ಕೊರೋನಕ್ಕಿಂತ ಅಪಾಯಕಾರಿ ವೈರಸ್

Update: 2021-04-22 05:24 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮಹಾಭಾರತದಲ್ಲಿ ಶಿಖಂಡಿಯನ್ನು ಮುಂದಿಟ್ಟುಕೊಂಡು ಭೀಷ್ಮನನ್ನು ಕೊಲ್ಲುವ ಪ್ರಕರಣವೊಂದು ಬರುತ್ತದೆ. ಶಿಖಂಡಿಯ ಜೊತೆಗೆ ಯುದ್ಧ ಮಾಡುವುದಿಲ್ಲ ಎಂದು ಭೀಷ್ಮಾಚಾರ್ಯರು ಪ್ರತಿಜ್ಞೆ ಮಾಡಿರುವುದರಿಂದ, ಭೀಷ್ಮನನ್ನು ಹಣಿಯಲು ಕೃಷ್ಣ ಮಾಡುವ ಉಪಾಯವಿದು. ಶಿಖಂಡಿ ನೆಪಮಾತ್ರಕ್ಕೆ ರಥದಲ್ಲಿ ಕೂತಿರುತ್ತಾನೆ. ಶಿಖಂಡಿಯನ್ನು ನೋಡಿ ಭೀಷ್ಮಾಚಾರ್ಯರು ಶಸ್ತ್ರ ತ್ಯಜಿಸುತ್ತಾರೆ. ಇದೇ ಸಂದರ್ಭವನ್ನು ಬಳಸಿಕೊಂಡು ಅರ್ಜುನ ಭೀಷ್ಮರ ಮೇಲೆ ಬಾಣ ಬಿಡುತ್ತಾನೆ. ದೇಶ ಮೃತದೇಹಗಳ ಸುಡುಗಾಡಾಗಿ ಪರಿವರ್ತನೆಯಾಗುತ್ತಿದೆ. ಇಷ್ಟೆಲ್ಲ ಸಾವು ನೇರವಾಗಿ ಕೊರೋನದಿಂದಲೇ ಸಂಭವಿಸಿತೇ? ಎಂದು ಪ್ರಶ್ನಿಸಿದರೆ ಅದಕ್ಕೆ ಸ್ಪಷ್ಟ ಉತ್ತರಗಳನ್ನು ನೀಡಲು ವೈದ್ಯರು ತಡಕಾಡುತ್ತಾರೆ. ನೀವು ಯಾವುದೇ ರೋಗಗಳನ್ನು ಹೊತ್ತುಕೊಂಡು ಆಸ್ಪತ್ರೆಗೆ ತೆರಳಿ, ಅಲ್ಲಿ ನಿಮಗೆ ಕೊರೋನ ಇದೆ ಎಂದು ಖಾತ್ರಿಯಾದಾಕ್ಷಣ ವೈದ್ಯರು ಶಸ್ತ್ರ ತ್ಯಜಿಸಿ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ. ಪ್ರಾಣಕ್ಕೆ ಕುತ್ತು ಉಂಟು ಮಾಡುವ ರೋಗವನ್ನು ಬದಿಗಿಟ್ಟು, ಕೊರೋನದ ಬಗ್ಗೆ ಅವರು ಚಿಂತಿಸತೊಡಗುತ್ತಾರೆ. ಕೊರೋನ ಸೋಂಕಿತ ವ್ಯಕ್ತಿಯಾಗಿದ್ದರೆ ಆತನನ್ನು ಆಸ್ಪತ್ರೆಯಿಂದ ಸಾಗ ಹಾಕುವುದಕ್ಕೆ ಮುಂದಾಗುವ ವೈದ್ಯರೇ ಅಧಿಕ. ಇಂದು ಉಸಿರಾಟಕ್ಕೆ ಸಂಬಂಧಿಸಿದ ರೋಗಿಗಳಷ್ಟೇ ಸಾಯುತ್ತಿರುವುದಲ್ಲ, ಕಿಡ್ನಿ ವೈಫಲ್ಯ, ಕ್ಯಾನ್ಸರ್, ಟಿಬಿ ಮೊದಲಾದ ಕಾಯಿಲೆಯಿರುವ ರೋಗಿಗಳನ್ನು ಆಸ್ಪತ್ರೆ ಸ್ವೀಕರಿಸಲು ಹಿಂದೇಟು ಹಾಕುತ್ತಿವೆ ಅಥವಾ ಆಸ್ಪತ್ರೆಗಳು ಅವರಿಗೆ ತಕ್ಷಣ ಸ್ಪಂದಿಸುತ್ತಿಲ್ಲ.

ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಲ್ಲಿ ಕೊರೋನ ಸೋಂಕು ಕಂಡು ಬಂದಾಗ ಖ್ಯಾತ ಆಸ್ಪತ್ರೆಯೊಂದು ಅವರಿಗೆ ಬೆಡ್ ನೀಡಲು ನಿರಾಕರಿಸಿತು. ಅವರ ಪರವಾಗಿ ಸಚಿವರೇ ಫೋನಾಯಿಸಿದರೂ ಖಾಲಿ ಬೆಡ್‌ಗಳಿಲ್ಲ ಎಂದು ಆಸ್ಪತ್ರೆ ಕೈ ತೊಳೆದುಕೊಂಡಿತು. ಒಬ್ಬ ಮಾಜಿ ಮುಖ್ಯಮಂತ್ರಿಗೆ ಆಸ್ಪತ್ರೆಗಳಲ್ಲಿ ಬೆಡ್‌ಗಳಿಲ್ಲ ಎಂದ ಮೇಲೆ, ಜನಸಾಮಾನ್ಯರ ಸ್ಥಿತಿ ಇನ್ನೇನಾಗಬೇಕು? ಆಸ್ಪತ್ರೆಗಳು ಚಿಕಿತ್ಸೆ ನೀಡಲು ಹಿಂದೇಟು ಹಾಕಿದ ಕಾರಣದಿಂದ ರೋಗಿಯೊಬ್ಬ ಬೆಂಗಳೂರಿನ ರಸ್ತೆ ಬದಿಯಲ್ಲಿ ಉಸಿರಾಟಕ್ಕೆ ಒದ್ದಾಡುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಕೊರೋನದ ಎರಡನೆಯ ಅಲೆಯ ವಿಶೇಷವೆಂದರೆ, ಈ ಬಾರಿ ಆಸ್ಪತ್ರೆಗಳ ಬೆಡ್‌ಗಳು ‘ಕಾಳಸಂತೆ’ಯಲ್ಲಿ ಮಾರಾಟವಾಗುತ್ತಿವೆ. ಆಸ್ಪತ್ರೆಗಳು ಮತ್ತು ರೋಗಿಗಳ ನಡುವೆ ಮಧ್ಯವರ್ತಿಗಳು ಹುಟ್ಟಿಕೊಂಡಿದ್ದಾರೆ. ಒಂದು ಬೆಡ್‌ಗೆ ಇಷ್ಟು ಎನ್ನುವ ದರವೂ ನಿಗದಿಯಾಗಿದೆ. ಮಧ್ಯವರ್ತಿಗಳಿಗೆ ಆಸ್ಪತ್ರೆ ಮತ್ತು ರೋಗಿಗಳು ಇಬ್ಬರು ತಮ್ಮ ತಮ್ಮ ಪಾಲನ್ನು ನೀಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ, ರೆಮ್‌ಡೆಸಿವಿರ್‌ನ ಅಕ್ರಮ ದಾಸ್ತಾನು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಮುಖಂಡರೇ ಅಕ್ರಮವಾಗಿ ಸಂಗ್ರಹಿಸಿ ಸಿಕ್ಕಿ ಬಿದ್ದಿದ್ದಾರೆ. ಈ ಔಷಧಿಯ ಕಾಳದಂಧೆಯೂ ವಿಪರೀತವಾಗಿದೆ. ಆದುದರಿಂದಲೇ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರೋಗಿಯ ಸಾವಿನಿಂದ ಕುಟುಂಬಸ್ಥರ ನೋವು ಮುಗಿಯುವುದಿಲ್ಲ. ಬದಲಿಗೆ ಆತನ ಮೃತದೇಹಗಳ ಅಂತ್ಯಕ್ರಿಯೆಯೂ ಒಂದು ಹೊರೆಯಾಗಿ ಪರಿಣಮಿಸಿದೆ. ಮೃತದೇಹವನ್ನು ಸಾಗಿಸಲು ಆ್ಯಂಬುಲೆನ್ಸ್ ಚಾಲಕ 60,000 ರೂ. ಬೇಡಿಕೆಯಿಟ್ಟಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. 3,500 ರೂ. ಬದಲಿಗೆ ಚಾಲಕ 60,000 ರೂ. ಕೇಳಿದ್ದಾನೆ ಎಂದರೆ, ಈ ಕೊರೋನವನ್ನು ಮುಂದಿಟ್ಟು ನಡೆಯುವ ವಿವಿಧ ಕಾಳದಂಧೆಯ ಸ್ವರೂಪ ಅದೆಷ್ಟು ದೊಡ್ಡದಿರಬಹುದು?

 ವಿಪರ್ಯಾಸವೆಂದರೆ, ಸ್ಮಶಾನಗಳಿಗಾಗಿಯೂ ಸಂತ್ರಸ್ತರು ಸಾಲುಗಟ್ಟಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಘನತೆಯ ಅಂತ್ಯಸಂಸ್ಕಾರವನ್ನು ಒದಗಿಸಿ ಕೊಡುವಲ್ಲೂ ಸರಕಾರ ಸಂಪೂರ್ಣ ವಿಫಲವಾಗಿದೆ. ಹಲವೆಡೆ ಸ್ಮಶಾನಗಳಲ್ಲಿ ಕೊರೋನ ಸೋಂಕಿತರ ಅಂತ್ಯಸಂಸ್ಕಾರಗಳಿಗೆ ಅಡೆತಡೆಗಳು ಎದುರಾಗಿವೆ. ಇದು ಕೇವಲ ಕರ್ನಾಟಕಕ್ಕಷ್ಟೇ ಸೀಮಿತವಾಗಿಲ್ಲ. ಪ್ರಧಾನಿ ಮೋದಿಯ ಗುಜರಾತ್‌ನಲ್ಲಿ ಜನರು ಹೆಣಗಳನ್ನಿಟ್ಟು ರೋದಿಸುತ್ತಿದ್ದಾರೆ. ಬಡವರ ಬದುಕನ್ನು ಕೇಳುವವರೇ ಇಲ್ಲದಂತಾಗಿದೆ. ಕೆಲವೆಡೆ ಸಿಲಿಂಡರ್‌ಗಳಿಗಾಗಿ ಘರ್ಷಣೆಗಳು ನಡೆಯುತ್ತಿವೆ. ಮಧ್ಯಪ್ರದೇಶದಲ್ಲಿ ಆಸ್ಪತ್ರೆಯಿಂದ ಆಮ್ಲ ಜನಕ ಸಿಲಿಂಡರ್‌ಗಳ ಕಳ್ಳತನವಾಗಿದೆ. ಇದೇ ಸಂದರ್ಭದಲ್ಲಿ ನಾಸಿಕ್‌ನಲ್ಲಿ ಇನ್ನೊಂದು ಭೀಕರ ದುರಂತ ಸಂಭವಿಸಿದೆ. ಆಮ್ಲಜನಕ ಸೋರಿಕೆಯಾಗಿ ಆಸ್ಪತ್ರೆಯಲ್ಲಿದ್ದ 20ಕ್ಕೂ ಅಧಿಕ ಕೊರೋನ ಸೋಂಕಿತರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಈ ಸಾವು ಸಂಭವಿಸಿರುವುದು ಆಸ್ಪತ್ರೆಯ ಬೇಜವಾಬ್ದಾರಿಯಿಂದ. ಇಂತಹ ಬೇಜವಾಬ್ದಾರಿಗಳೇ ದೇಶದಲ್ಲಿ ಕೊರೋನಾ ಸಾವಿನ ಸಂಖ್ಯೆಯನ್ನು ಹೆಚ್ಚಿಸುತ್ತಿವೆ. ಆದರೆ ಈ ಬೇಜವಾಬ್ದಾರಿಗಳೆಲ್ಲವೂ ಕೊರೋನದ ಹೆಸರಿನಲ್ಲಿ ಮುಚ್ಚಿ ಹಾಕಲ್ಪಡುತ್ತಿವೆ.

ಇಂದಿನ ಸಾವು ನೋವುಗಳಿಗೆ ಯಾವುದೇ ರೀತಿಯಲ್ಲೂ ಕೊರೋನ ಕಾರಣವಲ್ಲ. ಕೊರೋನ ಈ ದೇಶಕ್ಕೆ ಕಾಲಿಟ್ಟು ಒಂದು ವರ್ಷ ಕಳೆದಿದೆ. ಅದರ ಬಾಧಕಗಳೆಲ್ಲವನ್ನೂ ಸರಕಾರ ಅರಿತಿದೆ. ಅದರ ವಿರುದ್ಧ ಹೋರಾಡಲು ಕಳೆದ ಒಂದು ವರ್ಷದ ಸಮಯ ಧಾರಾಳವಾಗಿತ್ತು. ಅನಿರೀಕ್ಷಿತವಾಗಿ ಎರಗಿದ ಸಾಂಕ್ರಾಮಿಕ ರೋಗವಾಗಿರುವುದರಿಂದ ಕಳೆದ ಬಾರಿ ಜನರೂ ಸರಕಾರದಿಂದ ವಿಶೇಷ ನಿರೀಕ್ಷೆಗಳನ್ನು ಇಟ್ಟಿರಲಿಲ್ಲ. ಲಾಕ್‌ಡೌನ್ ವಿಧಿಸಿದಾಗ ಅದನ್ನು ಸಹಿಸಿದರು. ಆರ್ಥಿಕ ಸಂಕಟಗಳನ್ನೂ ತಾಳಿಕೊಂಡರು. ಆದರೆ ಈ ಅವಧಿಯಲ್ಲಿ ಕೊರೋನವನ್ನು ಎದುರಿಸಲು ಸರ್ವ ತಯಾರಿಯನ್ನು ಸರಕಾರ ನಡೆಸಬೇಕಾಗಿತ್ತು. ಮುಖ್ಯವಾಗಿ ಆಮ್ಲಜನಕ ಸಿಲಿಂಡರ್‌ಗಳ ಗಣನೀಯ ಸಂಗ್ರಹ ಸರಕಾರದ ಬಳಿ ಇರಬೇಕಾಗಿತ್ತು. ಆದರೆ, ಸರಕಾರ ಈ ಅವಧಿಯಲ್ಲಿ ಆಮ್ಲಜನಕ ಸಿಲಿಂಡರ್‌ಗಳ ರಫ್ತಿಗೆ ಹೆಚ್ಚು ಅವಕಾಶ ನೀಡಿತು. ಒಂದು ಮೂಲದ ಪ್ರಕಾರ ಎಪ್ರಿಲ್ 2020ರಿಂದ ಜನವರಿ 2021ರ ನಡುವೆ ಸರಕಾರ 9,000 ಮೆಟ್ರಿಕ್ ಟನ್‌ಗೂ ಅಧಿಕ ಆಕ್ಸಿಜನ್‌ನ್ನು ರಫ್ತ್ತು ಮಾಡಿದೆ. ಅದಕ್ಕೂ ಹಿಂದೆ ಕೇವಲ 4,500 ಮೆಟ್ರಿಕ್ ಟನ್ ಆಕ್ಸಿಜನ್ ರಫ್ತು ಮಾಡಿತ್ತು. ಕೊರೋನ ಹಿನ್ನೆಲೆಯಲ್ಲಿ ವಿದೇಶಗಳಿಂದ ಆಕ್ಸಿಜನ್‌ಗೆ ಹೆಚ್ಚು ಬೇಡಿಕೆಯಿತ್ತು. ದೇಶದ ಜನರನ್ನು ಮರೆತು, ವಿದೇಶಗಳ ಬೇಡಿಕೆಗಳನ್ನು ಈಡೇರಿಸಿದ ಪರಿಣಾಮವಾಗಿ ಇಂದು ಆಕ್ಸಿಜನ್‌ಗಾಗಿ ಹಾಹಾಕಾರ ಎದ್ದಿದೆ. ರೆಮ್‌ಡೆಸಿವಿರ್ ಕತೆಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಕೊರೋನ ಎರಡನೇ ಅಲೆಯ ಕುರಿತಂತೆ ತಜ್ಞರು ಎಚ್ಚರಿಸಿದ್ದರೂ, ಸರಕಾರ ಅದನ್ನು ನಿರ್ಲಕ್ಷಿಸಿದ ಪರಿಣಾಮವಾಗಿ ದೇಶದಲ್ಲಿ ಕೊರೋನ ಸಾವು ನೋವುಗಳು ಸಂಭವಿಸುತ್ತಿವೆ. ಕೊರೋನವನ್ನು ಎದುರಿಸಲು ಬೇಕಾದ ಪೂರ್ವತಯಾರಿಯನ್ನು ಮಾಡುವ ಬದಲು ಪ್ರಧಾನಿ ಮೋದಿಯವರು ಚುನಾವಣಾ ರ್ಯಾಲಿಗಳಲ್ಲಿ ಮೈಮರೆತರು. ಇದೇ ಸಂದರ್ಭದಲ್ಲಿ ಕುಂಭಮೇಳ, ಕೊರೋನವನ್ನು ಮತ್ತೊಮ್ಮೆ ಅಧಿಕೃತವಾಗಿ ಉದ್ಘಾಟಿಸಿತು. ಕೊರೋನ ಸೋಂಕು ಮಾರಣಾಂತಿಕವಲ್ಲ. ಉಸಿರಾಟದ ತೊಂದರೆಯಿರುವವರಿಗೆ ಮತ್ತು ತೀರಾ ವೃದ್ಧರಿಗಷ್ಟೇ ಇದು ಮಾರಣಾಂತಿಕವಾಗಬಹುದು. ಉಳಿದವರು ತಮ್ಮ ಮನೆಗಳಲ್ಲೇ ಕ್ವಾರಂಟೈನ್ ಮಾಡಿ ಸೋಂಕು ಮುಕ್ತರಾಗಬಹುದು. ದುರದೃಷ್ಟವಶಾತ್ ಬೇರೆ ಮಾರಣಾಂತಿಕ ಕಾಯಿಲೆಗಳುಳ್ಳವರಿಗೆ ಕೊರೋನ ಸೋಂಕಿದ್ದರೆ ಅವರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳು ಹಿಂಜರಿಯುತ್ತಿರುವುದು ಸಾವಿನ ಸಂಖ್ಯೆ ಹೆಚ್ಚಲು ಕಾರಣವಾಗುತ್ತಿದೆ. ಕ್ಯಾನ್ಸರ್ ರೋಗಿಗೆ ಕೊರೋನ ಇರುವ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಅವರು ಮೃತಪಟ್ಟರೆ, ಅವರ ಸಾವನ್ನು ಕೊರೋನ ಖಾತೆಗೆ ಸೇರಿಸಲಾಗುತ್ತಿದೆ. ಕೊರೋನದಂತೆಯೇ ಇನ್ನಿತರ ಮಾರಕರೋಗಗಳಿಗೂ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆಯಾದರೆ ಮಾತ್ರ ಸಾವಿನ ಸಂಖ್ಯೆ ಇಳಿಕೆಯಾಗಬಹುದು. ಒಟ್ಟಿನಲ್ಲಿ ಕೊರೋನ ವೈರಸ್‌ಗಿಂತ, ವ್ಯವಸ್ಥೆಯ ಬೇಜವಾಬ್ದಾರಿ, ಸ್ವಾರ್ಥ, ಭ್ರಷ್ಟಾಚಾರಗಳೇ ಹೆಚ್ಚು ಅಪಾಯಕಾರಿ ಎನ್ನುವುದು ಎರಡನೇ ಅಲೆಯಿಂದ ಇನ್ನೊಮ್ಮೆ ಸಾಬೀತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News