ಕೊರೋನ ನಿಯಂತ್ರಣ, ಆರೋಗ್ಯ ಸೇವೆಯಲ್ಲಿ ರಾಜ್ಯ ಸರಕಾರ ಸೋತಿದೆ: ಎಚ್.ವಿಶ್ವನಾಥ್ ವಾಗ್ದಾಳಿ

Update: 2021-04-20 14:35 GMT

ಮೈಸೂರು,ಎ.20: ಕೊರೋನ ನಿಯಂತ್ರಿಸುವಲ್ಲಿ ಮತ್ತು ಆರೋಗ್ಯ ಸೇವೆ ನೀಡುವಲ್ಲಿ ರಾಜ್ಯ ಸರ್ಕಾರ ಸೋತಿದೆ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ಎರಡನೇ ಅಲೆ ಬರುತ್ತದೆಂದು ಡಬ್ಲ್ಯೂಎಚ್‍ಒ ಎಚ್ಚರಿಸಿತ್ತು. ಕೇಂದ್ರ ಸರ್ಕಾರಕ್ಕೂ ಮಾಹಿತಿ ಇತ್ತು. ಆದರೆ ಸರ್ಕಾರ ಯಾವ ಪೂರ್ವ ತಯಾರಿ ಮಾಡಿಕೊಳ್ಳಲಿಲ್ಲ. ಬರೀ ಸಭೆ ಮಾಡುವುದರಿಂದ ಪ್ರಯೋಜನವಿದೆಯೇ? ಸೇವೆ ನೀಡುವಲ್ಲಿ ಸರ್ಕಾರ ಸೋತಿದೆ ಎಂದು ಆರೋಪಿಸಿದರು. 

ಕೊರೋನ ಬಗ್ಗೆ ರಾಜ್ಯಪಾಲರು ಸಭೆ ನಡೆಸುತ್ತಾರೆ ಎಂದರೆ ಏನರ್ಥ? ಜನತಾ ಸರ್ಕಾರ ವಿಫಲವಾದಾಗ ರಾಜ್ಯಪಾಲರು ಮಧ್ಯಪ್ರವೇಶ ಮಾಡಬಹುದು. ಸುಮ್ಮನೆ ಯಾಕೆ ರಾಜ್ಯಪಾಲರು ಮೀಟಿಂಗ್ ಮಾಡಬೇಕು? ಹಾಗಾದರೆ ಕೊರೋನ ನಿಯಂತ್ರಿಸಲು ಸರ್ಕಾರ ವಿಫಲವಾಗಿದೆಯೇ? 2 ಸಾವಿರ ಹಾಸಿಗೆ, ಬೆಡ್, ಆಕ್ಸಿಜನ್ ತಂದರಲ್ವಾ. ಅವು ಏನಾದವು ? ಮೊದಲ ಅಲೆ ಮುಗಿದ ಮೇಲೆ ಬಿಲ್ ಮಾಡುವುದರಲ್ಲಿ ಬ್ಯುಸಿ ಆಗಿಬಿಟ್ರಿ. ಈಗ ಜನ ಸಂಕಟಪಡುತ್ತಿದ್ದಾರೆ ಎಂದರು. 

ರಾಜ್ಯದ ಎಲ್ಲ ತೀರ್ಮಾನವನ್ನೂ ಮುಖ್ಯಮಂತ್ರಿ ಒಬ್ಬರೇ ತೆಗೆದುಕೊಳ್ಳುತ್ತಿದ್ದಾರೆ. ಹಾಗಾದರೆ ಕ್ಯಾಬಿನೆಟ್ ಯಾಕೆ ಬೇಕು? ಸಿಎಂ ಹಾಗೂ ಸಚಿವರು, ಡಿಸಿಎಂ ನಡುವೆ ಸಮನ್ವಯತೆ ಹೋಗಿದೆ. ಅದು ಹೋದ ಕಾರಣವೇ ಈ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಐಎಸ್‍ಎಸ್ ಅಧಿಕಾರಿಗಳು ಯಾವ ಮಂತ್ರಿ ಮಾತನ್ನೂ ಕೇಳುತ್ತಿಲ್ಲ. ಈಗಲಾದರೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅಧಿಕಾರ ಕೊಡಬೇಕು ಎಂದರು. 

ಕೊರೋನ ಹೆಚ್ಚಾಗಲು ಜನರೇ ಕಾರಣವೆಂಬ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ, ಜವಾಬ್ದಾರಿ ಸ್ಥಾನದಲ್ಲಿರುವವರಿಂದ ಬೇಜಬಾವ್ದಾರಿ ಹೇಳಿಕೆ. ಕೊರೋನ ಹೆಚ್ಚಾಗಲು ಜನರೇ ಕಾರಣ ಅಂತೀರಲ್ಲ. ಹಾಗಾದರೆ ನೀವು ಏನ್ ಮಾಡುತ್ತಿದ್ದೀರಿ? ಸಿಎಂ ಆಸ್ಪತ್ರೆಯಲ್ಲಿದ್ದಾರೆ. ಮೂರು ಜನ ಡಿಸಿಎಂ ಏನ್ ಮಾಡುತ್ತಿದ್ದಾರೆ. ಅವರನ್ನು ಸುಮ್ಮನೆ ಡಿಸಿಎಂ ಮಾಡಿರೋದಾ? ಜನರ ಮೇಲೆ ಹೊಣೆ ಹಾಕಬಾರದು ಎಂದು ಪ್ರತಿಕ್ರಿಯಿಸಿದರು. 

ಮತ್ತೊಬ್ಬ ಮಂತ್ರಿ ಬೇರೆ ರಾಜ್ಯದ ಪರಿಸ್ಥಿತಿ ನಮ್ಮಲ್ಲಿಲ್ಲ ಅಂತಾರೆ. ಜನ ಈಗಲೇ ಪಡಿಪಾಟಲು ಪಟ್ಟಿದ್ದಾರೆ. ಬೆಡ್, ಆಕ್ಸಿಜನ್ ಸಿಗದೆ ಪರದಾಡುತ್ತಿದ್ದಾರೆ. ಇದಕ್ಕಿಂತಲೂ ಕೆಟ್ಟ ಪರಿಸ್ಥಿತಿ ರಾಜ್ಯಕ್ಕೆ ಬರಬೇಕಾ? ನಾನು ಆಡಳಿತ ಪಕ್ಷದಲ್ಲಿ ಇದ್ದು ಮಾತಾಡುತ್ತಿದ್ದೇನೆ. ಏಕೆಂದರೆ ಇದನ್ನು ಹೇಳದೆ ಇದ್ದರೆ ನನಗೆ ನಾನೇ ವಂಚನೆ ಮಾಡಿದಂತೆ ಆಗುತ್ತದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News