×
Ad

1,500 ಟನ್ ಆಕ್ಸಿಜನ್‍ಗೆ ಕೇಂದ್ರ ಸರಕಾರಕ್ಕೆ ಮನವಿ: ಸಚಿವ ಡಾ.ಕೆ.ಸುಧಾಕರ್

Update: 2021-04-21 22:41 IST

ಬೆಂಗಳೂರು, ಎ. 21: ರಾಜ್ಯಕ್ಕೆ ಪ್ರತಿದಿನ 1,500 ಮೆಟ್ರಿಕ್ ಟನ್ ಆಕ್ಸಿಜನ್ ನಿಗದಿಪಡಿಸಿ ಪೂರೈಸುವಂತೆ ಕೇಂದ್ರ ಸರಕಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೋರಿದ್ದಾರೆ. ನಾನು ಈ ಬಗ್ಗೆ ಕೇಂದ್ರಕ್ಕೆ ಮನವಿ ಮಾಡಿದ್ದು, ಕೇಂದ್ರ ಸರಕಾರ ಇದಕ್ಕೆ ಸ್ಪಂದಿಸಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ದಿನಕ್ಕೆ 300 ಟನ್ ಆಕ್ಸಿಜನ್ ನಿಗದಿಪಡಿಸಲಾಗಿದೆ. ಕೊರೋನ ಪ್ರಕರಣ ಹೆಚ್ಚುತ್ತಿರುವುದರಿಂದ ಈ ತಿಂಗಳ ಕೊನೆಗೆ 500-600 ಟನ್ ಆಕ್ಸಿಜನ್ ಬೇಕಾಗುತ್ತದೆ. ಮುಂದಿನ ತಿಂಗಳ ಕೊನೆಗೆ 1,500 ಟನ್ ಆಕ್ಸಿಜನ್ ಬೇಕಾಗುತ್ತದೆ. ಇಷ್ಟು ಪ್ರಮಾಣದ ಆಕ್ಸಿಜನ್ ನೀಡಬೇಕೆಂದು ಸಿಎಂ ಕೇಂದ್ರಕ್ಕೆ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

ಕೊರೋನ ಪಾಸಿಟಿವ್ ಬಂದ ಕೂಡಲೇ ಆಸ್ಪತ್ರೆಗೆ ದಾಖಲಾಗುವ ಮಟ್ಟಿಗೆ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಶೇ.90ರಷ್ಟು ರೋಗಿಗಳಿಗೆ ಆಸ್ಪತ್ರೆ ಅಗತ್ಯವಿಲ್ಲ. ಮನೆಯಲ್ಲೇ ಇದ್ದು ಚಿಕಿತ್ಸೆ ಮಾಡಿಕೊಳ್ಳಬಹುದು. ನಮ್ಮ ವೈದ್ಯರು ಮನೆಗೆ ಭೇಟಿ ನೀಡುವ, ರೋಗಿಗಳ ಆರೋಗ್ಯದ ಮೇಲೆ ನಿಗಾ ಇರಿಸುವ ಕೆಲಸ ಮಾಡುತ್ತಾರೆ. ಯಾವುದನ್ನು ಮಾಡಬೇಕು, ಮಾಡಬಾರದು ಎಂಬ ಬಗ್ಗೆ ಹೆಚ್ಚು ಪ್ರಚಾರ ಮಾಡಲಾಗುವುದು ಎಂದು ವಿವರಿಸಿದರು.

ಕಡಿಮೆ ರೋಗ ಲಕ್ಷಣವಿದ್ದರೆ ಹೋಟೆಲ್‍ಗಳಲ್ಲಿ ರೂಪಿಸಿದ ಪರ್ಯಾಯ ಆಸ್ಪತ್ರೆಗೆ ಸೇರಬಹುದು. ಸಣ್ಣ ಲಕ್ಷಣವಿರುವವರು ಆಸ್ಪತ್ರೆಗೆ ದಾಖಲಾದರೆ, ಚಿಕಿತ್ಸೆ ಅಗತ್ಯವಿರುವ ರೋಗಿಯ ಹಾಸಿಗೆ ಕಿತ್ತುಕೊಂಡಂತಾಗುತ್ತದೆ. ಅಂತಹ ತೀವ್ರ ರೋಗಿಗಳಿಗೆ ಆಕ್ಸಿಜನ್, ವೆಂಟಿಲೇಟರ್ ದೊರೆಯುವಂತೆ ಮಾಡಬೇಕಿದೆ. ವೈದ್ಯರು ರೋಗಿಯನ್ನು ಪರೀಕ್ಷಿಸಿ ಅಗತ್ಯವಿದ್ದರೆ ಮಾತ್ರ ದಾಖಲಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಹಾಸಿಗೆ ಮೀಸಲು: ಬೆಂಗಳೂರಿನಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳು 4 ಸಾವಿರ ಹಾಸಿಗೆ ಕೋವಿಡ್‍ಗೆ ನೀಡಿವೆ. ಸರಕಾರಿ ಮೆಡಿಕಲ್ ಕಾಲೇಜುಗಳು 1 ಸಾವಿರ ಹಾಸಿಗೆ, ಸರಕಾರಿ ಆಸ್ಪತ್ರೆಗಳು 1,409 ಹಾಗೂ ಖಾಸಗಿ ಆಸ್ಪತ್ರೆಗಳು 7,442 ಹಾಸಿಗೆಯನ್ನು ಕೋವಿಡ್‍ಗೆ ಮೀಸಲಿಟ್ಟಿವೆ. ಈ ಕುರಿತು ವೆಬ್ ಪೋರ್ಟಲ್‍ನಲ್ಲೇ ಮಾಹಿತಿ ಲಭ್ಯವಿದೆ. ಈ ವ್ಯವಸ್ಥೆಯನ್ನು ರಾಜ್ಯದ ಮಟ್ಟದಲ್ಲಿ ಜಾರಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಯುವಜನರು ತಮ್ಮ ಕುಟುಂಬದ ಹಿರಿಯರಿಗೆ ಲಸಿಕೆ ನೀಡಿ ಜವಾಬ್ದಾರಿ ಮೆರೆಯಬೇಕು. ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಿರಿ. ದೇಶದಲ್ಲಿ 12.7 ಕೋಟಿ ಲಸಿಕೆ ಡೋಸ್ ನೀಡಲಾಗಿದೆ. ಈ ಪೈಕಿ ಶೇ.99.96ರಷ್ಟು ಜನರಿಗೆ ಕೊರೋನ ಸೋಂಕು ಬಂದಿಲ್ಲ. ಸಾವಿನ ಪ್ರಮಾಣದ ಬಗ್ಗೆ ಆತಂಕ ಬೇಡ. ವೆಂಟಿಲೇಟರ್‍ಗಳನ್ನು ಖಾಸಗಿ ಮೆಡಿಕಲ್ ಕಾಲೇಜು, ಆಸ್ಪತ್ರೆಗಳಿಗೆ ನೀಡಲಾಗಿದೆ ಎಂದು ಸಚಿವ ಸುಧಾಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News