ಕೋವಿಡ್ ಹೆಚ್ಚಳ ಸಹಿತ ಎಲ್ಲ ಅನಾಹುತಗಳಿಗೆ ಸರಕಾರಗಳೇ ನೇರ ಹೊಣೆ: ಡಿ.ಕೆ.ಶಿವಕುಮಾರ್

Update: 2021-04-21 14:09 GMT

ಬೆಂಗಳೂರು, ಎ. 21: ರಾಜ್ಯದ ಮತ್ತು ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಲು ರಾಜ್ಯ ಮತ್ತು ಕೇಂದ್ರ ಸರಕಾರದ ವೈಫಲ್ಯವೇ ಕಾರಣ ಎಂದು ಆರೋಪಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೋವಿಡ್ ಪ್ರಕರಣಗಳ ಹೆಚ್ಚಳ ಸಹಿತ ಎಲ್ಲ ಅನಾಹುತಗಳಿಗೆ ಈ ಸರಕಾರಗಳೇ ನೇರ ಹೊಣೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ಇಲ್ಲಿನ ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವೊಬ್ಬ ಸಚಿವರೂ ಜಿಲ್ಲಾ ಕೇಂದ್ರಗಳಿಗೆ ತೆರಳಿ ಕೋವಿಡ್ ನಿಯಂತ್ರಣ ಸಂಬಂಧ ಸಭೆ ಮಾಡಿಲ್ಲ. ಜೊತೆಗೆ ಆಸ್ಪತ್ರೆಗಳಿಗೆ ಹೋಗಿ ಸೋಂಕಿತರ ಸಮಸ್ಯೆಯನ್ನೂ ಆಲಿಸಿಲ್ಲ. ಕೋವಿಡ್ ಕೆಲಸಕ್ಕೆ ಅಧಿಕಾರಿಗಳನ್ನು ಸರಿಯಾಗಿ ಬಳಸಿಕೊಳ್ಳಲು ಇವರಿಗೆ ಸಾಧ್ಯವಾಗಿಲ್ಲ. ಸಂಪೂರ್ಣ ಆಡಳಿತ ವೈಫಲ್ಯಕ್ಕೆ ಇದೇ ಸಾಕ್ಷಿ ಎಂದು ಟೀಕಿಸಿದರು.

ಸರಕಾರದ ವೈಫಲ್ಯಗಳ ಬಗ್ಗೆ ಸೂಚ್ಯವಾಗಿ ನಿನ್ನೆ ನಡೆದ ರಾಜ್ಯಪಾಲರ ಸಭೆಯಲ್ಲಿ ತಿಳಿಸಲಾಗಿದೆ. ರಾಜ್ಯ ಸರಕಾರಕ್ಕೆ ಲಾಕ್‍ಡೌನ್ ಮಾಡುವ ಚಿಂತನೆ ಇತ್ತು. ಆದರೆ, ಪ್ರಧಾನಿ ಸಲಹೆಯ ಬಳಿಕ ಲಾಕ್‍ಡೌನ್ ಮಾಡಿಲ್ಲ. ಪ್ರಧಾನಿ ಹೇಳಿದ ತಕ್ಷಣ ಕಾನೂನು ಬದಲಿಸಲು ಆಗುತ್ತಾ? ಪ್ರಧಾನಿ ಹೇಳಿದರೂ ಎಂದು ಸಂವಿಧಾನ ಬದಲಾವಣೆ ಮಾಡಲು ಸಾಧ್ಯವೇ? ಎಂದು ಶಿವಕುಮಾರ್ ಪ್ರಶ್ನಿಸಿದರು.

ರಾಜ್ಯದಲ್ಲಿ ಬೆಡ್, ಆಕ್ಸಿಜನ್ ಕೊರತೆ ಸಾಕಷ್ಟಿದೆ. ಇದು ರಾಜ್ಯ ಸರಕಾರದ ವೈಫಲ್ಯ. ತಜ್ಞರ ಸಮಿತಿಯ ವರದಿಯಂತೆ ನಿರ್ಧರಿಸಲು ಹೇಳಿದ್ದೆವು. ಆದರೆ, ಮೋದಿ ಹೇಳಿದ ಬಳಿಕ ನಿರ್ಧಾರ ಬದಲಿಸಿದ್ದಾರೆ. ಆದರೆ ಸರಕಾರ ಜಾರಿ ಮಾಡಿದ ನಿಯಮಗಳನ್ನು ಜನಸಾಮಾನ್ಯರು ಪಾಲಿಸಬೇಕು ಎಂದ ಅವರು, ಚುನಾವಣಾ ರ್‍ಯಾಲಿಗಳ ಮೇಲಿನ ಆಸಕ್ತಿ ಜನರಿಗೆ ನೆರವಾಗಲು ಏಕೆ ಇಲ್ಲ ಎಂದು ಪ್ರಶ್ನಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಹೊಂದಾಣಿಕೆ ಇಲ್ಲ. ಮುಖ್ಯಮಂತ್ರಿ ಮತ್ತು ಸಂಪುಟ ಸಚಿವರ ನಡುವೆ ಸಮನ್ವಯತೆ ಇಲ್ಲ. ಹೀಗಾಗಿ ನಿನ್ನೆ ಹೊಸ ಮಾರ್ಗಸೂಚಿ ಕುರಿತು ಮುಖ್ಯಮಂತ್ರಿ, ಸಚಿವರು ಮಾತನಾಡದೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯಿಂದ ಸುದ್ದಿಗೋಷ್ಠಿ ಮಾಡಿಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಧ್ಯಮಗಳಿಗೆ ಮಾತನಾಡಬೇಕಿತ್ತು, ಅವರೇಕೆ ಮಾತನಾಡಲಿಲ್ಲ ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News