ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ ಮುಂದೂಡಲು ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Update: 2021-04-23 14:39 GMT

ಬೆಂಗಳೂರು, ಎ.23: ಕೊರೋನ ಸಂಖ್ಯೆ ಪ್ರತಿ ದಿನ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ಇದೆ ಎ.27ರಂದು ರಾಜ್ಯದ 9 ಸ್ಥಳೀಯ ಸಂಸ್ಥೆಗಳಿಗೆ ನಡೆಯಲಿರುವ ಉಪ ಚುನಾವಣೆಯನ್ನು ನಿರ್ದೇಶಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿ ಆದೇಶಿಸಿದೆ.

ಸೋಂಕು ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಸುವುದು ಸೂಕ್ತವಲ್ಲ ಎಂದು ಆಕ್ಷೇಪಿಸಿ ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ಸಿ. ರೆಡ್ಡಿ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ರಾಜ್ಯದಲ್ಲಿ ಕೊರೋನ ಸೋಂಕು ಪ್ರತಿ ದಿನ ಹೆಚ್ಚಾಗುತ್ತಿದ್ದು, ಚುನಾವಣೆ ಮುಂದೂಡಲು ನಿರ್ದೇಶಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಚುನಾವಣೆಯನ್ನು ಯಾವ ಕಾನೂನಾತ್ಮಕ ಅಂಶಗಳ ಆಧಾರದಲ್ಲಿ ಮುಂದೂಡಬೇಕು ಎಂಬುದನ್ನು ತಿಳಿಸಿ ಎಂದಿತು. ಇದಕ್ಕೆ ಅರ್ಜಿದಾರರ ಪರ ವಕೀಲರು ಪರಿಸ್ಥಿತಿ ಅವಲೋಕಿಸಿ ಮುಂದೂಡುವುದು ಸೂಕ್ತ ಎಂದರು. ವಾದ ಒಪ್ಪದ ಪೀಠ, ಕೊರೋನ ಮೊದಲನೆ ಅಲೆ ಆರಂಭವಾದಾಗಿನಿಂದಲೂ ದೇಶದ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿವೆ. ರಾಜ್ಯದಲ್ಲಿಯೂ ವಿಧಾನಸಭೆ, ಲೋಕಸಭೆಗಳಿಗೆ ಉಪಚುನಾವಣೆ ನಡೆದಿದೆ. ಹೀಗಾಗಿ ಕೊರೋನ ಕಾರಣಕ್ಕೆ ಚುನಾವಣೆ ಮುಂದೂಡವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿತು.

ಅಲ್ಲದೇ, ಸಂವಿಧಾನದ ವಿಧಿ 243(ಯು) ಪ್ರಕಾರ ಅವಧಿ ಮುಗಿಯುವ ಮುನ್ನ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕು. ಇನ್ನು ಯಾವಾಗ ಚುನಾವಣೆ ನಡೆಸಬೇಕು ಎಂಬ ವಿಚಾರವನ್ನು ಚುನಾವಣಾ ಆಯೋಗ ನಿರ್ಧಾರ ಮಾಡುತ್ತದೆ. ಈಗಾಗಲೇ ಚುನಾವಣೆಗೆ ಎಲ್ಲ ಸಿದ್ದತೆ ಮಾಡಿಕೊಂಡಿದ್ದು, ಮತ ಚಲಾವಣೆಯಷ್ಟೇ ಬಾಕಿ ಇದೆ. ಹೀಗಾಗಿ, ಈ ಹಂತದಲ್ಲಿ ಅರ್ಜಿಯನ್ನು ಪರಿಗಣಿಸಲಾಗದು ಎಂದು ಪೀಠ ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿ ಆದೇಶಿತು.

ರಾಮನಗರ, ಚನ್ನಪಟ್ಟಣ, ಬೀದರ್, ಮಡಿಕೇರಿ, ಭದ್ರಾವತಿಯ ನಗರಸಭೆ, ವಿಜಯಪುರ, ಬೇಲೂರು ಪುರಸಭೆ, ಗುಡಿಬಂಡೆ, ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಗಳಿಗೆ ಉಪ ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News