ಮೃತದೇಹ ಸಾಗಾಟಕ್ಕೆ 60 ಸಾವಿರಕ್ಕೆ ಬೇಡಿಕೆ ಆರೋಪ: ಆಂಬ್ಯುಲೆನ್ಸ್ ಮಾಲಕ ಸೇರಿ ಇಬ್ಬರ ಬಂಧನ

Update: 2021-04-22 16:36 GMT

ಬೆಂಗಳೂರು, ಎ.22: ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ವಿದ್ಯುತ್ ಚಿತಾಗಾರಕ್ಕೆ ಕೊಂಡೊಯ್ಯಲು 60 ಸಾವಿರ ರೂ.ಗಳಿಗೆ ಬೇಡಿಕೆಯಿಟ್ಟ ಆರೋಪ ಸಂಬಂಧ ಆಂಬ್ಯುಲೆನ್ಸ್ ಮಾಲಕ ಸೇರಿ ಇಬ್ಬರನ್ನು ಅಮೃತಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಅಮೃತಹಳ್ಳಿ ನಿವಾಸಿಗಳಾದ ಹನುಮಂತಪ್ಪ ಸಿಂಗ್ರಿ ಹಾಗೂ ಹರೀಶ್ ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಎ.20ರಂದು ವ್ಯಕ್ತಿಯೊಬ್ಬರು ಕೋವಿಡ್‍ದಿಂದ ಮೃತಪಟ್ಟಿದ್ದು, ಅವರ ಕುಟುಂಬಸ್ಥರು ಆಂಬ್ಯುಲೆನ್ಸ್ ಮೂಲಕ ಚಿತಾಗಾರಕ್ಕೆ ಶವ ಸಾಗಿಸಲು ಈ ವಾಹನದ ಮೊರೆ ಹೋಗಿದ್ದರು. ಆದರೆ, ಆಂಬ್ಯುಲೆನ್ಸ್ ಮಾಲಕ ಹನುಮಂತಪ್ಪ ಮತ್ತು ಚಾಲಕ ಹರೀಶ್ ಚಿತಾಗಾರಕ್ಕೆ ಶವ ಸಾಗಿಸಲು 60 ಸಾವಿರಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.

ಈ ಸಂದರ್ಭ ಮೃತರ ಪತ್ನಿ ಮಾಂಗಲ್ಯ ಸರ ಮಾರಿ ಹಣ ನೀಡಲು ಮುಂದಾಗಿದ್ದರು. ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಅಮೃತಹಳ್ಳಿ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 384, 269, 270 ಹಾಗೂ ರಾಷ್ಟ್ರೀಯ ವಿಕೋಪ ನಿರ್ವಹಣಾ ಕಾಯ್ದೆ (ಎನ್‍ಡಿಎಂಎ) ಸೆಕ್ಷನ್ 54 ಅಡಿ ಎಫ್‍ಐಆರ್ ದಾಖಲಿಸಿಕೊಂಡಿದ್ದು, ಇಂದು ಇಬ್ಬರನ್ನು ಬಂಧಿಸಿ ಆಂಬ್ಯುಲೆನ್ಸ್ ಜಪ್ತಿ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News