ರಾಜ್ಯದ ಹಲವೆಡೆ ಕಾರ್ಯಾಚರಣೆಗಿಳಿದ ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳು: ಅಂಗಡಿ, ಮುಂಗಟ್ಟುಗಳು ಬಂದ್

Update: 2021-04-22 18:44 GMT

ಬೆಂಗಳೂರು, ಎ.22: ರಾಜ್ಯದಲ್ಲಿ ಕೊರೋನ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಾರಾಂತ್ಯ ಲಾಕ್‍ಡೌನ್‍ಗೆ ಇನ್ನು ಎರಡು ದಿನ ಬಾಕಿ ಇರುವಾಗಲೇ ಇಂದಿನಿಂದಲೇ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಆಯಾಯ ಜಿಲ್ಲೆಗಳ ಜಿಲ್ಲಾಡಳಿತದ ಸೂಚನೆ ಮೇರೆಗೆ ಬಂದ್ ಮಾಡಲಾಗುತ್ತಿದೆ.

ತುಮಕೂರು: ಜಿಲ್ಲೆಯಲ್ಲಿ ಕೊರೋನ ಸೋಂಕಿನ ಆರ್ಭಟದಿಂದ ಜನತೆ ತಲ್ಲಣಗೊಂಡಿರುವುದರಿಂದ ಎಚ್ಚೆತ್ತಿರುವ ಜಿಲ್ಲಾಡಳಿತ ಕಟ್ಟುನಿಟ್ಟಿನ ಕೋವಿಡ್ ನಿಯಮಗಳ ಜಾರಿಗೆ ಮುಂದಾಗಿದೆ. ಇದರ ಅಂಗವಾಗಿ ಗುರುವಾರ ಬೆಳಗ್ಗೆಯಿಂದಲೇ ಯಾವುದೇ ಅಂಗಡಿ ಮುಂಗಟ್ಟುಗಳು ಬಾಗಿಲು ತೆಗೆಯದಂತೆ ಕ್ರಮ ಕೈಗೊಂಡಿದ್ದು, ಸ್ವತಃ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಅವರು ರಸ್ತೆಗಿಳಿದು ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚಿಸಿದರು.

ಬೆಳ್ಳಂಬೆಳಿಗ್ಗೆಯೇ ರಸ್ತೆಗಿಳಿದಿರುವ ಜಿಲ್ಲಾಡಳಿತದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ನಗರದ ಎಂ.ಜಿ. ರಸ್ತೆ, ಬಿ.ಎಚ್. ರಸ್ತೆ, ಎಸ್.ಎಸ್.ಪುರಂ ಸೇರಿದಂತೆ ವಿವಿಧೆಡೆ ಕಾರ್ಯಾಚರಣೆ ನಡೆಸಿ ವರ್ತಕರು ತೆಗೆದಿದ್ದ ಅಂಗಡಿಗಳನ್ನು ಬಲವಂತವಾಗಿ ಬಾಗಿಲು ಮುಚ್ಚಿಸಿದರು. ನಾಳೆ ರಾತ್ರಿ 9 ರಿಂದ ಆರಂಭವಾಗಲಿರುವ ವಾರಾಂತ್ಯ ಕರ್ಫ್ಯೂ ಬಗ್ಗೆ ತಮ್ಮ ಚಿತ್ತ ಹರಿಸಿದ್ದ ವ್ಯಾಪಾರಿಗಳು, ಸಾರ್ವಜನಿಕರಿಗೆ ಇಂದು ಬೆಳಗ್ಗೆ ದಿಢೀರನೆ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ರಸ್ತೆಗಿಳಿದು ಅಂಗಡಿಗಳ ಬಾಗಿಲು ಮುಚ್ಚಿಸಿದ್ದರಿಂದ ಕೊಂಚ ಬೇಸರಗೊಂಡು ಒಲ್ಲದ ಮನಸ್ಸಿನಿಂದಲೇ ಅಂಗಡಿಗಳಿಗೆ ಬೀಗ ಹಾಕಿದ ದೃಶ್ಯ ಕಂಡು ಬಂತು. 

ವಾರಾಂತ್ಯ ಲಾಕ್‍ಡೌನ್‍ಗೂ ಮುನ್ನವೇ ಯಾವುದೇ ಮುನ್ಸೂಚನೆ ಇಲ್ಲದೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರ ಸೂಚನೆ ಮೇರೆಗೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿರುವುದಕ್ಕೆ ಕೆಲ ವರ್ತಕರು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸರಕಾರವೇ ಕೋವಿಡ್ ಮಾರ್ಗಸೂಚಿ ಪಾಲಿಸಿಕೊಂಡು ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿದೆ. ಆದರೆ ನಗರದಲ್ಲಿ ಅಧಿಕಾರಿಗಳ ಈ ದಿಢೀರ್ ಕ್ರಮ ಅಚ್ಚರಿ ಮೂಡಿಸಿದೆ ಎಂದು ವರ್ತಕರುಗಳು ಅಸಮಾಧಾನ ಹೊರ ಹಾಕಿದ್ದಾರೆ.

ದಾವಣಗೆರೆ: ವ್ಯಾಪಾಕವಾಗಿ ಕೊರೋನ ವೈರಸ್ ಹಬ್ಬುತ್ತಿರುವ ಹಿನ್ನಲೆಯಲ್ಲಿ ಸೋಂಕಿಗೆ ತಡೆ ಹಾಕುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಗುರುವಾರ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸಿತು.

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಡಿಪೇಟೆ, ಗಡಿಯಾರದ ಕಂಬ, ದುರ್ಗಾಂಬಿಕಾ ದೇವಸ್ಥಾನ, ವಿಜಯಲಕ್ಷ್ಮಿ ರಸ್ತೆ, ಚಾಮರಾಜಪೇಟೆ, ಕೆ.ಆರ್.ರಸ್ತೆ, ನರಸರಾಜ ರಸ್ತೆ, ಹಾಸಭಾವಿ ಸರ್ಕಲ್ ಸೇರಿದಂತೆ ಹೆಚ್ಚು ವಹಿವಾಟು ನಡೆಯುವ ಸ್ಥಳಗಳಿಗೆ ತೆರಳಿ ಅಂಗಡಿಗಳನ್ನು ಮುಚ್ಚಿಸುವಲ್ಲಿ ಯಶಸ್ವಿಯಾದರು.

ಕೊರೋನ ಕಠಿಣ ನಿಯಮಗಳ ಹಿನ್ನಲೆಯಲ್ಲಿ ನಗರದಲ್ಲಿರುವ ಬಿ.ಎಸ್. ಚನ್ನಬಸಪ್ಪ ಜವಳಿ ಅಂಗಡಿಗಳನ್ನು ಬಂದ್ ಮಾಡಿಸಲಾಯಿತು. ಬೆಳಗ್ಗೆ ಡೆಂಟಲ್ ಕಾಲೇಜ್ ರಸ್ತೆಯಲ್ಲಿದ್ದ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಅಲ್ಲಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಆಗಮಿಸಿ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಿದರು. 

ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯ ವಸ್ತುಗಳು, ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ತಿಳಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೊರೋನ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆಯೆಂಬುದನ್ನು ನೀವ್ಯಾರೂ ಮರೆಯಬಾರದು. ಮಹಾಮಾರಿ ವೈರಸ್ ನಿಯಂತ್ರಿಸಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯ. ವಾರಾಂತ್ಯದ ಕರ್ಫ್ಯೂ, ರಾತ್ರಿ ಕರ್ಫ್ಯೂನಲ್ಲಿ ಬಸ್ಸು ಸಂಚಾರದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ. ಎಂದಿನಂತೆ ಬಸ್ಸುಗಳ ಸಂಚಾರ ಇರಲಿದೆ ಎಂದು ಸ್ಪಷ್ಟಪಡಿಸಿದರು.

ಚಿಕ್ಕಮಗಳೂರು
ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ನಗರಸಭೆ ಸಿಬ್ಬಂದಿ ನಗರದಲ್ಲಿ ಗುರುವಾರ ಮಧ್ಯಾಹ್ನ ದಿಢೀರ್ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ದರಿಂದ ವ್ಯಾಪಾರಿಗಳು ಗೊಂದಲಕ್ಕೀಡಾಗಿದ್ದಲ್ಲದೇ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ರಾಜ್ಯ ಸರಕಾರ ಕೊರೋನ ಸೋಂಕು ನಿಯಂತ್ರಣದ ಉದ್ದೇಶದಿಂದ ಎ.20ರಿಂದ ಮೇ 4ರವರೆಗೆ ರಾತ್ರಿ 9ರಿಂದ ಬೆಳಗ್ಗೆ 6ವರೆಗೆ ಹಾಗೂ ವಾರಾಂತ್ಯದಲ್ಲಿ ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 6ರವರೆಗೆ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿದೆ. ಈ ಸಂಬಂಧ ಗುರುವಾರ ನಗರಸಭೆಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹಾಗೂ ಎಸ್ಪಿ ಅಕ್ಷಯ್ ಅವರು ಗುರುವಾರ ಬೆಳಗ್ಗೆ ವರ್ತಕರ ಸಭೆ ನಡೆಸಿದ್ದರು.

ಈ ಸಭೆಯಲ್ಲಿ ಎಸ್ಪಿ ಹಾಗೂ ಡಿಸಿ ವರ್ತಕರನ್ನುದ್ದೇಶಿಸಿ ಮಾತನಾಡಿ, ಎ.20ರಿಂದ ಮೇ 4ರವರೆಗೆ ಸರಕಾರ ಜಾರಿ ಮಾಡಿರುವ ರಾತ್ರಿ ಕರ್ಫ್ಯೂ ಹಾಗೂ ಶನಿವಾರ, ರವಿವಾರದ ಕರ್ಫ್ಯೂ ಸಂಬಂಧದ ಮಾರ್ಗಸೂಚಿ ಬಗ್ಗೆ ವಿವರಣೆ ನೀಡಿದ್ದರು. ಕರ್ಫ್ಯೂ ಅವಧಿಯಲ್ಲಿ ಅಗತ್ಯ ವಸ್ತು, ಸೇವೆಗಳ ಅಂಗಡಿ ಮುಂಗಟ್ಟುಗಳನ್ನು ಹೊರತುಪಡಿಸಿ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಬೇಕೆಂದು ಹೇಳಿದ್ದರು. 

ಆದರೆ ಈ ಸಭೆ ಮುಗಿಯುತ್ತಿದ್ದಂತೆ ಪೊಲೀಸರು ಹಾಗೂ ನಗರಸಭೆ ಸಿಬ್ಬಂದಿ ಏಕಾಏಕಿ ನಗರದ ಪ್ರಮುಖ ರಸ್ತೆಗಳಲ್ಲಿದ್ದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾರಂಭಿಸಿದ್ದರು. ಸರಕಾರ ಮಾರ್ಗಸೂಚಿಯಂತೆ ಇಂದಿನಿಂದಲೇ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಆದೇಶವಿದೆ ಎಂದು ಪೊಲೀಸರು ಧ್ವನಿವರ್ಧಕಗಳಲ್ಲಿ ಕರೆ ನೀಡುತ್ತಾ ನಗರದ ಎಲ್ಲ ರಸ್ತೆಗಳಲ್ಲೂ ಸಂಚರಿಸಿದರು. ಇದನ್ನು ಕೇಳಿದ ನಗರದ ಅಂಗಡಿ ಮುಂಗಟ್ಟುಗಳ ಮಾಲಕರ ಕೆಲವರು ಬಾಗಿಲು ಹಾಕಿದರೆ ಕೆಲ ವ್ಯಾಪಾರಿಗಳು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು, ಯಾವುದೇ ಮುನ್ಸೂಚನೆ ನೀಡದೇ ಹೀಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುತ್ತಿರುವುದು ಸರಿಯಲ್ಲ. ಸರಕಾರ ಲಾಕ್‍ಡೌನ್ ಘೋಷಿಸಿಲ್ಲ, ಆದರೆ ಪೊಲೀಸರು ಏಕಾಏಕಿ ಅಂಗಡಿ ಬಾಗಿಲು ಮುಚ್ಚಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

ಆದರೆ ಪೊಲೀಸರು, ಡಿಸಿ, ಎಸ್ಪಿಗಳ ಆದೇಶ ಎಂದು ಹೇಳಿ ಅಗತ್ಯ ವಸ್ತು, ಸೇವೆಗಳ ಅಂಗಡಿ ಮುಂಗಟ್ಟುಗಳನ್ನು ಹೊರತುಪಡಿಸಿ ಬಹುತೇಕ ಎಲ್ಲ ಅಂಗಡಿಗಳ ಬಾಗಿಲು ಹಾಕಿಸಿದರು. ಪೊಲೀಸರು ಹಾಗೂ ನಗರಸಭೆ ಅಧಿಕಾರಿಗಳ ಈ ಕ್ರಮದಿಂದ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದರು. 

ಗುರುವಾರ ಮಧ್ಯಾಹ್ನ 2ರಿಂದ ನಗರದ ಎಂಜಿ ರಸ್ತೆ, ಐಜಿ ರಸ್ತೆ, ಮಾರ್ಕೆಟ್ ರಸ್ತೆ ಸೇರಿದಂತೆ ನಗರದ ಬಹುತೇಕ ರಸ್ತೆಗಳಲ್ಲಿನ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಮಧ್ಯಾಹ್ನದ ವೇಳೆ ನಗರದ ಬಹುತೇಕ ಮಸೀದಿಗಳನ್ನು ಮುಖ್ಯಸ್ಥರು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದರು. ದಿನಸಿ ಅಂಗಡಿ, ಹೂ, ಹಣ್ಣು, ತರಕಾರಿ, ಮೆಡಿಕಲ್ ಶಾಪ್, ಕಟ್ಟಡ ನಿರ್ಮಾಣ ಸಾಮಗ್ರಿ, ಗೊಬ್ಬರ, ಮೀನು ಮಾಂಸದ ಅಂಗಡಿಗಳು, ಮೆಡಿಕಲ್ ಶಾಪ್‍ಗಳು, ಕ್ಲಿನಿಕ್, ಆಸ್ಪತ್ರೆಗಳು, ಸರಕಾರಿ ಕಚೇರಿ, ಕೈಗಾರಿಕೆಗಳು ಮತ್ತಿತರ ಅಗತ್ಯ ವಸ್ತು, ಸೇವೆಗಳ ಚಟುವಟಿಕೆ ಎಂದಿನಂತೆ ಮುಂದುವರಿದಿದೆ. ಸರಕಾರಿ ಸಾರಿಗೆ ಬಸ್‍ಗಳು ಸೇರಿದಂತೆ ಖಾಸಗಿ ಬಸ್‍ಗಳು ಮತ್ತು ಇತರ ಖಾಸಗಿ ವಾಹನಗಳ ಸಂಚಾರ ಅಬಾಧಿತವಾಗಿದೆ.

ಕೊಳ್ಳೇಗಾಲ: ಇಂದಿನಿಂದ ಮೇ4ರವರೆಗೆ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳು ಹಾಗೂ ಶೋರೂಂ ಗಳನ್ನು ದಿನಪೂರ್ತಿ ತೆರೆಯದಂತೆ ಸರ್ಕಾರ ಆದೇಶ ಹೊರಡಿಸಿರುವ ಹಿನ್ನಲೆ ಕಾರ್ಯಚರಣೆಗಿಳಿದ ಪೊಲೀಸರು ಅಂಗಡಿಗಳನ್ನು ಬಂದ್ ಮಾಡಿಸಿದರು.

ಗುರುವಾರ ಮಧ್ಯಾಹ್ನ ಕೊಳ್ಳೇಗಾಲದ ನಗರದಲ್ಲಿ ದಿಢೀರ್ ಕಾರ್ಯಾಚರಣೆಗಿಳಿದ ಪಟ್ಟಣ ಪೊಲೀಸರು ವರ್ತಕರಿಗೆ ಸರ್ಕಾರದ ದಿಢೀರ್ ಆದೇಶವನ್ನು ತಿಳಿಸಿ ಅಂಗಡಿ ಮುಂಗಟ್ಟುಗಳನ್ನು ಬಾಗಿಲು ಮುಚ್ಚಿಸಿದರು.

ಅಗತ್ಯ ಸೇವೆಗಳಾದ ದಿನಸಿ ಅಂಗಡಿಗಳು, ಮೆಡಿಕಲ್, ಹಣ್ಣು ತರಕಾರಿ ಅಂಗಡಿಗಳು ಹಾಲಿನ ಡೈರಿ, ಪಶು ಆಹಾರ, ಗೊಬ್ಬರದ ಅಂಗಡಿಗಳು, ಹೇರ್ ಕಟಿಂಗ್ ಸಲೂನ್ ಮತ್ತು ಬ್ಯೂಟಿ ಪಾರ್ಲರ್ ಗಳು ರಾತ್ರಿ 9 ಗಂಟೆ ತನಕ ಕಾರ್ಯ ನಿರ್ವಹಿಸಲಿವೆ. ಇದರೊಂದಿಗೆ ಹೋಟೆಲ್‌ಗಳು ಮತ್ತು ವೈನ್ ಸ್ಟೋರ್‌ಗಳಲ್ಲಿ ಪಾರ್ಸಲ್ ವ್ಯವಸ್ಥೆ ಮಾತ್ರ ನೀಡಲು ಅವಕಾಶವಿರುತ್ತದೆ.

ಕಟ್ಟಡ ನಿರ್ಮಾಣ ಕಾಮಗಾರಿಗೆ ಸಂಬಂಧ ಪಡುವ ಹಾರ್ಡ್‌ವೇರ್ ಮತ್ತು ಎಲೆಕ್ಟ್ರಿಕಲ್ ಅಂಗಡಿಗಳು ತೆರಯಲು ಅವಕಾಶ ನೀಡಿದ್ದು, ಇನ್ನುಳಿದಂತೆ  ಜವಳಿ ಅಂಗಡಿಗಳು, ಚಿನ್ನದ ಅಂಗಡಿಗಳು, ಪಾತ್ರೆ ಅಂಗಡಿಗಳು, ಶೋರೂಮ್‌ಗಳು ಸೇರಿದಂತೆ ಇತರ ಸೇವೆಗಳನ್ನು ಮೇ 4ರವರೆಗೂ ಬಂದ್ ಮಾಡಲು ಸೂಚಿಸಲಾಗಿದೆ. ಇನ್ನು ಸಾರ್ವಜನಿಕರು ಕೋವಿಡ್‌ನ ಎರಡನೇ ಅಲೆಯನ್ನು ಬ್ರೇಕ್ ಮಾಡುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.

ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಅಂಗಡಿ- ಮುಂಗಟ್ಟುಗಳನ್ನು‌ ಮುಚ್ಚಬೇಕೆಂದು ಆದೇಶ‌ ಬಂದ ಬೆನ್ನಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಪಟ್ಟಣದಾಂದ್ಯತ ಅಗತ್ಯ ಸೇವೆಗಳಿಗೆ ಒಳಪಡದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದರು.

ಕಾರ್ಯಾಚರಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಮಾದೇಗೌಡ, ಪೊಲೀಸ್ ಹೆಡ್ ಕಾನ್ಸ್ ಟೇಬಲ್, ಮುರುಗೇಶ್, ಪ್ರವೀಣ್, ದೊಡ್ಡವೀರಶೆಟ್ಟಿ ಮತ್ತಿತರಿದ್ದರು.

ಮಂಡ್ಯದ ಅಂಗಡಿ ಮುಂಗಟ್ಟುಗಳು ದಿಢೀರ್ ಬಂದ್
ಕೊರೋನ ಹರುಡುವಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ಆದೇಶದಂತೆ ಮಂಡ್ಯ ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳು, ಹೊಟೇಲ್‍ಗಳನ್ನು ಪೊಲೀಸರು ಮತ್ತು ನಗರಸಭೆ ಸಿಬ್ಬಂದಿ ಗುರುವಾರ ಮಧ್ಯಾಹ್ನ ದಿಢೀರ್ ಬಂದ್ ಮಾಡಿದರು.

ಮಧ್ಯಾಹ್ನ 3ರ ವೇಳೆಗೆ ದಿಢೀರ್ ವಾಹನದಲ್ಲಿ ಬಂದ ಪೊಲೀಸರು ಅಗತ್ಯವಸ್ತುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಬಗೆಯ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದರು. ಬಹುತೇಕ ಅಂಗಡಿಗಳನ್ನು ಮಾಲಕರು ಬಂದ್ ಮಾಡಿದರು.

ಸೂಚನೆಯನ್ನು ಪಾಲಿಸದೆ ಕೆಲವು ಅಂಗಡಿಗಳಲ್ಲಿ ವ್ಯಾಪಾರ ಮುಂದುವರಿಯಿತು. ಕೆಲ ಸಮಯದ ನಂತರ ಮತ್ತೆ ಹಾಜರಾದ ಪೊಲೀಸರು ಅವುಗಳನ್ನೂ ಮುಚ್ಚಿಸಿ, ತೆರೆಯದಂತೆ ಎಚ್ಚರಿಕೆ ನೀಡಿದರು.

ಶಿವಮೊಗ್ಗ: ಕೋವಿಡ್ ಎರಡನೇ ಅಲೆ ತೀವ್ರಗತಿಯಲ್ಲಿ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ನೂತನ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಾರ್ಗಸೂಚಿ ಅನ್ವಯ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿ ಉಳಿದೆಲ್ಲಾ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡುವಂತೆ ಸೂಚಿಸಿದೆ. ಇದರನ್ವಯ ಅಂಗಡಿಗಳನ್ನು ಬಂದ್ ಮಾಡಿಸಲಾಯಿತು.

ಶಿವಮೊಗ್ಗ ನಗರದ ವಾಣಿಜ್ಯ ಕೇಂದ್ರಗಳಾದ ಗಾಂಧಿಬಜಾರ್, ನೆಹರು ರಸ್ತೆ ಹಾಗೂ ಬಿ.ಹೆಚ್ ರಸ್ತೆ ಸೇರಿದಂತೆ ಹಲವು ಕಡೆ ಅಂಗಡಿ ಮುಗ್ಗಟ್ಟುಗಳನ್ನು ಪೊಲೀಸರು ಬಂದ್ ಮಾಡಿಸಿದರು.

ಪೊಲೀಸರು ಸಂಜೆ ವೇಳೆಗೆ ಗಸ್ತು ತಿರುಗಿ ಅಂಗಡಿಗಳನ್ನು ಬಂದ್ ಮಾಡಿಸಿದರು. ರಾಜ್ಯ ಸರ್ಕಾರದ ನೂತನ ಮಾರ್ಗಸೂಚಿಯನ್ವಯ ಅಂಗಡಿಗಳನ್ನು  ಬಂದ್ ಮಾಡುವಂತೆ ಮೈಕ್ ನಲ್ಲಿ ಅನೌನ್ಸ್ ಮಾಡಿದರು.

ವರ್ತಕರ ಆಕ್ರೋಶ: ಅತಿ ಹೆಚ್ಚು ಜನಸಂದಣಿ ಸೇರುವ ನಗರದ ಗಾಂಧಿಬಜಾರ್ ನಲ್ಲಿ ಅಂಗಡಿಗಳನ್ನು ದಿಢೀರ್ ಬಂದ್ ಮಾಡುವಂತೆ ಪೊಲೀಸರು ಸೂಚನೆ ನೀಡಿದರು. ಜಿಲ್ಲಾಡಳಿತದ ಈ ನಡೆಗೆ ವರ್ತಕರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ದಿನಕ್ಕೊಂದು ಮಾರ್ಗಸೂಚಿ ಬಿಡುಗಡೆ ಮಾಡುತ್ತಿದೆ. ಇದರಿಂದ ಜನರಲ್ಲಿ ಗೊಂದಲ ನಿರ್ಮಾಣವಾಗುತ್ತಿದೆ. ಕಳೆದ ವರ್ಷದ ಲಾಕ್ ಡೌನ್ ನಿಂದ ವ್ಯಾಪಾರ ವಹಿವಾಟು ಇಲ್ಲದೆ ನಷ್ಟ ಅನುಭವಿಸಿದ್ದೇವೆ. ಈಗ ಮತ್ತೊಮ್ಮೆ ಲಾಕ್ ಡೌನ್ ಮಾಡಿ ಅಂಗಡಿ ಬಂದ್ ಮಾಡಿಸಿದರೆ ಆರ್ಥಿಕ ಹೊಡೆತ ಬಿದ್ದು ಬದುಕು ದುಸ್ತರವಾಗಲಿದೆ ಎಂದು ಗಾಂಧಿ ಬಜಾರ್ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಅಂಗಡಿ ಮುಂಗಟ್ಟುಗಳು ಬಂದ್ ಮಾಡಿಸಿದ ಪೊಲೀಸರು
ಕೋಲಾರ: ರಾಜ್ಯಾದ್ಯಂತ ಕಠಿಣ ಕೊರೋನ ನಿಯಮ ಜಾರಿ ಹಿನ್ನೆಲೆ ಕೋಲಾರ ನಗರದಲ್ಲಿ ಎಲ್ಲಾ ಅಂಗಡಿಗಳನ್ನು ಪೊಲೀಸರು ಬಂದ್ ಮಾಡಿಸಿದರು.

ಕೇವಲ ಅಗತ್ಯ ವಸ್ತುಗಳ ಸೇವೆ ಮಾತ್ರ ಲಭ್ಯವಿತ್ತು. ಮೆಡಿಕಲ್ ಶಾಪ್, ತರಕಾರಿ ಅಂಗಡಿ, ಹಾಲಿನ ಡೈರಿ ಹಾಗೂ ದಿನಸಿ ಅಂಗಡಿಗಳು ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News