ಪಡಿತರ ಅಕ್ಕಿ ಕಡಿತ: ಮಾಜಿ ಸಚಿವ ಎಚ್.ಕೆ.ಪಾಟೀಲ್ ಆಕ್ಷೇಪ

Update: 2021-04-22 17:27 GMT

ಬೆಂಗಳೂರು, ಎ. 22: ಬಿಪಿಎಲ್ ಫಲನುಭವಿಗಳಿಗೆ ರಾಜ್ಯ ಸರಕಾರ ವಿತರಿಸುತ್ತಿದ್ದ ಪಡಿತರ ಕಡಿತಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಸಚಿವ ಎಚ್.ಕೆ.ಪಾಟೀಲ್, ಕೋವಿಡ್‍ನಿಂದಾಗಿ ಬಡವರು ಪರದಾಡುತ್ತಿದ್ದು, ಸರಕಾರ ಬಡವರ ವಿರೋಧಿ ನಿರ್ಣಯವನ್ನು ಕೈಬಿಡಬೇಕು. ಒಂದು ವೇಳೆ ಅಕ್ಕಿ ಕಡಿತ ಮಾಡಿದರೆ, ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಎಚ್.ಕೆ.ಪಾಟೀಲ್, ಕೊರೋನ ಸಂಕಷ್ಟದಿಂದ ಇಡೀ ದೇಶವೇ ತತ್ತರಿಸಿದೆ. ಕೋವಿಡ್ ಆರೋಗ್ಯ ವ್ಯವಸ್ಥೆ ಮಾತ್ರವಲ್ಲದೇ, ಆರ್ಥಿಕತೆ ಮೇಲೂ ಸಾಕಷ್ಟು ಪರಿಣಾಮ ಬೀರಿದೆ. ಕೊರೋನ ಎರಡನೇ ಅಲೆ ಜನರನ್ನು ಮತ್ತಷ್ಟು ಹೈರಾಣಾಗಿಸುತ್ತಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರ ಅನ್ನಭಾಗ್ಯದ ಅಕ್ಕಿ ಕಡಿತಗೊಳಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಗಮನ ಸೆಳೆದಿದ್ದಾರೆ.

ಬಡವರಿಗೆ ಅನ್ನಭಾಗ್ಯ ಯೋಜನೆಯಡಿ ಐದು ಕೆಜಿ ಅಕ್ಕಿ ನೀಡುತ್ತಿದ್ದು, ಅದರಲ್ಲಿಯೂ ಮೂರು ಕೆಜಿ ಅಕ್ಕಿಯನ್ನು ಕಡಿತ ಮಾಡಲು ಮುಂದಾಗಿದೆ. ಕೋವಿಡ್ ಸಂದರ್ಭದಲ್ಲಿ ಈ ರೀತಿ ಅಕ್ಕಿ ಕಡಿತ ಮಾಡುವ ಕ್ರಮ ಸರಿಯೇ? ಎಂದು ಪ್ರಶ್ನಿಸಿರುವ ಎಚ್.ಕೆ.ಪಾಟೀಲ್, ಸರಕಾರ ಈ ಹಿಂದೆ ಘೋಷಿಸಿರುವಂತೆಯೇ 5 ಕೆಜಿ ಅಕ್ಕಿ ಜೊತೆಗೆ 3 ಕೆಜಿ ಜೋಳ ಅಥವಾ ರಾಗಿಯನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News