ಜಿಲ್ಲಾದ್ಯಂತ ಮೇ 4ರವರೆಗೆ ಕರ್ಫ್ಯೂ ಜಾರಿ: ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್

Update: 2021-04-22 15:18 GMT

ಚಿಕ್ಕಮಗಳೂರು, ಎ,22: ಕೊರೋನ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮೇ 4ರವರೆಗೆ ರಾಜ್ಯ ಸರಕಾರ ಮಾರ್ಗಸೂಚಿಯನ್ನು ಹೊರಡಿಸಿದ್ದು, ಜಿಲ್ಲೆಯಲ್ಲಿ ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸೂಚಿಸಿದ್ದಾರೆ.

ರಾಜ್ಯ ಸರಕಾರ ಹೊರಡಿಸಿರುವ ಹೊಸ ಮಾರ್ಗಸೂಚಿ ಪಾಲನೆ ಕುರಿತು ಗುರುವಾರ ನಗರಸಭೆ ಸಭಾಂಗಣದಲ್ಲಿ ನಡೆದ ಹೊಟೇಲ್ ಮಾಲಕರು, ವರ್ತಕರು ಹಾಗೂ ವಿವಿಧ ಸಂಘ, ಸಂಸ್ಥೆಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್-19 ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಮೇ 4ರವರೆಗೆ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಅಲ್ಲದೇ ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 6ರವರೆಗೆ ಸಂಪೂರ್ಣವಾಗಿ ಕರ್ಫ್ಯೂ ಹೇರಲಾಗಿದ್ದು, ಈ ಬಗ್ಗೆ ಜನರಲ್ಲಿ ಅಧಿಕಾರಿಗಳು ಜಾಗೃತಿ ಮೂಡಿಸಿ ನಿಯಮ ಉಲ್ಲಂಘನೆಯಾಗದಂತೆ ಕ್ರಮ ವಹಿಸಬೇಕು, ಉದ್ದಿಮೆದಾರರು, ವರ್ತಕರು, ಹೊಟೇಲ್ ಮಾಲಕರು ಇದನ್ನು ತಪ್ಪದೇ ಪಾಲಿಸಬೇಕು ಎಂದರು.

ಸರಕಾರದ ಮಾರ್ಗಸೂಚಿಯನ್ವಯ ರಾತ್ರಿ ಕರ್ಫ್ಯೂ ಸಮಯದಲ್ಲಿ ತುರ್ತು ಸಂಚಾರವನ್ನು ಹೊರತುಪಡಿಸಿ ಉಳಿದ ಎಲ್ಲ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಶನಿವಾರ ಮತ್ತು ರವಿವಾರದಂದು ಪೂರ್ತಿ ಕರ್ಫ್ಯೂ ಜಾರಿಯಲ್ಲಿರಲಿದೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಕಾರ್ಯಕ್ರಮವನ್ನು ನಡೆಸುವಂತಿಲ್ಲ ಎಂದ ಅವರು, ದಿನಸಿ ಅಂಗಡಿ, ನ್ಯಾಯಬೆಲೆ ಅಂಗಡಿ, ಆಹಾರ, ಧವಸಧಾನ್ಯ, ಹಣ್ಣು ತರಕಾರಿ, ಹಾಲು, ಮಾಂಸ, ಮೆಡಿಕಲ್‍ ಶಾಪ್‍ಗಳು, ಕ್ಲಿನಿಕ್‍ಗಳು ಮತ್ತಿತರ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶವಿದೆ. ತೆರೆದ ಪ್ರದೇಶಗಳಲ್ಲಿ ಮಾತ್ರ ಸಗಟು, ತರಕಾರಿ, ಹಣ್ಣು ಹೂವು ಮಾರಾಟಕ್ಕೆ ಮಾತ್ರ ಅವಕಾಶವಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದ್ದು, ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಜಿಲ್ಲಾಡಳಿತದೊಂದಿಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದು ತಿಳಿಸಿದರು.

ಜಿಲ್ಲೆ ಸೇರಿದಂತೆ ರಾಜ್ಯದೆಲ್ಲೆಡೆ ಸಿನಿಮಾ ಹಾಲ್, ಶಾಪಿಂಗ್ ಮಾಲ್, ಜಿಮ್, ಯೋಗ ಕೇಂದ್ರ, ಈಜು ಕೊಳ, ಕ್ರೀಡಾಂಗಣ, ಆಡಿಟೋರಿಯಂನಂತಹ ಸ್ಥಳಗಳನ್ನು ತೆರೆಯುವುದನ್ನು ನಿಷೇಧಿಸಲಾಗಿದೆ. ಜಿಲ್ಲೆಯಲ್ಲಿರುವ ಹೊಟೇಲ್ ಮತ್ತು ರೆಸ್ಟೋರೆಂಟ್‍ಗಳು ಹಾಗೂ ಬಾರ್ ಗಳಲ್ಲಿ ಪಾರ್ಸಲ್ ವ್ಯವಸ್ಥೆಗೆ ಅವಕಾಶ ನೀಡಲಾಗಿದೆ. ಲಾಡ್ಜ್ ಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದ ಅವರು, ಜಿಲ್ಲೆಯಲ್ಲಿ ಕೋವಿಡ್-19 ಹರಡುವಿಕೆ ಪ್ರಮಾಣವು ಆರೋಹಣಾ ಸ್ಥಿತಿಯಲ್ಲಿ ಮುಂದುವರಿಯುತ್ತಿರುವುದರಿಂದ ಸರಕಾರದ ಮಾರ್ಗಸೂಚಿಗಳನ್ನು ನಿರ್ಲಕ್ಷಿಸಿದ್ದಲ್ಲಿ ಕೋವಿಡ್ ಹರಡುವಿಕೆಯ ಪ್ರಮಾಣವು ಇನ್ನಷ್ಟು ಹೆಚ್ಚಾಗಲಿದೆ. ಇದು ಸಾಮಾನ್ಯ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಸರಕಾರದ ಈ ಕೋವಿಡ್-19 ಮಾರ್ಗಸೂಚಿ ಮೇ 4ರವರೆಗೆ ಮುಂದುವರಿಯಲಿದ್ದು, ನಂತರ ಸರಕಾರದ ಆದೇಶದಂತೆ ಕ್ರಮವಹಿಸಲಾಗುವುದು ಎಂದು ಹೇಳಿದರು.

ಬೆಂಗಳೂರು ನಗರದದಲ್ಲಿ ಕೋವಿಡ್ ಸೋಂಕು ಉಲ್ಬಣಗೊಳ್ಳುತ್ತಿದ್ದು, ಆಕ್ಸಿಜನ್ ಸಮಸ್ಯೆ, ಹಾಸಿಗೆ ಸಮಸ್ಯೆ ಎದುರಾಗುತ್ತಿದೆ. ಸೋಂಕಿತನ ವ್ಯಕ್ತಿ ಮಾತ್ರವಲ್ಲ ಆತನ ಕುಟುಂಬವೇ ನರಕಯಾತನೆ ಅನುಭವಿಸುತ್ತಿದೆ. ಆದ್ದರಿಂದ 10-15 ದಿನಗಳ ಕಾಲ ಸರಕಾರದ ಹೊಸ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದರಿಂದ ಏನು ತೊಂದರೆಯಾಗುವುದಿಲ್ಲ ಎಂದ ಅವರು, ಜಿಲ್ಲಾದ್ಯಂತ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ವಾಣಿಜ್ಯ ವ್ಯಾಪಾರ ವಹಿವಾಟು ಬಂದ್ ಮಾಡಲಾಗಿದೆ. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದಂತೆ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶವಿಲ್ಲ. ಪ್ರತೀ ನಿತ್ಯ ರಾತ್ರಿ 9ರಿಂದ ಬೆಳಗ್ಗೆ 6ರವರೆಗೂ ರಾತ್ರಿ ಕಫ್ರ್ಯೂ ಜಾರಿಯಲ್ಲಿರುತ್ತದೆ. ವಾರಂತ್ಯದ ಶನಿವಾರ ಮತ್ತು ರವಿವಾರ ಇಡೀ ದಿನ ಕರ್ಫ್ಯೂ ಜಾರಿಯಲ್ಲಿರುವತ್ತದೆ. ಈ ಸಂದರ್ಭದಲ್ಲಿ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಲಾಗುವುದು ಎಂದು ಡಿಸಿ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ಮಾತನಾಡಿ, ಸರಕಾರದ ಮುಂದಿನ ಆದೇಶ ಬರುವವರೆಗೂ ಎ.20ರಿಂದ ಮೇ 4ರವರೆಗೆ ಹೊಸ ಮಾರ್ಗಸೂಚಿ ಜಾರಿಯಲ್ಲಿರಲಿದೆ. ಕೊರೋನ ನಿಯಂತ್ರಿಸುವಲ್ಲಿ ಎಲ್ಲಾ ಸಾರ್ವಜನಿಕರ ಜವಾಬ್ದಾರಿ ಹೆಚ್ಚಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಲಾಕ್‍ಡೌನ್ ಆಗುವ ಸಾಧ್ಯತೆಯೂ ಹೆಚ್ಚಿದೆ. ಇದಕ್ಕೆ ಅವಕಾಶ ಕೂಡದೇ ಪ್ರತಿಯೊಬ್ಬರೂ ಸರಕಾರದ ಮಾರ್ಗಸೂಚಿಗಳನ್ನು ಚಾಚು ತಪ್ಪದೇ ಪಾಲಿಸಬೇಕು. ಅಂಗಡಿ ಮುಂಗಟ್ಟುಗಳ ಮುಂದೆ ಕೋವಿಡ್ ನಿಯಮಗಳಾದ ಸುರಕ್ಷಿತ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಕಡ್ಡಾಯಗೊಳಿಸಬೇಕು. ಅಂಗಡಿ ಮಾಲಕರು ನಿಯಮಗಳನ್ನು ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ಉಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸುವುದು ಕಡ್ಡಾಯವಾಗಿರುವುದರಿಂದ ನಿಯಮಗಳು ಉಲ್ಲಂಘನೆಯಾದಲ್ಲಿ ಶಿಸ್ತಿನ ಕ್ರಮ ಜರಗಿಸಲಾಗುವುದು. ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಈಗಾಗಲೇ 9 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಇದೇ ವೇಳೆ ಎಸ್ಪಿ ಎಚ್ಚರಿಸಿದರು.

ಟೈಲರ್ ಅಸೋಸಿಯೇಷನ್, ಹೊಟೇಲ್ ಮಾಲಕರ ಸಂಘ, ದಲಿತ್ ಜನಸೇನೆಯ ಅನಿಲ್ ಆನಂದ್ ಸೇರಿದಂತೆ ಇತರರು ತಮ್ಮಲ್ಲಿರುವ ಗೊಂದಲಗಳನ್ನು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಪರಿಹಾರ ಕಂಡುಕೊಂಡರು. ಸಭೆಯಲ್ಲಿ ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜು ಹಾಗೂ ವಿವಿಧ ಅಧಿಕಾರಿ ಸಿಬ್ಬಂದಿಯೊಂದಿಗೆ ಹೊಟೇಲ್ ಮಾಲಕರು, ವರ್ತಕರು ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಲಾಡ್ಜ್ ಗಳಲ್ಲಿ ತಂಗಿರುವ ಅತಿಥಿಗಳಿಗೆ ಅವರು ತಂಗಿರುವ ಕೊಠಡಿಯಲ್ಲೇ ಸರ್ವಿಸ್ ಕೊಡಲು ಅಭ್ಯಂತರವಿಲ್ಲ. ಹೊರಗಡೆ ಅನಗತ್ಯ ಓಡಾಟ ನಿರ್ಬಂಧಿಸಲಾಗುವುದು. ಹೋಮ್ ಸ್ಟೇ ಮತ್ತು ರೆಸಾರ್ಟ್‍ಗಳಲ್ಲಿ ತಂಗಲು ಮಾತ್ರ ಅವಕಾಶವಿದೆ. ಬೇರೆ ಯಾವ ಚಟುವಟಿಕೆಗೂ ಅವಕಾಶವಿಲ್ಲ.
-ಕೆ.ಎನ್.ರಮೇಶ್, ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News