ತಜ್ಞರ ಸಮಿತಿ ವರದಿ ನೀಡಿದ್ದರೂ ಕ್ರಮ ವಹಿಸದೆ ಈಗ ಬೆಲೆ ತೆರುವಂತಾಗಿದೆ: ರಾಜ್ಯ ಸರಕಾರದ ವಿರುದ್ಧ ಸಿ.ಟಿ.ರವಿ ಆಕ್ರೋಶ

Update: 2021-04-22 12:08 GMT

ಬೆಂಗಳೂರು, ಎ. 22: `ಕೊರೋನ ವೈರಸ್ ಸೋಂಕಿನ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಆಲೋಚನೆ ಮಾಡುತ್ತಿಲ್ಲ. ತಜ್ಞರ ಸಮಿತಿ ವರದಿ ನೀಡಿದ್ದರೂ ಈ ಬಗ್ಗೆ ಸರಕಾರ ಕ್ರಮ ವಹಿಸದೆ ಒತ್ತಡಗಳಿಗೆ ಮಣಿದ ಪರಿಣಾಮ ಇದೀಗ ಅದಕ್ಕೆ ತಕ್ಕ ಬೆಲೆ ತೆರುವಂತಾಗಿದೆ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಇಂದಿಲ್ಲಿ ತಮ್ಮ ಸರಕಾರದ ವಿರುದ್ಧವೇ ಆಕ್ರೋಶ ಹೊರಹಾಕಿದ್ದಾರೆ.

ಗುರುವಾರ ಇಲ್ಲಿನ ಮಾಗಡಿ ರಸ್ತೆಯಲ್ಲಿನ ಸುಮನಹಳ್ಳಿ ವಿದ್ಯುತ್ ಚಿತಾಗಾರಕ್ಕೆ ಖುದ್ದು ಭೇಟಿ ನೀಡಿ ಮಾತನಾಡಿದ ಅವರು, ಇಲ್ಲಿಗೆ ವಾಸ್ತವ ಪರಿಸ್ಥಿತಿಯನ್ನು ನೋಡಲು ಬಂದಿದ್ದೇನೆ. ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಪಕ್ಷದಿಂದ ಸ್ವಯಂ ಸೇವಕರನ್ನು ನಿಯೋಜಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ. ನೂರಕ್ಕೂ ಹೆಚ್ಚು ಸ್ವಯಂ ಸೇವಕರು ಕೊರೋನ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.

ಬೆಂಗಳೂರು ನಗರದಲ್ಲಿ ಚಿತಾಗಾರಗಳಲ್ಲಿ ಒತ್ತಡ ಹೆಚ್ಚಾಗಿದೆ. ಮಾಗಡಿ ರಸ್ತೆಯಲ್ಲಿ ದಿನಕ್ಕೆ 16 ಮೃತದೇಹ ವಿಲೇವಾರಿ ಮಾಡುತ್ತಿದ್ದವರು, ಇದೀಗ 40 ಮೃತದೇಹ ದಹನ ಮಾಡುತ್ತಿದ್ದಾರೆ. ಇದರಿಂದ ಸ್ಮಶಾನದಲ್ಲಿ ಸಿಬ್ಬಂದಿ ಕೆಲಸ ಮಾಡಲು ಆಗುತ್ತಿಲ್ಲ. ಇದೊಂದು ದುರ್ದೈವದ ಸಂಗತಿ. ತಾತ್ಕಾಲಿಕ ಚಿತಾಗಾರ ವ್ಯವಸ್ಥೆ ಕಲ್ಪಿಸಲು ಸರಕಾರಕ್ಕೆ ಮನವಿ ಮಾಡಿದ್ದೇನೆ ಎಂದು ಸಿ.ಟಿ.ರವಿ ತಿಳಿಸಿದರು.

ಎಲ್ಲೋ ಬೇರೆ ದೇಶಗಳಲ್ಲಿ ಕೊರೋನ ಸೋಂಕಿನಿಂದ ಆಗುತ್ತಿದ್ದ ಸಾವುಗಳನ್ನು ಕೇಳುತ್ತಿದ್ದ ನಾವಿಂದು ನಮ್ಮ ಮನೆ ಬಾಗಿಲಿನಲ್ಲೇ ಆ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ. ಏಕಾಏಕಿ ಹದಿನೈದು ಪಟ್ಟು ಸೋಂಕಿತರ ಮತ್ತು ಸಾವಿನ ಪ್ರಮಾಣ ಜಾಸ್ತಿಯಾಗಿದೆ. ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಡಿಸಿಎಂ ಅಶ್ವತ್ಥ ನಾರಾಯಣ, ಸಚಿವರಾದ ಸುಧಾಕರ್ ಹಾಗೂ ಆರ್.ಅಶೋಕ್ ಜತೆ ಮಾತನಾಡಿದ್ದೇನೆ. ಜನರು ಸರಕಾರದ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ ಎಂದು ಸಿ.ಟಿ.ರವಿ ಬೇಸರ ವ್ಯಕ್ತಪಡಿಸಿದರು.

ಕೊರೋನ ಸೋಂಕಿತರಿಗೆ ಸೂಕ್ತ ಹಾಸಿಗೆ, ಆಕ್ಸಿಜನ್ ಸಿಗದೇ ಇರುವುದು ಕಳವಳಕಾರಿ ಸಂಗತಿ. ಒಂದೇ ವಾರದಲ್ಲಿ ಹದಿನೈದು ಪಟ್ಟು ರೋಗಿಗಳ ಪ್ರಮಾಣದಲ್ಲಿ ಜಾಸ್ತಿಯಾಗಿದೆ. ಅದಕ್ಕೆ ಸರಕಾರ ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ ಎಂಬುದು ಎದ್ದು ಕಾಣುತ್ತದೆ. ತಜ್ಞರು ನೀಡಿದ ವರದಿಯನ್ನು ಆಧರಿಸಿ ಯಾರ ಮುಲಾಜಿಗೂ ಒಳಗಾಗದೇ ಬಂದ್ ಮಾಡಬೇಕಿತ್ತು ಎಂದ ಸಿ.ಟಿ.ರವಿ, ಆಕ್ಸಿಜನ್ ಪೂರೈಕೆ ಸಂಬಂಧ ಕೇಂದ್ರ ಸಚಿವರೊಂದಿಗೆ ಚರ್ಚಿಸಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News