ಶ್ರೀಸಾಮಾನ್ಯನ ವಿರುದ್ಧ ಶ್ರೀ ಶ್ರೀ ಶ್ರೀ ಸರಕಾರ

Update: 2021-04-23 05:24 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘‘ಕೊರೋನ ಪರಿಸ್ಥಿತಿ ಕೈ ಮೀರಿದೆ’’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿಕೆ ನೀಡಿದ್ದಾರೆ ಮತ್ತು ಅದನ್ನು ಹದ್ದು ಬಸ್ತಿನಲ್ಲಿಡುವ ಹೊಣೆಗಾರಿಕೆಯನ್ನು ಸರಕಾರ ಮತ್ತೆ ಪೊಲೀಸ್ ಇಲಾಖೆಗೆ ದಾಟಿಸಿದಂತಿದೆ. ವೈದ್ಯರು ನಿಭಾಯಿಸಬೇಕಾದ ಕಾರ್ಯಾಚರಣೆಯನ್ನು ಪೊಲೀಸರು ಲಾಠಿಗಳ ಮೂಲಕ ನಿಭಾಯಿಸಲು ಅತ್ಯಾತುರರಾಗಿದ್ದಾರೆ. ವಾರಾಂತ್ಯದ ಕರ್ಫ್ಯೂವನ್ನು ಸರಕಾರ ಹೇರಿದ ಬೆನ್ನಿಗೆ ನಗರಗಳಲ್ಲಿ ಬೀದಿ ಬೀದಿಯಲ್ಲಿ ಪೊಲೀಸರು ಜನಸಾಮಾನ್ಯರ ಮೇಲೆ ನಿಷ್ಕರುಣೆಯಿಂದ ಲಾಠಿ ಬೀಸುತ್ತಿದ್ದಾರೆ. ಅತ್ಯಗತ್ಯ ಕಾರಣಗಳಿಗಾಗಿ ರಾತ್ರಿ ಓಡಾಡುವ ವಾಹನಗಳನ್ನು ನಿಲ್ಲಿಸಿ, ಗಂಟೆಗಟ್ಟಲೆ ಅವರನ್ನು ಸತಾಯಿಸುವ ಪ್ರಕರಣಗಳೂ ವರದಿಯಾಗುತ್ತಿವೆ. ಕೆಲವು ದಿನಗಳ ಹಿಂದೆ, ಉಡುಪಿಯ ಜಿಲ್ಲಾಧಿಕಾರಿಯವರು ಬಸ್ಸೊಂದರಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯರನ್ನು ದಾರಿ ಮಧ್ಯೆ ಇಳಿಸಿ, ಅವರಿಗೆ ಪರ್ಯಾಯ ವ್ಯವಸ್ಥೆ ಮಾಡದೇ ಇದ್ದುದು ಸಾಮಾಜಿಕ ಮಾಧ್ಯಮಗಳಲ್ಲಿ ಸುದಿಯಾಯಿತು. ಸಂಜೆಯ ಬಳಿಕ ನಮಗೆ ಬೇರೆ ಬಸ್ಸುಗಳು ಇಲ್ಲ ಎಂದು ವಿದ್ಯಾರ್ಥಿನಿಯರು ಆತಂಕ ತೋಡಿಕೊಂಡರೂ ಅದಕ್ಕೆ ಸ್ಪಂದಿಸದೇ ಜಿಲ್ಲಾಧಿಕಾರಿ ಬೇಜವಾಬ್ದಾರಿಯನ್ನು ವ್ಯಕ್ತಪಡಿಸಿದರು. ಬಸ್‌ನಲ್ಲಿ ಸುರಕ್ಷಿತ ಅಂತರವನ್ನು ಕಾಪಾಡಬೇಕು ನಿಜ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರನ್ನು ಸುರಕ್ಷಿತವಾಗಿ ಮನೆ ಸೇರಿಸುವುದೂ ಜಿಲ್ಲಾಡಳಿತದ ಹೊಣೆಗಾರಿಕೆಯೇ ಆಗಿದೆ. ಪರೀಕ್ಷೆ ಇಲ್ಲದೇ ಇದ್ದರೆ ವಿದ್ಯಾರ್ಥಿಗಳು ಬಸ್‌ನಲ್ಲಿ ಪ್ರಯಾಣಿಸುವ ಅಗತ್ಯವೇ ಬೀಳುತ್ತಿರಲಿಲ್ಲ. ಶಾಲೆಯಲ್ಲಿ ಪರೀಕ್ಷೆ ಮುಗಿಸಿ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿಯರನ್ನು ಅರ್ಧ ದಾರಿಯಲ್ಲಿ ಇಳಿಸಿದ ಮೇಲೆ, ಅವರನ್ನು ಅವರವರ ಮನೆಗೆ ತಲುಪಿಸಲು ಜಿಲ್ಲಾಡಳಿತವೇ ಪ್ರತ್ಯೇಕ ವ್ಯವಸ್ಥೆ ಮಾಡಬೇಕಾಗಿತ್ತು. ಮನೆ ತಲುಪಲು ವಾಹನ ಸಿಗದೇ ರಾತ್ರಿಯಾಗಿ, ಬೇರೇನಾದರೂ ಅನಾಹುತ ನಡೆದಿದ್ದರೆ ಅದಕ್ಕೆ ಜಿಲ್ಲಾಧಿಕಾರಿಯೇ ಹೊಣೆಯಾಗುತ್ತಿರಲಿಲ್ಲವೇ? ತಾವು ನಡೆಸುವ ಕಾರ್ಯಾಚರಣೆಯ ದೂರಗಾಮಿ ಪರಿಣಾಮಗಳ ಅರಿವು ಇಲ್ಲದೇ ಇದ್ದರೆ ಇಂತಹದ್ದೆಲ್ಲ ನಡೆಯುತ್ತದೆ.

ದೇಶದಲ್ಲಿ ಕರ್ಫ್ಯೂ ಹೇರುವುದು ದಂಗೆ, ಗಲಭೆಗಳ ಸಂದರ್ಭಗಳಲ್ಲಿ ಮಾತ್ರ. ಕಾನೂನು ವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಇಂತಹ ಸಂದರ್ಭದಲ್ಲಿ ಪೊಲೀಸರು ಅತ್ಯಂತ ಕಠಿಣವಾಗಿ ವರ್ತಿಸಬೇಕಾಗುತ್ತದೆ. ಯಾಕೆಂದರೆ ಕರ್ಫ್ಯೂ ಸಂದರ್ಭದಲ್ಲಿ ಅವರು ಮುಖಾಮುಖಿಯಾಗಬೇಕಾದುದು ಗಲಭೆ ನಡೆಸುವ ಗೂಂಡಾಗಳು , ದುಷ್ಕರ್ಮಿಗಳ ವಿರುದ್ಧ. ಆದರೆ ಇಂದು ಕರ್ಫ್ಯೂ ಹೇರುತ್ತಿರುವುದು ಯಾವುದೋ ದುಷ್ಕರ್ಮಿಗಳನ್ನು ಮಟ್ಟ ಹಾಕುವ ಉದ್ದೇಶದಿಂದಲ್ಲ. ಬದಲಿಗೆ, ಸಾಂಕ್ರಾಮಿಕವಾಗಿ ಹರಡುತ್ತಿರುವ ಒಂದು ಸೋಂಕನ್ನು ತಡೆದು ಮನುಷ್ಯ ಜೀವವನ್ನು ರಕ್ಷಿಸುವ ಮಾನವೀಯ ಕಾರಣಗಳಿಂದ. ಈ ಮಾನವೀಯ ಉದ್ದೇಶವನ್ನು ಮೊತ್ತ ಮೊದಲು ಪೊಲೀಸ್ ಇಲಾಖೆ ಅರ್ಥ ಮಾಡಿಕೊಳ್ಳಬೇಕಾಗಿದೆ. ಇಲ್ಲಿ ಅವರು ಎದುರಿಸಬೇಕಾದುದು ಶಸ್ತ್ರಾಸ್ತ್ರಗಳಿರುವ ದುಷ್ಕರ್ಮಿಗಳನ್ನಲ್ಲ. ದೈನಂದಿನ ಕೂಳಿಗಾಗಿ, ಜೀವನಾವಶ್ಯಕ ವಸ್ತುಗಳಿಗಾಗಿ ಒದ್ದಾಡುತ್ತಿರುವ ಶ್ರೀಸಾಮಾನ್ಯನನ್ನು. ರೌಡಿಗಳು, ಗೂಂಡಾಗಳ ಜೊತೆಗೆ ವರ್ತಿಸಿದಂತೆ ಇವರ ಜೊತೆಗೆ ವರ್ತಿಸುವ ಪೊಲೀಸರಿಗೆ ಕರ್ಫ್ಯೂನ ಉದ್ದೇಶವೇ ಸ್ಪ್ಷಷ್ಟವಿದ್ದಂತಿಲ್ಲ. ಈಗಾಗಲೇ ಲಾಕ್‌ಡೌನ್‌ನಿಂದಾಗಿ ಬದುಕು ಮೂರಾಬಟ್ಟೆಯಾಗಿ ಬೀದಿಗೆ ಬಿದ್ದಿರುವ ಸಾವಿರಾರು ಜನರು ನಮ್ಮ ನಡುವೆ ಇದ್ದಾರೆ. ‘ಸರಕಾರ ನಮಗೆ ಉಚಿತವಾಗಿ ಏನನ್ನೂ ಕೊಡುವುದು ಬೇಡ, ಕನಿಷ್ಠ ದುಡಿದು ಬದುಕುವುದಕ್ಕೆ ಅವಕಾಶ ಕೊಟ್ಟರೆ ಸಾಕು’ ಎಂದು ಅವರು ವ್ಯವಸ್ಥೆಯೊಂದಿಗೆ ವಿನೀತವಾಗಿ ಬೇಡಿಕೊಳ್ಳುತ್ತಿದ್ದಾರೆ. ವಿವಿಧ ರೋಗಗಳಿಂದ ಬಳಲಿ ಅತ್ತ ಆಸ್ಪತ್ರೆಯೂ ಇಲ್ಲದೆ, ಇತ್ತ ಸ್ಮಶಾನವೂ ಇಲ್ಲದೆ ಅತಂತ್ರರಾಗಿರುವ ಜನರ ಕತೆಯನ್ನು ಕೇಳುವವರೇ ಇಲ್ಲವಾಗಿದ್ದಾರೆ. ಇವೆಲ್ಲದರ ಬೆನ್ನಿಗೆ ಪೊಲೀಸರೂ ಮಾನವೀಯತೆಯನ್ನು ಮರೆತು ಇವರ ಹಿಂದೆ ಬಿದ್ದರೆ, ಜನರು ಎಲ್ಲಿಗೆ ಹೋಗಬೇಕು? ಪೊಲೀಸರ ಮೂಲಕ ಸರಕಾರ ಕೊರೋನಾವನ್ನು ಎದುರಿಸಲು ಹೊರಟಿದೆಯಾದರೂ ಅಂತಿಮವಾಗಿ ಇದು ಶ್ರೀಸಾಮಾನ್ಯ ಮತ್ತು ಶ್ರೀ ಶ್ರೀ ಶ್ರೀ ಸರಕಾರದ ನಡುವಿನ ಸಂಘರ್ಷವಾಗಿ ಮಾರ್ಪಡುತ್ತಿದೆ.

ರಾಜ್ಯದಲ್ಲಿ ರಾತ್ರಿ ಕರ್ಫ್ಯೂವನ್ನು ಬಿಗಿಗೊಳಿಸಲಾಗಿದೆ. ಇದೇ ಸಂದರ್ಭದಲ್ಲಿ ವಾರಾಂತ್ಯದ ಕರ್ಫ್ಯೂವಿಗೆ ಈಗಲೇ ಭಾರೀ ಸಿದ್ಧತೆಗಳನ್ನು ಪೊಲೀಸ್ ಇಲಾಖೆ ನಡೆಸುತ್ತಿದೆ. ಒಂದು ದಿನ ಮೊದಲೇ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿಸಲು ಪೊಲೀಸರು ಆತುರ ತೋರುತ್ತಿದ್ದಾರೆ. ರಾತ್ರಿ ಒಂಭತ್ತು ಗಂಟೆಯ ಬಳಿಕ ವಾಹನವೇನಾದರೂ ಕಣ್ಣಿಗೆ ಬಿದ್ದರೆ, ಅವರನ್ನು ದರೋಡೆಕೋರರು ಎಂಬ ರೀತಿಯಲ್ಲಿ ಪೊಲೀಸರು ಉಪಚರಿಸುತ್ತಿದ್ದಾರೆ. ಕರ್ಫ್ಯೂನ ಉದ್ದೇಶವೇ ಜನರು ಪರಸ್ಪರ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳುವಂತೆ ಮಾಡಿಕೊಳ್ಳುವುದು. ರಾತ್ರಿ ಒಂಭತ್ತು ಗಂಟೆಯ ಬಳಿಕ ಜನರು ಓಡಾಡುವುದೇ ಅಪರೂಪ. ಹೀಗಿರುವಾಗ, ರಾತ್ರಿ ಕರ್ಫ್ಯೂನ ಅಗತ್ಯವೇನು ಎಂದು ವೈದ್ಯಕೀಯ ತಜ್ಞರು ಪ್ರಶ್ನಿಸುತ್ತಿದ್ದಾರೆ. ಜನರಲ್ಲಿ ಜಾಗೃತಿಯನ್ನು ಬಿತ್ತುವುದಕ್ಕೋಸ್ಕರ ಈ ಕರ್ಫ್ಯೂವನ್ನು ಹೇರಿರಬಹುದು ಎಂದು ಭಾವಿಸೋಣ. ಆದರೆ ಪೊಲೀಸರ ವರ್ತನೆ ನೋಡಿದರೆ ಹಾಗೆ ಅನ್ನಿಸುವುದಿಲ್ಲ. ಈ ಸಂದರ್ಭವನ್ನು ಬಳಸಿಕೊಂಡು ಜನರನ್ನು ಬೆದರಿಸುವುದು, ತಮ್ಮ ಅಧಿಕಾರವನ್ನು ಅವರ ಮೇಲೆ ಪ್ರಯೋಗಿಸುವುದು, ದಂಡ ವಸೂಲಿ ಮಾಡುವುದು ವ್ಯಾಪಕವಾಗಿ ನಡೆಯುತ್ತಿದೆ. ಆರ್ಥಿಕವಾಗಿ ದಿವಾಳಿಯಾಗಿರುವ ಜನರ ಮೇಲೆ ಅನಗತ್ಯ ದಂಡವನ್ನು ಹೇರುವುದು ಅಮಾನವೀಯ ಎನ್ನುವುದು ಅವರನ್ನು ಕಾಡುತ್ತಿಲ್ಲ. ಪೊಲೀಸರು ಈ ಸಂದರ್ಭದಲ್ಲಿ ಮಾಡಬೇಕಾದ ಕೆಲಸ ಜನರಲ್ಲಿ ಆದಷ್ಟು ಜಾಗೃತಿಯನ್ನು ಬಿತ್ತುವುದೇ ಹೊರತು, ಗಾಯದ ಮೇಲೆ ಬರೆ ಎಳೆಯುವುದಲ್ಲ.

ಕರ್ಫ್ಯೂವನ್ನು ಪಾಲಿಸದ ಜನರನ್ನು ರೌಡಿಗಳು, ಗೂಂಡಾಗಳಂತೆ ನಡೆಸಿಕೊಳ್ಳದೆ, ಅವರಲ್ಲಿ ಜಾಗೃತಿ, ಆತ್ಮವಿಶ್ವಾಸ , ಸಾಂತ್ವನಗಳನ್ನು ಪೊಲೀಸರ ಹೊಣೆಗಾರಿಕೆಯಾಗಿದೆ. ಹಾಗೆಯೇ ಸರಕಾರದ ನಿರ್ದೇಶನಗಳನ್ನು ಮೀರಿ, ಸ್ವಯಂ ಅಧಿಕಾರವನ್ನು ಬಳಸಿಕೊಂಡು ಅಂಗಡಿ ಮುಂಗಟ್ಟುಗಳನ್ನು ಮುಚ್ಚುವುದು, ಸಾರ್ವಜನಿಕವಾಗಿ ಓಡಾಡುತ್ತಿರುವ ಜನರಿಗೆ ಅನಗತ್ಯವಾಗಿ ಬೆದರಿಸುವುದು ಇತ್ಯಾದಿಗಳು ನಡೆಯದಂತೆ ಪೊಲೀಸ್ ಇಲಾಖೆಯ ಮೇಲಧಿಕಾರಿಗಳು ನೋಡಿಕೊಳ್ಳಬೇಕಾಗಿದೆ. ರಾಜ್ಯ ಸರಕಾರ ಕೊರೋನದ ಮುಂದೆ ಅಸಹಾಯಕತೆಯನ್ನು ಪ್ರದರ್ಶಿಸುತ್ತಿದೆ. ಈ ಸಂದರ್ಭದಲ್ಲಿ ಹೆಚ್ಚು ಕೆಲಸವಿರುವುದು ಆರೋಗ್ಯ ಇಲಾಖೆಗೆ. ಅಂದರೆ ಆಸ್ಪತ್ರೆಗಳಿಗೆ ಬೇಕಾದ ಸೌಕರ್ಯಗಳನ್ನು ಒದಗಿಸುವುದು, ಆಮ್ಲಜನಕ ಸಿಲಿಂಡರ್‌ಗಳು ವ್ಯಾಪಕವಾಗಿ ದೊರಕುವಂತೆ ಮಾಡುವುದು, ಉಸಿರಾಟದ ಸಮಸ್ಯೆಗಳಿಗೆ ಪರಿಹಾರವಾಗಬಲ್ಲ ಔಷಧಿಗಳನ್ನು ಒದಗಿಸುವುದು, ವೆಂಟಿಲೇಟರ್‌ಗಳು ಸಿಗುವಂತೆ ಮಾಡುವುದು, ಇವುಗಳ ಬಗ್ಗೆ ಸರಕಾರ ಕಾಳಜಿ ವಹಿಸಬೇಕು. ಆದರೆ ಆಸ್ಪತ್ರೆಗಳಿಗೆ ಬೇಕಾದ ಸವಲತ್ತುಗಳನ್ನು ಒದಗಿಸಲು ಸಾಧ್ಯವಿಲ್ಲದ ಕಾರಣದಿಂದಲೇ, ಕೊರೋನವನ್ನು ಎದುರಿಸಲು ಸರಕಾರ ಪೊಲೀಸ್ ಇಲಾಖೆಯನ್ನು ನೆಚ್ಚಿಕೊಂಡಿದೆ. ಆರೋಗ್ಯ ಕ್ಷೇತ್ರದ ವೈಫಲ್ಯವನ್ನು ಕರ್ಫ್ಯೂ, ಲಾಕ್‌ಡೌನ್, ಲಾಠಿ, ಖಾಕಿ ಮೊದಲಾದವುಗಳ ಮೂಲಕ ಮುಚ್ಚಿ ಹಾಕಲು ಹೊರಟಿದೆ. ಒಂದು ರೀತಿಯಲ್ಲಿ ಪೊಲೀಸ್ ಇಲಾಖೆಯ ಮೂಲಕ ಕೊರೋನದ ವಿರುದ್ಧ ಹೋರಾಟ ನಡೆಸಿದಂತೆ ನಟಿಸುತ್ತಿದೆಯೇ ಹೊರತು, ಇದು ನಿಜವಾದ ಹೋರಾಟ ಅಲ್ಲವೇ ಅಲ್ಲ. ಕೊರೋನವನ್ನು ಎದುರಿಸಲು ವೈದ್ಯಕೀಯ ತಂಡದಿಂದಷ್ಟೇ ಸಾಧ್ಯ ಹೊರತು ಪೊಲೀಸರಿಂದ ಸಾಧ್ಯವಿಲ್ಲ. ಇಂತಹ ಕಪಟ ಹೋರಾಟದಿಂದ ಜನಸಾಮಾನ್ಯರಿಗೆ ಇನ್ನಷ್ಟು ಹಾನಿಯಾಗಬಲ್ಲುದೇ ಹೊರತು, ಕೊರೋನ ಇಳಿಮುಖವಾಗಲಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News