ಕೋವಿಡ್ ನಿಯಮ ಪಾಲಿಸಿ, ಇಲ್ಲವೇ ಜೈಲು ಶಿಕ್ಷೆ ಅನುಭವಿಸಿ: ಕೊಡಗು ಎಸ್ಪಿ ಕ್ಷಮಾ ಮಿಶ್ರಾ ಎಚ್ಚರಿಕೆ

Update: 2021-04-22 17:26 GMT

ಮಡಿಕೇರಿ, ಎ.22: ಕೊಡಗು ಜಿಲ್ಲೆಯಲ್ಲೂ ಕೊರೋನ ಸೋಂಕು ತಾಂಡವವಾಡುತ್ತಿದ್ದು, ಗುರುವಾರ ಒಂದೇ ದಿನದಲ್ಲಿ 183 ಪ್ರಕರಣ ವರದಿಯಾಗಿದೆ. ಇಷ್ಟಾದರೂ ಜನರು ಎಚ್ಚೆತ್ತುಕೊಳ್ಳದೆ, ಮಾಸ್ಕ್ ಧರಿಸದೆ, ಸುರಕ್ಷಿತ ಅಂತರ ಕಾಪಾಡದೆ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಹೀಗಾಗಿ ಕೊರೋನ ನಿಯಮ ಪಾಲಿಸದಿದ್ದರೆ ಜೈಲುವಾಸ ಅನುಭವಿಸಬೇಕಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೋವಿಡ್ ನಿಯಮ ಉಲ್ಲಂಘಿಸಿದ 11 ಜನರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಅಷ್ಟೇ ಅಲ್ಲದೆ ಈ 11 ಜನರ ವಿರುದ್ಧ ಜಾಮೀನು ರಹಿತ ಕೇಸ್ ದಾಖಲು ಮಾಡಲಾಗಿದೆ. ಕೋವಿಡ್ ನಿಯಮ ಉಲ್ಲಂಘಿಸಿದ ಅಂಗಡಿ ಮಾಲಕರ ವಿರುದ್ಧವೂ ಎಫ್‍ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಕುಶಾಲನಗರದಲ್ಲಿ 9 ಮಡಿಕೇರಿ ಮತ್ತು ವೀರಾಜಪೇಟೆಯಲ್ಲಿ ತಲಾ ಒಂದು ಕೇಸ್ ದಾಖಲು ಮಾಡಲಾಗಿದೆ. ಹೀಗಾಗಿ ಜನರು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೆಚ್ಚು ಕೇಸ್ ದಾಖಲಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಮಾಸ್ಕ್, ಸುರಕ್ಷಿತ ಅಂತರ ಪಾಲಿಸದೆ ಎಲ್ಲೆಂದರಲ್ಲಿ ಜನ ಸೇರುವುದು, ಸಭೆ ಸಮಾರಂಭಗಳಲ್ಲಿ ಹೆಚ್ಚು ಜನ ಭಾಗವಹಿಸುವುದು ಸೇರಿದಂತೆ ಕೊರೋನ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಇನ್ನೊಂದೆಡೆ ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ನಿತ್ಯ ನೂರಕ್ಕೂ ಹೆಚ್ಚು ಕೊರೋನ ಪ್ರಕರಣಗಳು ಪತ್ತೆಯಾಗುತ್ತಿವೆ. ಇಷ್ಟಾದರೂ ಜನ ಎಚ್ಚೆತ್ತುಕೊಂಡಿಲ್ಲ, ಹೀಗಾಗಿ ಕಠಿಣ ಕ್ರಮ ಅಗತ್ಯವಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News