ರಾಜ್ಯದಲ್ಲಿ ವಾರಾಂತ್ಯದ ಕರ್ಫ್ಯೂ: ಯಾವುದಕ್ಕೆ ಅವಕಾಶ ? ಯಾವುದಕ್ಕೆ ನಿರ್ಬಂಧ ?
ಬೆಂಗಳೂರು, ಎ.23: ರಾಜ್ಯದಲ್ಲಿ ಕೊರೋನ ಸೋಂಕಿನ ಎರಡನೆ ಅಲೆಯನ್ನು ನಿಯಂತ್ರಿಸಲು ರಾಜ್ಯ ಸರಕಾರವು ಮೇ 4ರ ಬೆಳಗ್ಗೆ 6 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಘೋಷಿಸಿದ್ದು, ಶನಿವಾರ ಹಾಗೂ ರವಿವಾರ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾರಾಂತ್ಯದ ಕರ್ಫ್ಯೂ ವೇಳೆ ಯಾರು ಓಡಾಡಬಹುದು, ಯಾರು ಓಡಾಡಬಾರದು ಅಂತ ಈಗಾಗಲೆ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಸಮಿತಿಯಿಂದ ಆದೇಶ ಹೊರಡಿಸಲಾಗಿದೆ ಎಂದರು.
ತುರ್ತುಸೇವೆ ಒದಗಿಸುವ ಕಾರ್ಖಾನೆ, ಸಂಸ್ಥೆ ಸಿಬ್ಬಂದಿ ಐಡಿ ಕಾರ್ಡ್ ತೋರಿಸಿ ಓಡಾಡಬಹುದು. ಟೆಲಿಕಾಂ ಕಂಪನಿ ಉದ್ಯೋಗಿಗಳು ಗುರುತಿನ ಚೀಟಿ ತೋರಿಸಿ ಓಡಾಡಬಹುದು. ರೋಗಿಗಳು ಅವರ ಸಹಾಯಕರು, ಲಸಿಕೆ ಪಡೆದುಕೊಳ್ಳುವ ನಾಗರಿಕರು ಅಗತ್ಯ ದಾಖಲೆಗಳೊಂದಿಗೆ ಸಂಚರಿಸಬಹುದು ಎಂದು ಅವರು ಹೇಳಿದರು.
ದಿನಸಿ ಅಂಗಡಿ, ಹಣ್ಣು ತರಕಾರಿ, ಹಾಲು, ಮಾಂಸದ ಅಂಗಡಿಗಳು ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ರೆಸ್ಟೋರೆಂಟ್‍ಗಳಲ್ಲಿ ಪಾರ್ಸೆಲ್‍ಗೆ ಮಾತ್ರ ಅವಕಾಶ ಇರುತ್ತದೆ ಎಂದು ಅಶೋಕ್ ತಿಳಿಸಿದರು.
ಅಂತರ್ ಜಿಲ್ಲಾ ಸೇರಿದಂತೆ ದೂರದ ಪ್ರಯಾಣಕ್ಕಾಗಿ ಹೋಗುವವರು, ಬಸ್ ನಿಲ್ದಾಣ, ರೈಲ್ವೆ ಹಾಗೂ ವಿಮಾನ ನಿಲ್ದಾಣಕ್ಕೆ ಹೋಗುವವರು ಸಾರ್ವಜನಿಕ ಸಾರಿಗೆಯನ್ನು ಬಳಸಬಹುದು. ಈ ಪ್ರಯಾಣಿಕರು ಅಗತ್ಯವಿರುವ ಟಿಕೆಟ್ ಅನ್ನು ಸಂಬಂಧಪಟ್ಟವರಿಗೆ ತೋರಿಸಿ ಪ್ರಯಾಣಿಸಬಹುದು ಎಂದು ಅವರು ಹೇಳಿದರು.
ಕೋವಿಡ್ ಸೋಂಕಿನಿಂದ ಮೃತಪಟ್ಟವರನ್ನು ಸ್ವಂತ ಜಮೀನಿನಲ್ಲಿ ಅಂತ್ಯ ಸಂಸ್ಕಾರ ಮಾಡಲು ಅವಕಾಶ ಕೊಟ್ಟಿದ್ದೇವೆ. ಇದಕ್ಕಾಗಿ, ಸಂಬಂಧಪಟ್ಟ ಅಧಿಕಾರಿಗಳಿಂದ ಅಗತ್ಯವಿರುವ ಅನುಮತಿಯನ್ನು ಪಡೆದುಕೊಂಡು, ಕೋವಿಡ್ ನಿಯಮಾವಳಿಗಳನ್ನು ಪಾಲನೆ ಮಾಡಿಕೊಂಡು ಅಂತ್ಯ ಸಂಸ್ಕಾರ ನೆರವೇರಿಸಬೇಕು ಎಂದು ಅಶೋಕ್ ತಿಳಿಸಿದರು.
ಪ್ರತಿ ಮೂರು ಗಂಟೆಗೆ 50 ಶವಗಳ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಲಾಗಿದೆ. ಆಂಬ್ಯುಲೆನ್ಸ್ ಗಳು ಸರತಿ ಸಾಲಿನಲ್ಲಿ ನಿಲ್ಲದಂತೆ ಕ್ರಮ ವಹಿಸಲಾಗಿದೆ. ಚಿತಾಗಾರಗಳ ಬಳಿ ಕೆಎಸ್‍ಆರ್‍ಪಿ ತುಕಡಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.
ಕೋವಿಡ್ ವಿರುದ್ಧದ ಹೋರಾಟಕ್ಕೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಸೇರಿದಂತೆ ಯಾರೆಲ್ಲ ಸಲಹೆಗಳನ್ನು ನೀಡುತ್ತಾರೋ ಸರಕಾರ ಅದನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ಯಾವುದಕ್ಕೆ ಅವಕಾಶ ?
ರೆಸ್ಟೋರೆಂಟ್‍ಗಳು (ಪಾರ್ಸೆಲ್‍ಗೆ ಮಾತ್ರ ಅವಕಾಶ)
ಮದುವೆ(50 ಜನ), ಅಂತ್ಯಸಂಸ್ಕಾರ (20 ಜನರಿಗೆ ಮಾತ್ರ ಅವಕಾಶ)
ದೂರದ ಪ್ರಯಾಣಕ್ಕೆ ಸಾರಿಗೆ ಲಭ್ಯ
ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ
24/7 ಕಾರ್ಯನಿರ್ವಹಿಸುವ ಕೈಗಾರಿಕೆಗಳು
ಹಾಲು, ತರಕಾರಿ, ಹಣ್ಣು, ದಿನಸಿ, ಮಾಂಸ, ಮೀನು (ಬೆಳಗ್ಗೆ 6 ರಿಂದ 10ರವರೆಗೆ ಮಾತ್ರ)
ಸರಕು ವಾಹನಗಳು
ಪೆಟ್ರೋಲ್, ಡಿಸೇಲ್ ಪಂಪ್ಸ್, ಗ್ಯಾಸ್ ಸ್ಟೇಷನ್
ಅತಿಥಿಗಳು ಉಳಿದುಕೊಳ್ಳುವಂತಹ ಲಾಡ್ಜಿಂಗ್ ಹೊಟೇಲ್‍ಗಳು
ಯಾವುದಕ್ಕೆ ನಿರ್ಬಂಧ ?
ಸಿನಿಮಾ ಮಂದಿರ, ಮಾಲ್, ಜಿಮ್, ಯೋಗ ಕೇಂದ್ರ, ಕ್ಲಬ್.
ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ರಾಜಕೀಯ ಸಭೆ, ಸಮಾರಂಭ.
ಧಾರ್ಮಿಕ ಕೇಂದ್ರಗಳು(ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ)
ಶಾಲೆ, ಕಾಲೇಜು, ತರಬೇತಿ ಕೇಂದ್ರಗಳು
ಕಟ್ಟಡ ನಿರ್ಮಾಣ ಕಾಮಗಾರಿಗಳು
ವಾಣಿಜ್ಯ ಮಳಿಗೆಗಳು
ಮದ್ಯದಂಗಡಿ
ಹೋಲ್‍ಸೇಲ್ ಮಾರುಕಟ್ಟೆ(ತರಕಾರಿ, ಹಣ್ಣು, ಹೂವು)
ಕ್ಷೌರದಂಗಡಿ, ಸಲೂನ್, ಬ್ಯೂಟಿ ಪಾರ್ಲರ್
ವಾಣಿಜ್ಯ ಮತ್ತು ಖಾಸಗಿ ಅಂಗಡಿಗಳು
ಮೆಟ್ರೋ ರೈಲು
ಶನಿವಾರ ಅಂಚೆ ಕಚೇರಿ ಬಂದ್
ಕೊರೋನ ಎರಡನೆ ಅಲೆಯಿಂದಾಗಿ ರಾಜ್ಯ ಸರಕಾರ ಘೋಷಿಸಿದ ವಾರಂತ್ಯದ ಲಾಕ್‍ಡೌನ್ ಮತ್ತು ಅಂಚೆ ಇಲಾಖೆ ನೌಕರರಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ದೃಷ್ಟಿಯಿಂದ ವಾರಂತ್ಯದ ಲಾಕ್‍ಡೌನ್ ಜಾರಿಯಲ್ಲಿರುವವರೆಗೆ ಎಲ್ಲ ಅಂಚೆ ಕಚೇರಿಗಳನ್ನು ಶನಿವಾರದಂದು ಮುಚ್ಚಲು ನಿರ್ಧರಿಸಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ'
-ಶಾರದಾ ಸಂಪತ್ ಚೀಪ್ ಪೋಸ್ಟ್ ಮಾಸ್ಪರ್ ಜನರಲ್, ಕರ್ನಾಟಕ ವೃತ್ತ ಬೆಂಗಳೂರು