×
Ad

ಇಸಾಕ್ ರ ಗ್ರಂಥಾಲಯ ಸರ್ಕಾರದ ವತಿಯಿಂದಲೇ ನಿರ್ಮಾಣ: ಮುಡಾ, ಪಾಲಿಕೆ ಆಯುಕ್ತರ ಜಂಟಿ ಹೇಳಿಕೆ

Update: 2021-04-21 22:39 IST

ಮೈಸೂರು,ಎ.21: ನಗರದ ರಾಜೀವ್ ನಗರದ 2ನೇ ಹಂತದಲ್ಲಿ ಇತ್ತೀಚೆಗೆ ಬೆಂಕಿಗಾಹುತಿಯಾದ ಪುಸ್ತಕ ಪ್ರೇಮಿ ಸೈಯದ್ ಇಸಾಕ್ ಸಾರ್ವಜನಿಕ ಗ್ರಂಥಾಲಯವನ್ನು ಸದರಿ ನಿವೇಶನದಲ್ಲೇ ಮೈಸೂರು ನಿರ್ಮಿತಿ ಕೇಂದ್ರದ ವತಿಯಿಂದ ಮೈಸೂರು ಮಹಾನಗರ ಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಮೈಸೂರು ನಗರ ಗ್ರಂಥಾಲಯ ಪ್ರಾಧಿಕಾರಗಳ ಜಂಟಿ ಅನುದಾನದಲ್ಲಿ ನಿರ್ಮಿಸಲಾಗುವುದು ಎಂದು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಮಂಜುನಾಥ್ ಬಿ. ತಿಳಿಸಿದ್ದಾರೆ.

ಈ ಹಿಂದೆ ಬೆಂಕಿಗಾಹುತಿಯಾದ ಸೈಯದ್ ಇಸಾಕ್ ಅವರ ಗ್ರಂಥಾಲಯದ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಇದೇ ಜಾಗದಲ್ಲಿ ಗ್ರಂಥಾಲಯ ನಿರ್ಮಾಣ ಮಾಡುವಂತೆ ತೀರ್ಮಾನಿಸಿದ್ದರು. ಅಧಿಕಾರಿಗಳು ಭೇಟಿ ನೀಡುವ ಮೊದಲು ಸಾರ್ವಜನಿಕರು ದೇಣಿಗೆ ನೀಡಲು ಪ್ರಾರಂಭಿಸಿದ್ದರು. ಸದರಿ ದೇಣಿಗೆ ಮೊತ್ತಕ್ಕೆ ಹೊಣೆಗಾರಿಕೆ ಇರಲೆಂಬ ಹಾಗೂ ಯಾವುದೇ ವ್ಯಕ್ತಿ, ಸಂಘ-ಸಂಸ್ಥೆಗಳಿಂದ ದುರುಪಯೋಗವಾಗದಿರಲೆಂಬ ಉದ್ದೇಶದಿಂದ ಪಾರದರ್ಶಕವಾಗಿ ಸಮಿತಿಯ ಮೂಲಕ ನಿರ್ವಹಿಸಲು ಪ್ರತ್ಯೇಕ ಜಂಟಿ ಖಾತೆ ತೆರೆದಿದ್ದು, ಇನ್ನು ಮುಂದೆ ಸದರಿ ಬ್ಯಾಂಕ್ ಖಾತೆಗೆ ಮಾತ್ರ ದೇಣಿಗೆ ನೀಡುವ ಇಚ್ಚೆಯುಳ್ಳವರು ಮಾತ್ರ ದೇಣಿಗೆ ಜಮೆ ಮಾಡುವಂತೆ ಕೋರಲಾಗಿತ್ತು.

ಆದರೆ, ಈ ಸಂಬಂಧ ಕೆಲವು ವ್ಯಕ್ತಿಗಳು ದಿನಪತ್ರಿಕೆಗಳಲ್ಲಿ ಆಕ್ಷೇಪಣೆ/ಅಸಮಧಾನ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ಈ ಕೆಳಕಂಡಂತೆ ನಿರ್ಧರಿಸಲಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈವರೆವಿಗೆ ಬ್ಯಾಂಕ್‍ನ ಜಂಟಿ ಖಾತೆಯಲ್ಲಿ ರೂ. 9,12,400 ಗಳು ಜಮೆಯಾಗಿದ್ದು, ಸದರಿ ಮೊತ್ತವನ್ನು ಹಾಗೂ ಮುಂದೆ ಜಮೆಯಾಗುವ ಮೊತ್ತವನ್ನು ಗ್ರಂಥಾಲಯದ ಅಭಿವೃದ್ಧಿಗೆ ಉಪಸಮಿತಿಯ ಸಭೆಯಲ್ಲಿಟ್ಟು, ಸಭೆಯ ತೀರ್ಮಾನದಂತೆ ಬಳಸಲಾಗುವುದು. ಗ್ರಂಥಾಲಯಕ್ಕೆ ದೇಣಿಗೆ ನೀಡಲಿಚ್ಚಿಸುವ ದಾನಿಗಳು ಹಣದ ಬದಲಾಗಿ ಗ್ರಂಥಾಲಯಕ್ಕೆ ಅವಶ್ಯವಿರುವ ಪುಸ್ತಕಗಳು, ಪೀಠೋಪಕರಣಗಳು, ಕಂಪ್ಯೂಟರ್ ಗಳು, ಉಪಕರಣಗಳು ಇತ್ಯಾದಿ ಪರಿಕರಗಳನ್ನು ನೀಡುವಂತೆ ಈ ಮೂಲಕ ಕೋರಲಾಗಿದೆ. 

ಆನ್‍ಲೈನ್‍ನಲ್ಲಿ ಕ್ರೌಢ್ ಫಂಡಿಂಗ್ ಅಭಿಯಾನದ ಮೂಲಕ ಸದರಿ ಗ್ರಂಥಾಲಯವನ್ನು ಮರು ಸ್ಥಾಪಿಸಲು ಹಣವನ್ನು ಸಂಗ್ರಹಿಸುತ್ತಿರುವವರು, ಮೈಸೂರು ನಗರ ಗ್ರಂಥಾಲಯ ಪ್ರಾಧಿಕಾರ ತೆರೆದಿರುವ ಜಂಟಿ ಬ್ಯಾಂಕ್ ಖಾತೆಗೆ ಹಣವನ್ನು ಜಮೆ ಮಾಡಲೇಬೇಕೆಂಬ ಯಾವುದೇ ಷರತ್ತು ಇರುವುದಿಲ್ಲ, ಸ್ವ-ಇಚ್ಛೆಯಿಂದ ಜಮೆ ಮಾಡಬಹುದು. ಇಲ್ಲವಾದಲ್ಲಿ ಈಗಾಗಲೇ ದಿನಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಕ್ರೌಢ್ ಫಂಡಿಂಗ್ ಅಭಿಯಾನವನ್ನು ನಿಲ್ಲಿಸಬಹುದು ಅಥವಾ ದಾನಿಗಳಿಗೆ ವಾಪಸ್ ನೀಡಬಹುದು ಅಥವಾ ಗ್ರಂಥಾಲಯಕ್ಕೆ ಅವಶ್ಯವಿರುವ ಯಾವುದೇ ಪರಿಕರಗಳನ್ನು ಅವರೇ ಖರೀದಿಸಿ ನೀಡಬಹುದು. ಅಥವಾ ಸೈಯದ್ ಇಸಾಕ್ ರವರಿಗೆ ಮಾಸಿಕ ಗೌರವ ಸಂಭಾವನೆ ನೀಡುವ ಸಲುವಾಗಿ ಕೇಂದ್ರ ಸರ್ಕಾರದ ಯಾವುದಾದರೂ ಯೋಜನೆಯಲ್ಲಿ ಹಣ ತೊಡಗಿಸಿ ಅಥವಾ ಬ್ಯಾಂಕ್‍ನಲ್ಲಿ ನಿಶ್ಚಿತ ಠೇವಣಿಯಲ್ಲಿಟ್ಟು ಪ್ರತೀ ತಿಂಗಳು ಸೈಯದ್ ಇಸಾಕ್ ರವರಿಗೆ ಗೌರವ ಸಂಭಾವನೆ ಬರುವಂತೆ ಕ್ರಮ ವಹಿಸಬಹುದಾಗಿರುತ್ತದೆ. 

ಉಪಸಮಿತಿಯನ್ನು ಕೇವಲ ಬ್ಯಾಂಕ್‍ನ ಜಂಟಿ ಖಾತೆ ನಿರ್ವಹಿಸಲು ರಚಿಸಲಾಗಿಲ್ಲ. ಒಟ್ಟಾರೆ ಇಡೀ ಗ್ರಂಥಾಲಯ ನಿರ್ಮಾಣ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಹಾಗೂ ಅರ್ಥಪೂರ್ಣವಾಗಿ ಕೈಗೊಳ್ಳಲು ರಚಿಸಲಾಗಿದೆ. ಅಲ್ಲದೇ ಸದರಿ ಉಪಸಮಿತಿಯಲ್ಲಿ ಸೈಯದ್ ಇಸಾಕ್ ರವರಿಗೂ ವಿಶೇಷ ಆಹ್ವಾನಿತ ಸದಸ್ಯ ಸ್ಥಾನ ನೀಡಲಾಗಿದೆ. 

ಗ್ರಂಥಾಲಯ ನಿರ್ಮಾಣಕ್ಕೆ ಅಧಿಕೃತವಾಗಿ ಇಲಾಖೆ ಮುಖಾಂತರ ದೇಣಿಗೆ ನೀಡಿರುವ ಯಾವುದೇ ವ್ಯಕ್ತಿಗಳು, ಸಂಘ-ಸಂಸ್ಥೆಗಳು ಸದರಿ ಸಮಿತಿ ಸಭೆಯ ಪ್ರಕ್ರಿಯೆಗಳನ್ನು ವೀಕ್ಷಿಸಬಹುದಾಗಿದೆ ಮತ್ತು ವಿವರಗಳನ್ನು ಪಡೆಯಬಹುದಾಗಿದೆ. ಗ್ರಂಥಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಲಹೆ-ಸೂಚನೆಗಳನ್ನು ನೀಡಬಹುದಾಗಿದೆ. 

ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಎ.24  ರ “ವಿಶ್ವ ಪುಸ್ತಕ ದಿನಾಚರಣೆ” ಯಂದು ಪ್ರಾರಂಭಿಸಲು ಮೈಸೂರು ನಗರ ಗ್ರಂಥಾಲಯ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಪ್ರಸ್ತುತ ಕೋವಿಡ್ ಸೋಂಕು ಮೈಸೂರಿನಲ್ಲಿ ತೀರಾ ಉಲ್ಭಣಗೊಂಡಿರುವುದರಿಂದ ಮತ್ತು ಯಾವುದೇ ಸಭೆ, ಸಮಾರಂಭಗಳನ್ನು ಈ ಸಂದರ್ಭದಲ್ಲಿ ನಡೆಸದಿರುವ ಬಗ್ಗೆ ಸರ್ಕಾರದಿಂದ ಆದೇಶವಾಗಿರುವುದರಿಂದ ಈ ಸಂಬಂಧ ಅನುಮತಿ/ಮಾರ್ಗದರ್ಶನ ಕೋರಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಕೋರಿದ್ದು, ಮಾನ್ಯರ ಆದೇಶದಂತೆ ಕ್ರಮವಹಿಸಲಾಗುವುದು. ಎ.23 ರಂದು ಅನುಮತಿ ದೊರೆಯದಿದ್ದಲ್ಲಿ, ಆದಷ್ಟು ಶೀಘ್ರವಾಗಿ ಅನುಮತಿ ಪಡೆದು ದಿನಾಂಕ ನಿಗದಿ ಪಡಿಸಲಾಗುವುದು ಎಂದು ಮುಡಾ ಆಯುಕ್ತರು ಮತ್ತು ಮೈಸೂರು ನಗರಪಾಲಿಕೆ ಆಯುಕ್ತರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News