ಕೊರೋನದಿಂದ ತತ್ತರಿಸಿರುವ ರಾಜ್ಯಗಳಿಗೆ ನೆರವಿನ ಹಸ್ತ ಬೇಕೇ ಹೊರತು ಉಪದೇಶದ ಬುರುಡೆ ಮಾತಲ್ಲ

Update: 2021-04-21 06:17 GMT

ಬೆಂಗಳೂರು, ಎ.21: ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣ ಅತ್ಯಂತ ನಿರಾಶದಾಯಕ. ಕೊರೋನ ಸೋಂಕಿನಿಂದ ತತ್ತರಿಸಿಹೋಗಿರುವ ರಾಜ್ಯಗಳಿಗೆ ತುರ್ತಾಗಿ ಬೇಕಾಗಿರುವುದು ನೆರವಿನ ಹಸ್ತವೇ ಹೊರತು ಉಪದೇಶದ ಬುರುಡೆ ಮಾತಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.

ಈ ಸಂಬಂಧ ಫೇಸ್ಬುಕ್ ಪೋಸ್ಟ್ ಮಾಡಿರುವ ಅವರು, ರಾಜ್ಯದಲ್ಲಿ ಕೊರೋ ಸೋಂಕಿತರು‌ ಚಿಕಿತ್ಸೆಗೆ ಆಮ್ಲಜನಕ ಇಲ್ಲದೆ, ಐಸಿಯು ಹಾಸಿಗೆಗಳಿಲ್ಲದೆ,‌ ರೆಮಿಡಿಸಿವೆರ್‌ನಂತಹ ಪ್ರಾಣರಕ್ಷಕ ಔಷಧಿ ಸಿಗದೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಸಮಸ್ಯೆಗಳಿಗೆ ಯಾವುದೇ ಪರಿಹಾರ ನೀಡದ ಮೋದಿ ಜನತೆಗೆ ಜವಾಬ್ದಾರಿಯ ಪಾಠ ಹೇಳಿದ್ದಾರೆ. ಪ್ರಧಾನಿಗಳೇ, ಮೊದಲು ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿ.

ಕೊರೋನ ಉಲ್ಭಣಗೊಂಡಿರುವ ಕಾರಣದಿಂದಾಗಿ ಲಾಕ್‌ಡೌನ್ ಅನಿವಾರ್ಯ ಎಂಬಂತೆ ರಾಜ್ಯ ಸರ್ಕಾರ ಮಾತನಾಡುತ್ತಿದೆ. ಲಾಕ್ ಡೌನ್ ಹೇರಿದರೆ ಕಷ್ಟನಷ್ಟಕ್ಕೀಡಾಗುವ ಜನತೆಗೆ ಕೇಂದ್ರ ಸರ್ಕಾರ ನೀಡುವ ನೆರವಿನ ಘೋಷಣೆಯನ್ನು ಜನ ನಿರೀಕ್ಷಿಸಿದ್ದರು. ಮೋದಿ ಭಾಷಣ 'ನಿಮ್ಮ ತಲೆ ಮೇಲೆ ನಿಮ್ಮ‌ ಕೈ' ಎಂಬ ಸಂದೇಶ ನೀಡಿದೆ.

ಕೊರೋನ ಪರಿಣಾಮವನ್ನು ಸಮರ್ಥವಾಗಿ ನಿರ್ವಹಿಸಲಾಗದೆ ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯ ಅಂಚಿಗೆ ಬಂದು ನಿಂತಿದೆ. ಇದಕ್ಕೆ ನ್ಯಾಯಬದ್ಧವಾಗಿ ತೆರಿಗೆ ಪಾಲನ್ನು ನೀಡದಿರುವ ಕೇಂದ್ರ ಸರ್ಕಾರವೂ ಕಾರಣ. ಪ್ರಧಾನಿಯವರೇ, ನೀವು ವಿಶೇಷ ಆರ್ಥಿಕ ನೆರವನ್ನು ಕೊಡುವುದು ಬೇಡ, ನಮ್ಮ ನ್ಯಾಯಬದ್ಧ ಪಾಲನ್ನಷ್ಟಾದರೂ ನೀಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಇಂದು ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣ ಅತ್ಯಂತ ನಿರಾಶದಾಯಕ. ಕೊರೊನಾ ಸೋಂಕಿನಿಂದ ತತ್ತರಿಸಿಹೋಗಿರುವ ರಾಜ್ಯಗಳಿಗೆ ತುರ್ತಾಗಿ...

Posted by Siddaramaiah on Tuesday, 20 April 2021

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News