×
Ad

ರೆಮ್‍ಡೆಸಿವಿರ್, ಆಮ್ಲಜನಕದ ಕೊರತೆ ಇಲ್ಲ: ಮುಖ್ಯಮಂತ್ರಿಗೆ ಹಲವು ಪ್ರಮುಖ ಆಸ್ಪತ್ರೆಗಳ ಮುಖ್ಯಸ್ಥರ ಸ್ಪಷ್ಟನೆ

Update: 2021-04-21 23:47 IST

ಬೆಂಗಳೂರು, ಎ.21: ರಾಜ್ಯದಲ್ಲಿ ರೆಮ್‍ಡೆಸಿವಿರ್ ಇಂಜಕ್ಷನ್‍ನ ದಾಸ್ತಾನಿನ ಕೊರತೆ ಹಾಗೂ ಆಮ್ಲಜನಕದ ಕೊರತೆಯೂ ಇಲ್ಲ. ಇನ್ನು 15 ದಿನಗಳಲ್ಲಿ ರೆಮ್‍ಡೆಸಿವಿರ್ ಇಂಜಕ್ಷನ್ ದಾಸ್ತಾನು ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಸ್ಪಷ್ಟಪಡಿಸಿದ ಹಲವು ಪ್ರಮುಖ ಆಸ್ಪತ್ರೆಗಳ ಮುಖ್ಯಸ್ಥರು ಈ ನಿಟ್ಟಿನಲ್ಲಿ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಅವರಿಗೆ ಬುಧವಾರ ಭರವಸೆ ನೀಡಿದ್ದಾರೆ. 

ಕೊರೋನ ದೃಢಪಟ್ಟು ಮಣಿಪಾಲ ಆಸ್ಪತ್ರೆಗೆ ದಾಖಲಾಗಿರುವ ಸಿಎಂ ಅವರು ತಮ್ಮ ಆಸ್ಪತ್ರೆಯ ಕೊಠಡಿಯಿಂದಲೇ ಪ್ರಮುಖ ಆಸ್ಪತ್ರೆಗಳ ಮುಖ್ಯಸ್ಥರೊಡನೆ ವೀಡಿಯೋ ಸಂವಾದ ನಡೆಸಿ, ದೇವರಿಗೆ ಸರಿಸಮಾನರೆಂದೇ ಪರಿಗಣಿಸುವ ವೈದ್ಯ ವೃಂದ ರಾಜ್ಯದ ಜನತೆಗೆ, ಅದರಲ್ಲೂ ವಿಶೇಷವಾಗಿ ಬಡಜನತೆಗೆ, ಸಂಕಷ್ಟದ ಈ ಕಾಲದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಸೇವೆಯನ್ನು ಅತ್ಯಂತ ಪ್ರೀತಿಯಿಂದ ಒದಗಿಸಿ ವೃತ್ತಿಧರ್ಮದ ಕೀರ್ತಿ-ಗೌರವಗಳನ್ನು ಕಾಪಾಡಬೇಕು ಎಂದು ಕಳಕಳಿಯ ಮನವಿ ಮಾಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರೂ ಈ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು. 

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ 750 ಹಾಸಿಗೆಗಳು ಲಭ್ಯವಿದ್ದು, ಅದರಲ್ಲಿ 66 ಹಾಸಿಗೆಗಳಿಗೆ ವೆಂಟಿಲೇಟರ್ ಸೌಲಭ್ಯ ಇದೆ ಹಾಗೂ ಕ್ರಿಟಿಕಲ್ ಕೇರ್ ಯೂನಿಟ್‍ನಲ್ಲಿ 50 ಹಾಸಿಗೆಗಳ ಸೌಲಭ್ಯವಿದೆ. ಟ್ರಾಮಾಕೇರ್ ಬ್ಲಾಕ್‍ನಲ್ಲಿ 300 ಹಾಸಿಗೆಗಳು ಇದ್ದು, ಐಸಿಯು ಮತ್ತು ಕ್ರಿಟಿಕಲ್ ಕೇರ್ ಯೂನಿಟ್ ಹಾಸಿಗೆಗಳೆಲ್ಲವೂ ಭರ್ತಿಯಾಗಿವೆ. ಬುಧವಾರದಿಂದ ಟವರ್ ಬ್ಲಾಕ್‍ನಲ್ಲಿ ಇರುವ ಹಾಸಿಗೆಗಳನ್ನೂ ಹಂಚಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದ ಮುಖ್ಯಸ್ಥರೂ ಆಗಿರುವ ವಿಕ್ಟೋರಿಯಾ ಆಸ್ಪತ್ರೆ ನಿರ್ದೇಶಕ ಡಾ.ಜಯಂತಿ ಅವರು ಮುಖ್ಯಮಂತ್ರಿಗೆ ಮಾಹಿತಿ ನೀಡಿದರು.

ಸಾರ್ವಜನಿಕರು ರೋಗದ ಲಕ್ಷಣ ಕಾಣಿಸಿಕೊಂಡ ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಂಡಲ್ಲಿ ಈ ಸೋಂಕು ಇತರರಿಗೆ ಹರಡದಂತೆ ತಡೆಗಟ್ಟಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ನಗರದ ಕೆ.ಸಿ.ಜನರಲ್ ಆಸ್ಪತ್ರೆಯ ಮುಖ್ಯಸ್ಥ ಡಾ.ವೆಂಕಟೇಶಯ್ಯ ಅವರು ಮಾತನಾಡಿ, ತಮ್ಮ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗಾಗಿ 135 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಇತ್ತೀಚೆಗೆ ಪ್ರಾರಂಭಿಸಿರುವ ಕೋವಿಡ್-19ರ ತೀವ್ರ ನಿಗಾ ಘಟಕದಲ್ಲಿ ಪ್ರತಿದಿನ 20 ಕೋವಿಡ್ ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ತಮ್ಮ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ 13,000 ಹೆಚ್ಚು ಜನರು ಕೋವಿಡ್ ಲಸಿಕೆಯನ್ನು ಪಡೆದಿರುತ್ತಾರೆ.

ನಗರದ ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜ್ ಅಂಡ್ ರಿಸರ್ಚ್ ಸೆಂಟರ್ ನ ತಜ್ಞ ಡಾ.ಮನೋಜ್ ಅವರು, ತಮ್ಮ ವ್ಯಾಪ್ತಿಯ ಬೌರಿಂಗ್ ಆಸ್ಪತ್ರೆ, ಚರಕ ಆಸ್ಪತ್ರೆ ಹಾಗೂ ಘೋಷ್ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗಾಗಿ ಒಟ್ಟು 160 ಹಾಸಿಗೆಗಳು ಲಭ್ಯವಿದೆ. ಎಲ್ಲಾ ಹಾಸಿಗೆಗಳೂ ಭರ್ತಿಯಾಗಿವೆ. ಈ ಪ್ರದೇಶದಲ್ಲಿ ಅತೀ ಹೆಚ್ಚಿನ ಬೇಡಿಕೆ ಇರುವ ಕಾರಣ ಹೆಚ್ಚಿನ ಸೌಲಭ್ಯಗಳನ್ನು ವಿಸ್ತರಿಸಿ ಈಗಾಗಲೇ 205 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಅಲ್ಲದೆ, ಗರ್ಭಿಣಿ ಸ್ತ್ರೀಯರಿಗೆ ಕೋವಿಡ್ ಕಾಣಿಸಿಕೊಂಡಲ್ಲಿ ಬಹುತೇಕರು ಘೋಷ್ ಆಸ್ಪತ್ರೆಗೆ ದಾಖಲಾಗುತ್ತಾರೆ. ಪ್ರಸ್ತುತ 56 ಗರ್ಭಿಣಿ ಕೋವಿಡ್ ಸೋಂಕಿತರಲ್ಲಿ 43 ಗರ್ಭಿಣಿಯರಿಗೆ ಸುಗಮವಾಗಿ ಹೆರಿಗೆ ಮಾಡಿಸಲಾಗಿದೆ. ಉಳಿದವರೂ ಕೂಡಾ ಆರೋಗ್ಯವಾಗಿದ್ದಾರೆ.

ಸಿ.ವಿ. ರಾಮನ್ ಜನರಲ್ ಆಸ್ಪತ್ರೆಯ ಡಾ.ರಾಧಾಕೃಷ್ಣ ಅವರು ಮಾತನಾಡಿ, ನಮ್ಮ ಆಸ್ಪತ್ರೆ ಸಂಪೂರ್ಣವಾಗಿ ಕೋವಿಡ್‍ಗಾಗಿ ಮೀಸಲಿರಿಸಲಾಗಿದ್ದು, ಕಳೆದ ಒಂದು ವರ್ಷದಿಂದ ಕೋವಿಡ್ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಇಲ್ಲಿ ಸಿಬ್ಬಂದಿಗಳು ಹೆಚ್ಚಿನ ಅನುಭವವನ್ನು ಹೊಂದಿರುತ್ತಾರೆ. ಮೊದಲನೇ ಅಲೆ ಹೋಲಿಸಿ ನೋಡಿದ್ದಲ್ಲಿ ಎರಡನೇ ಅಲೆಯಲ್ಲಿ ಬಹುತೇಕರು ಸೋಂಕಿನ ಲಕ್ಷಣ ಹೊಂದಿರಲಾರದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದರು.

ಸರಕಾರದ ಪ್ರಧಾನ ಕಾರ್ಯದರ್ಶಿ ಜಾವೇದ್ ಅಕ್ತರ್ ಮಾತನಾಡಿ, ಮುಖ್ಯಮಂತ್ರಿಗಳು ಒಂದು ಗಂಟೆಗೂ ಹೆಚ್ಚಿನ ಸಮಯ ಬೆಂಗಳೂರಿನ ವಿವಿಧ ಆಸ್ಪತ್ರೆಗಳ ಮುಖ್ಯಸ್ಥರು, ವೈದ್ಯರು, ಸಿಬ್ಬಂದಿಗಳು ಸೇರಿದಂತೆ ಕೋವಿಡ್ ಸೋಂಕಿತರ ಸಂಬಂಧಿಕರ ಜೊತೆ ನಡೆಸಿದ ಮಾತುಕತೆಯ ವಿವರಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News