು.

ಮಂಗಳವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಬಾರಿ ಲಾಕ್‍ಡೌನ್ ಮಾಡಿ ಪರಿಸ್ಥಿತಿ ಹೇಗೆ ಹದಗೆಟ್ಟಿತು ಎಂದು ನೋಡಿದ್ದೇವೆ. ಈಗಲೂ ಯಾವ ಸಿದ್ಧತೆಯನ್ನೂ ಮಾಡಿಕೊಂಡಿಲ್ಲ. ಯಾರಿಗೂ ಆರ್ಥಿಕ ಸಹಾಯ ಮಾಡಿಲ್ಲ. ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಲಿಲ್ಲ. ಸರಕಾರದಿಂದ ತೆರಿಗೆ ವಿನಾಯಿತಿ ನೀಡಲು ಆಗಿಲ್ಲ. ಅಷ್ಟದಿಕ್ಪಾಲಕರಲ್ಲಿ ಯಾರಾದರೂ ಒಬ್ಬರು ಮಾತನಾಡುತ್ತಿದ್ದಾರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ನಿಲ್ಲಿಸಲಿ ಎಂಬ ಗೃಹ ಸಚಿವ ಬಸವರಾಜ ಬೊಮ್ಮಾಯಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, 'ವಿರೋಧ ಪಕ್ಷದವರ ಕೆಲಸ ಏನು ಎಂದು ಗೃಹ ಸಚಿವರೇ ತಿಳಿಸಲಿ. ಅವರೇ ನಮಗೆ ಕರೆದು ಪಾಠ ಮಾಡಲಿ' ಎಂದರು.

ವಿರೋಧ ಪಕ್ಷದವರಾಗಿ ನಾವು ಅವರು ಹೇಳಿದಂತೆ ಚಪ್ಪಾಳೆ ತಟ್ಟಬೇಕಾ, ದೀಪ ಹಚ್ಚಬೇಕಾ, ಇಲ್ಲ ಜಾಗಟೆ ಬಾರಿಸಿಕೊಂಡು ಕೂರಬೇಕಾ? ಬಿಜೆಪಿಯವರು ವಿರೋಧ ಪಕ್ಷದಲ್ಲಿದ್ದಾಗ ಏನೇನು ಮಾಡಿದ್ದಾರೆ ಎಂದು ಪ್ರಶ್ನಿಸಿದ ಶಿವಕುಮಾರ್, ವಿರೋಧ ಪಕ್ಷವಾಗಿ ಸಾರ್ವಜನಿಕ ಹಿತಕ್ಕಾಗಿ ಏನು ಮಾಡಬೇಕೋ ಅದನ್ನೆ ನಾವು ಮಾಡುತ್ತಿದ್ದೇವೆ ಎಂದರು.

ಹಾಸಿಗೆ, ಆಕ್ಸಿಜನ್ ಕೊರತೆ ಇಲ್ಲ ಎಂದಾದರೆ, ಯಾವ ಆಸ್ಪತ್ರೆಯಲ್ಲಿ ಲಭ್ಯವಿದೆ ಎಂಬುದರ ಬಗ್ಗೆ ಸಚಿವರು ಮಾಹಿತಿ ನೀಡಲಿ. ಈ ಸರಕಾರ ಇನ್ನು ನಿದ್ದೆಯಿಂದ ಎಚ್ಚೆತ್ತಿಲ್ಲ. 'ರಾಜ್ಯಪಾಲರ ಆಹ್ವಾನದ ಮೇರೆಗೆ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಲಿದ್ದೇವೆ. ರಾಜ್ಯಪಾಲರು ಸರಕಾರದಿಂದ ನೇರವಾಗಿ ಮಾಹಿತಿ ಪಡೆಯಬಹುದಿತ್ತು. ಆದರೆ ಮೊದಲ ಬಾರಿಗೆ ರಾಜ್ಯಪಾಲರು ವಿರೋಧ ಪಕ್ಷ ಹಾಗೂ ಸ್ಪೀಕರ್ ಅವರನ್ನು ಸೇರಿಸಿ ಸಭೆ ಕರೆದಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ನಮ್ಮ ರಾಜ್ಯ ಪುದುಚೇರಿ, ದಿಲ್ಲಿಯಂತೆ ಕೇಂದ್ರಾಡಳಿತ ಪ್ರದೇಶವಲ್ಲ. ನಮ್ಮ ಸಂವಿಧಾನದ ಹಕ್ಕಿನಲ್ಲಿ, ಯಾವ ಕಾನೂನಿನ ಅನ್ವಯ ನಮ್ಮ ಜತೆ ಚರ್ಚೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಮುಖ್ಯಮಂತ್ರಿ ಆಸ್ಪತ್ರೆಯಲ್ಲಿದ್ದು, ಅವರ ಆರೋಗ್ಯ ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಸರಕಾರ ಇರುವಾಗ ರಾಜ್ಯಪಾಲರು ಈ ರೀತಿ ಹಸ್ತಕ್ಷೇಪ ಮಾಡಲು ಯಾವ ಕಾನೂನು ಬಳಸಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಅವರು ತಿಳಿಸಿದರು.

ಕಾನೂನು ಸಚಿವರು ನಮಗೆ ಈ ಬಗ್ಗೆ ಬೆಳಕು ಚೆಲ್ಲಿದರೆ ತಿಳಿದುಕೊಳ್ಳುತ್ತೇವೆ. ನಾವು ಸಭೆಯಲ್ಲಿ ಭಾಗವಹಿಸಿ ನಮ್ಮ ಸಲಹೆ ನೀಡುತ್ತೇವೆ. ನಾವು ಸರಕಾರಕ್ಕೆ ಎಲ್ಲ ಸಹಕಾರ ಕೊಟ್ಟಿದ್ದೇವೆ. ಕೇಂದ್ರ ಸರಕಾರ 20 ಲಕ್ಷ ಕೋಟಿ ರೂ., ರಾಜ್ಯ ಸರಕಾರ 1600 ಕೋಟಿ ರೂ.ಪ್ಯಾಕೇಜ್ ಘೋಷಿಸಿದಾಗ ಯಾರಿಗೆ ತಲುಪಿದೆ ಅಂತ ಪಟ್ಟಿ ಕೇಳಿದ್ದೇವೆ. ಈ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಆಗ್ರಹಿಸಿದ್ದೇವೆ. ಆದರೆ ಸರಕಾರ ಈ ಬಗ್ಗೆ ಮಾಹಿತಿ ಕೊಟ್ಟಿಲ್ಲ ಎಂದು ಅವರು ಹೇಳಿದರು.

ತಾಂತ್ರಿಕ ಸಮಿತಿಯು ಎರಡನೇ ಅಲೆ ಬಗ್ಗೆ ನವೆಂಬರ್ 30ರಂದೆ ಎಚ್ಚರಿಕೆ ನೀಡಿತ್ತು. ಪ್ರತಿನಿತ್ಯ 1.25 ಲಕ್ಷ ಪರೀಕ್ಷೆ ನಡೆಸಿ ಎಂಬುದು ಸೇರಿ 17 ಶಿಫಾರಸ್ಸು ಮಾಡಿತ್ತು. ಈ ಎಚ್ಚರಿಕೆ ನೀಡಿದ್ದರೂ ಸರಕಾರ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಸರಕಾರ ಅಸ್ತಿತ್ವದಲ್ಲಿ ಇಲ್ಲ ಎಂದು ರಾಜ್ಯಪಾಲರು ಸಭೆ ಕರೆದಿದ್ದಾರೆ ಎಂದು ಅವರು ಟೀಕಿಸಿದರು.

ಔಷಧಿ, ಲಸಿಕೆಗಳು ಎಷ್ಟು ಕಡೆ ತಯಾರಾಗುತ್ತಿದೆ ಎಂದು ಗೊತ್ತಿದ್ದ ಮೇಲೆ ಅದನ್ನು ಬೇರೆ ಕಡೆಗಳಲ್ಲಿ ಉತ್ಪಾದನೆ ಮಾಡಲು ಯಾಕೆ ಕ್ರಮ ಕೈಗೊಳ್ಳಲಿಲ್ಲ? ಇಂದು ರಾಜ್ಯಪಾಲರು ಸಭೆ ಕರೆದಿರುವುದರಿಂದ ಕೇಂದ್ರ ಸರಕಾರ ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದಂತಾಗಿದ್ದು, ಅವರು ಲಸಿಕೆ ತಯಾರಿಕೆ ಬಗ್ಗೆ ಮಾಹಿತಿ ನೀಡುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಎಷ್ಟು ಐಸಿಯು ಹಾಸಿಗೆ ಇವೆ? ಯಾವ ಆಸ್ಪತ್ರೆಯಲ್ಲಿ ಏನೇನಿದೆ, ಏನೇನಿಲ್ಲ ಎಂಬುದರ ಬಗ್ಗೆ ರಿಯಾಲಿಟಿ ಚೆಕ್ ಮಾಡೋಣ. ಈ ಪರಿಸ್ಥಿತಿಯಲ್ಲಿ ಜನರಿಗೆ ಧೈರ್ಯ ತುಂಬಬೇಕು, ಮಾಧ್ಯಮಗಳು ಹೆದರಿಸುತ್ತಿವೆ ಅಂತಾ ಸಚಿವರು ಹೇಳಿಕೆ ಕೊಟ್ಟಿದ್ದಾರೆ. ಸಚಿವರಾಗಿ ನೀವು ಜನರಿಗೆ ಯಾವ ರೀತಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೀರಿ? ಕೇವಲ ಆರೋಗ್ಯ ಹಾಗೂ ಕಂದಾಯ ಸಚಿವರು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟರೆ ಆಗೋದಿಲ್ಲ. ಸರಕಾರದಲ್ಲಿರುವ ಎಲ್ಲ ಮಂತ್ರಿಗಳು, ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಈ ಪರಿಸ್ಥಿತಿಯಲ್ಲಿ ಲಾಕ್ ಡೌನ್ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ರೈತರ ಕತೆ ಏನು? ಕಳೆದ ಬಾರಿಯೇ ನೀವು ಏನೂ ಮಾಡಲು ಆಗಲಿಲ್ಲ. 20 ಲಕ್ಷ ಕೋಟಿ ರೂಪಾಯಿಯಲ್ಲಿ ಯಾರಿಗೂ 1 ರೂಪಾಯಿ ತಲುಪಿಲ್ಲ. ನೀವು ಪರಿಸ್ಥಿತಿ ನಿಭಾಯಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಈ ಸ್ಥಿತಿ ನಿರ್ಮಾಣವಾಗಿದೆ. ಸರಕಾರ ನೈತಿಕ ಜವಾಬ್ದಾರಿ ಹೊತ್ತು ಜನತೆಯ ಕ್ಷಮೆ ಕೊರಬೇಕು ಎಂದು ಶಿವಕುಮಾರ್ ತಿಳಿಸಿದರು.

ಶವ ಸಂಸ್ಕಾರದ ವಿಚಾರದಲ್ಲಿ ಹೆಚ್ಚಿನ ವೆಚ್ಚದ ಬಗ್ಗೆ ಮಾತನಾಡುತ್ತೀರಿ. ಬೆಂಗಳೂರಿನ ಸುತ್ತಮುತ್ತಲಿನ ಸರಕಾರಿ ಜಾಗಗಳನ್ನು ಗುರುತಿಸಿ, ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿ. ಮೃತರಿಗೆ ಗೌರವಯುತ ವಿದಾಯಕ್ಕೆ ಅವಕಾಶ ಮಾಡಿಕೊಡಿ. ಅದಕ್ಕೂ ಅವಕಾಶ ಮಾಡಿಕೊಡಲು ಆಗದಿದ್ದರೆ ಇದ್ಯಾವ ಸೀಮೆ ಸರಕಾರ? ಇದಕ್ಕೂ ರಾಜ್ಯಪಾಲರ ಆದೇಶಕ್ಕಾಗಿ ಕಾಯಬೇಕಾ? ಶವ ಸಂಸ್ಕಾರಕ್ಕೆ ಟೋಕನ್ ವ್ಯವಸ್ಥೆ ಯಾಕೆ? ನಿಮ್ಮ ಆಡಳಿತ ನೋಡಿ ಹಳ್ಳಿ ಜನ ನಗುತ್ತಿದ್ದಾರೆ ಎಂದು ಅವರು ಹೇಳಿದರು.

ಕೋವಿಡ್ ಸಾವಿನ ಬಗ್ಗೆ ಆಡಿಟ್ ನಡೆಯಬೇಕಿದೆ. 164 ಜನರು ಸತ್ತಿದ್ದರೆ, ಅಧಿಕಾರಿಗಳ ಮೂಲಕ ಸತ್ತವರ ಕುಟುಂಬಕ್ಕೆ ಸಾವಿನ ಬಗ್ಗೆ ಮಾಹಿತಿ ಕೊಡಿ. ಇಲ್ಲಿ ಯಾರೂ ಪರಿಪಕ್ವರಲ್ಲ. ನಿಮ್ಮ ತಪ್ಪನ್ನು ನೀವು ತಿದ್ದಿಕೊಂಡು ಮುಂದಿನ ಹೆಜ್ಜೆ ಇಡಿ. ಸರಕಾರ ಎಂದರೆ ಪಂಚಾಯಿತಿಯಿಂದ ಸಂಸತ್ ವರೆಗೂ ಎಲ್ಲವೂ ಸರಕಾರದ ಭಾಗವೇ. ಮುಖ್ಯಮಂತ್ರಿ ಪರಿಹಾರ ನಿಧಿ, ಪಿಎಂ ಕೇರ್ ಗೆ ಎಷ್ಟು ಹಣ ಬಂತು, ಎಷ್ಟು ಖರ್ಚಾಯ್ತು ಅಂತಾ ಲೆಕ್ಕ ಹೇಳಿ ಎಂದು ಶಿವಕುಮಾರ್ ಪ್ರಶ್ನಿಸಿದರು.

ಸರಕಾರ ಕೋವಿಡ್ ವಾರಿಯರ್ಸ್‍ಗಳಿಗೆ ವಿಮೆ ರದ್ದುಗೊಳಿಸಿದೆ. ನಾವು ಪ್ರಶ್ನಿಸಿದ ಮೇಲೆ ಬೇರೆ ಮಾದರಿಯಲ್ಲಿ ನೀಡಲಾಗುವುದು ಎಂದು ಹೇಳಿದೆ. ಲಸಿಕೆಯನ್ನು ಮೊದಲು ಪ್ರಧಾನಿ, ಮುಖ್ಯಮಂತ್ರಿ ತೆಗೆದುಕೊಳ್ಳದೇ, ಆ ಕೊರೋನ ವಾರಿಯರ್ಸ್ ಮೇಲೆ ಪ್ರಯೋಗಿಸಿದ್ದೀರಿ. ಇದು ಅತ್ಯಂತ ವಿಫಲ ಸರಕಾರ. ಈ ಪರಿಸ್ಥಿತಿ ನಿಭಾಯಿಸಲು ನಿಮ್ಮ ಕೈಯಲ್ಲಿ ಆಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ಅವರು ಹೇಳಿದರು.

ಜನರ ತಪ್ಪು ಅಂದರೆ, ಅವರಿಗೆ ಮಾರ್ಗದರ್ಶನ ನೀಡಲು ನಿಮ್ಮ ಸರಕಾರ ಇದೆ. ಅದು ನಿಮ್ಮ ಜವಾಬ್ದಾರಿ. ಹಾಗಿದ್ದರೆ ನೀವೇಕೆ ಅಧಿಕಾರದಲ್ಲಿದ್ದೀರಿ? ಅದನ್ನು ಜನಕ್ಕೆ ಬಿಟ್ಟುಬಿಡಿ. ಎಷ್ಟು ಸಚಿವರು ಆಸ್ಪತ್ರೆಗೆ ಭೇಟಿ ನೀಡಿ ಸಭೆ ನಡೆಸಿದ್ದಾರೆ? ಆರೋಗ್ಯ ಸಚಿವರು ಒಂದೆರಡು ಆಸ್ಪತ್ರೆಗೆ ಭೇಟಿ ನೀಡಿ ಸಭೆ ನಡೆಸಿದ್ದು ಬಿಟ್ಟರೆ ಬೇರೇನೂ ಆಗಿಲ್ಲ. ವಾಸ್ತವಾಂಶ ತಿಳಿದುಕೊಳ್ಳುವ ಪ್ರಯತ್ನ ನಡೆದಿಲ್ಲ. ಈ ಎಲ್ಲ ವಿಚಾರಗಳನ್ನು ನಾವು ರಾಜ್ಯಪಾಲರ ಮುಂದೆ ಇಡುತ್ತೇವೆ. ಅವರ ಕಾಳಜಿಯನ್ನು ನಾವು ಗೌರವಿಸುತ್ತೇವೆ ಎಂದು ಶಿವಕುಮಾರ್ ಹೇಳಿದರು.

ಅವರಿಗೆ ಸಭೆ ಕರೆಯುವ ಅಧಿಕಾರ ಇದೆಯೋ, ಇಲ್ಲವೋ ಅದು ಬೇರೆ ಪ್ರಶ್ನೆ. ಈ ರಾಜ್ಯದಲ್ಲಿ ಅಧಿಕಾರ ಸರಿಯಾಗಿ ನಡೆಯುತ್ತಿಲ್ಲ ಎಂಬುದನ್ನು ಅರಿತು ಅವರು ಸಭೆ ಕರೆದಿದ್ದಾರೆ. ನಾವದನ್ನು ಸ್ವಾಗತಿಸುತ್ತೇವೆ ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News