ಹೆಚ್ಚುತ್ತಿರುವ ಕೋವಿಡ್, ಕರ್ಫ್ಯೂ ಜಾರಿ: ಬೆಂಗಳೂರು ತೊರೆಯುತ್ತಿರುವ ವಲಸೆ ಕಾರ್ಮಿಕರು

Update: 2021-04-20 17:45 GMT

ಬೆಂಗಳೂರು, ಎ.20: ರಾಜ್ಯದೆಲ್ಲೆಡೆ ಕೋವಿಡ್ ಸೋಂಕಿನ ಎರಡನೆ ಅಲೆ ಹೆಚ್ಚಾಗಿ, ಮತ್ತೆ ಕರ್ಫ್ಯೂ ವಿಸ್ತರಣೆಯಾಗುವ ಆತಂಕ ಕವಿಯುತ್ತಿರುವ ಬೆನ್ನಲ್ಲೆ, ರಾಜಧಾನಿ ಬೆಂಗಳೂರಿನಲ್ಲಿ ವಲಸೆ ಕಾರ್ಮಿಕರು ಮತ್ತೆ ಆತಂಕಕ್ಕೆ ಗುರಿಯಾಗಿದ್ದಾರೆ.

ಕಳೆದ ವರ್ಷದ ಲಾಕ್‍ಡೌನ್ ವೇಳೆ ಇನ್ನಿಲ್ಲದ ಸಂಕಷ್ಟ ಎದುರಿಸಿ ನೂರಾರು ಕಿ.ಮೀ ಕಾಲ್ನಡಿಗೆ ಮೂಲಕವೇ ತವರಿಗೆ ತಲುಪಿದ್ದು, ವಲಸೆ ಕಾರ್ಮಿಕರು ಮತ್ತೆ ಅಂಥ ಪರಿಸ್ಥಿತಿ ಎದುರಾಗುವುದನ್ನು ತಡೆಯಲು ಈಗಲೇ ತವರಿನತ್ತ ಮುಖ ಮಾಡುವ ಕೆಲಸ ಆರಂಭಿಸಿದ್ದಾರೆ.

ಅತಿ ಹೆಚ್ಚು ವಲಸೆ ಕಾರ್ಮಿಕರನ್ನು ಹೊಂದಿರುವ ರಾಜ್ಯದ ಬೆಂಗಳೂರು ಸೇರಿದಂತೆ ವಿವಿಧ ನಗರ ಪ್ರದೇಶಗಳಲ್ಲಿ ವಲಸೆ ಕಾರ್ಮಿಕರು ಮತ್ತೆ ಭಾರೀ ಪ್ರಮಾಣದಲ್ಲಿ ತವರಿನತ್ತ ತೆರಳುತ್ತಿರುವ ಬೆಳವಣಿಗೆ ಕಂಡುಬಂದಿದೆ.

ಬೆಂಗಳೂರಿನಲ್ಲಿ ದಿನೇ ದಿನೇ ಕೋವಿಡ್ ಸೋಂಕು ಹೆಚ್ಚುತ್ತಿದೆ. ನಿತ್ಯ ಸುಮಾರು ಹತ್ತು ಸಾವಿರ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಹೆಚ್ಚುವ ಆತಂಕ ಇದೆ. ಹೀಗಾಗಿ, ಜನರಲ್ಲಿ ಆತಂಕ ಸೃಷ್ಟಿಯಾಗಿದ್ದು, ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಪ್ರಮುಖವಾಗಿ ಇಲ್ಲಿನ ಕೆಂಪೇಗೌಡ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಕಳೆದ ನಾಲ್ಕೈದು ದಿನಗಳಿಂದ ಏಕಾಏಕಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಅನೇಕರು ಮನೆ ಖಾಲಿ ಮಾಡಿಕೊಂಡು ತಮ್ಮ ಊರುಗಳತ್ತ ವಾಪಾಸು ತೆರಳುತ್ತಿದ್ದಾರೆ.

ಟಾಟಾ ಏಸ್, ಕ್ಯಾಂಟ್ರೋ ವಾಹನಗಳಲ್ಲಿ ಜನರು ಬೆಂಗಳೂರು ತೊರೆಯುತ್ತಿದ್ದಾರೆ. ಅಚ್ಚರಿ ಎಂದರೆ, ಕೆಲವರು ಪಾತ್ರೆ ಪಗಡೆಗಳು, ಗೃಹಪಯೋಗಿ ಸಾಮಗ್ರಿಗಳನ್ನು ತುಂಬಿಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ವಲಸೆ ಕಾರ್ಮಿಕರೊಬ್ಬರು, ರಾಜಧಾನಿಯಲ್ಲಿ ಕೋವಿಡ್ ಎರಡನೆ ಅಲೆ ಸಮುದಾಯಕ್ಕೆ ಹರಡಿದೆ ಎಂದು ತಜ್ಞರು ಹೇಳಿದ್ದಾರೆ. ಇದರಿಂದ ಸರಕಾರ ಬೆಚ್ಚಿಬಿದ್ದಿದೆ. ಹೀಗಾಗಿ, ಲಾಕ್‍ಡೌನ್ ಜಾರಿಯಾದರೆ ತೊಂದರೆ ಆಗುವ ಆತಂಕದಿಂದಲೇ ತಮ್ಮ ತಮ್ಮ ಊರುಗಳಿಗೆ ಮರಳುತ್ತಿದ್ದಾರೆ ಎಂದರು.

ಇನ್ನು, ನಗರ ತೊರೆಯುತ್ತಿರುವ ಬಹುತೇಕರು ಅಸ್ಸಾಂ, ಉತ್ತರ ಪ್ರದೇಶ, ಬಿಹಾರ, ಒಡಿಶಾ, ಹರಿಯಾಣ ಮತ್ತು ಹಿಮಾಚಲ ಪ್ರದೇಶದವರಾಗಿದ್ದಾರೆ. ಈ ರಾಜ್ಯದ ಬಹುತೇಕ ಕಾರ್ಮಿಕರು ಕಟ್ಟಡ ಕಾಮಗಾರಿ, ರಸ್ತೆ ನಿರ್ಮಾಣ, ಸೆಕ್ಯೂರಿಟಿ ಗಾರ್ಡ್, ಹೊಟೇಲ್‍ನಲ್ಲಿ ಕೆಲಸ ಮಾಡುವವರಾಗಿದ್ದಾರೆ.

ಸದ್ಯ ತಕ್ಷಣಕ್ಕೆ ರೈಲ್ವೆ ಟಿಕೆಟ್ ಪಡೆದು ಪ್ರಯಾಣಿಸಲು ಅನುಮತಿಯಿಲ್ಲ. ರೈಲಿನಲ್ಲಿ ಕೇವಲ ಕಾಯ್ದಿರಿಸಿದ ಆಸನದಲ್ಲಿ ಮಾತ್ರವೇ ಪ್ರಯಾಣಕ್ಕೆ ಅವಕಾಶ ಇರುವ ಹಿನ್ನೆಲೆಯಲ್ಲಿ ನೂಕುನುಗ್ಗಲು ಆಗುತ್ತಿಲ್ಲ. ಕಾಯ್ದಿರಿಸಿದ ಆಸನದ ಪ್ರಕಾರವೇ ಕಾರ್ಮಿಕರು ಹೋಗುತ್ತಿರುವುದರಿಂದ ಹಂತ ಹಂತವಾಗಿ ನಗರದಿಂದ ಕಾರ್ಮಿಕರು ಖಾಲಿಯಾಗುತ್ತಿದ್ದಾರೆ. ಮತ್ತೊಂದೆಡೆ ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲದೆ, ಗಂಟೆಗಟ್ಟಲೆ ರಸ್ತೆಗಳಲ್ಲಿಯೇ ಕಾಯುವ ಸ್ಥಿತಿಯೂ ಬೆಂಗಳೂರಿನಲ್ಲಿ ನಿರ್ಮಾಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News