ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಲಘು, ಘನ ವಾಹನಗಳ ಸಂಚಾರಕ್ಕೆ ಅನುಮತಿ

Update: 2021-04-21 14:11 GMT

ಚಿಕ್ಕಮಗಳೂರು, ಎ.21: ರಾಷ್ಟ್ರೀಯ ಹೆದ್ದಾರಿ-73ರ ಮಂಗಳೂರು ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ ಮಾರ್ಗವಾಗಿ ತುಮಕೂರು ಸಂಪರ್ಕ ರಸ್ತೆಯ ಮಾರ್ಗದಲ್ಲಿ ಲಘು ಹಾಗೂ ಕೆಲವು ಘನ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಆದೇಶವು ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

ಪ್ರಸ್ತಾವಿತ ಮಾರ್ಗದಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗದವರು ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಈ ಮಾರ್ಗದಲ್ಲಿ ಯಾವುದೇ ರೀತಿಯ ಅಪಘಾತಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿರುವ ಅವರು, ಚಾರ್ಮಾಡಿ ಘಾಟ್ ಭಾಗದಲ್ಲಿ ಬಹಳಷ್ಟು ಕಡೆ ಭೂಕುಸಿತದಿಂದ ರಸ್ತೆಗೆ ತೀವ್ರ ಧಕ್ಕೆ ಉಂಟಾಗಿರುವುದರಿಂದ ಅತ್ಯಂತ ಜಾಗರೂಕತೆಯಿಂದ ನಿಗದಿತ ವೇಗದ ಮಿತಿಯೊಂದಿಗೆ ವಾಹನಗಳು ಸಂಚರಿಸಬೇಕು. ಕೆಎಸ್ಸಾರ್ಟಿಸಿ ಕೆಂಪು ಬಸ್, ಆರು ಚಕ್ರದ ಲಾರಿ, ನಾಲ್ಕು ಚಕ್ರದ ವಾಹನಗಳು, ಟೆಂಪೊ ಟ್ರಾವೆಲರ್, ಅಂಬುಲೆನ್ಸ್, ಕಾರು, ಜೀಪು, ವ್ಯಾನ್, ಎಲ್.ಸಿ.ವಿ (ಮಿನಿ ವ್ಯಾನ್) ಹಾಗೂ ದ್ವಿಚಕ್ರ ವಾಹನಗಳಿಗೆ ಈ ಮಾರ್ಗದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಭಾರೀ ಘನ ವಾಹನಗಳಾದ ಬುಲೆಟ್ ಟ್ಯಾಂಕರ್ಸ್, ಷಿಪ್ ಕಾರ್ಗೊ ಕಂಟೈನರ್ಸ್ ಹಾಗೂ ಲಾಂಗ್ ಚಾಸೀಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಎಕ್ಸೆಲ್ ಟ್ರಕ್ ಟ್ರೈಲರ್, ಕೆಎಸ್ಸಾರ್ಟಿಸಿ ರಾಜಹಂಸ ಬಸ್/ಸ್ಲೀಪರ್ ಬಸ್‍ಗಳು ಮತ್ತು ಎಲ್ಲಾ ಬಗೆಯ ಅಧಿಕ ಭಾರದ ಸರಕು ಸಾಗಾಣೆಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News