ಕೋವಿಡ್ ತಜ್ಞರ ಶಿಫಾರಸನ್ನು ನಿರ್ಲಕ್ಷಿಸಿತೇ ರಾಜ್ಯ ಸರಕಾರ ?

Update: 2021-04-23 17:32 GMT

ಬೆಂಗಳೂರು, ಎ.23: ಕೋವಿಡ್ ಎರಡನೆ ಅಲೆ ಮೊದಲನೆ ಅಲೆಗಿಂತ ಗಂಭೀರ ಸ್ವರೂಪದ್ದಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಒಂದೇ ದಿನ ಕೋವಿಡ್ ಪಾಸಿಟಿವ್ ಸಂಖ್ಯೆ 16 ಸಾವಿರದ ಗಡಿದಾಟಿದೆ. ಕೋವಿಡ್ ನಿಯಂತ್ರಣ ತಜ್ಞರ ತಾಂತ್ರಿಕ ಸಲಹಾ ಸಮಿತಿ ಆ ಅಪಾಯವನ್ನು ಮೊದಲೇ ನಿರೀಕ್ಷಿಸಿ ಸರಕಾರಕ್ಕೆ ಸೂಕ್ತ ಶಿಫಾರಸನ್ನು ಮಾಡಿತ್ತಾದರೂ ಅದನ್ನು ಸರಕಾರ ನಿರ್ಲಕ್ಷಿಸಿತ್ತು ಎನ್ನುವ ಆರೋಪ ಇದೀಗ ಕೇಳಿ ಬರುತ್ತಿದೆ.

ಬಿಜೆಪಿ ಮುಖಂಡ ಸಿ.ಟಿ. ರವಿಯವರೇ ಈ ಆರೋಪವನ್ನು ಮಾಡಿರುವುದು ರಾಜ್ಯ ಸರಕಾರಕ್ಕೆ ತೀವ್ರ ಮುಜುಗರವನ್ನು ತಂದಿದೆ.

ಎಪ್ರಿಲ್ ಕೊನೆ ಮತ್ತು ಮೇ ಮೊದಲನೆ ವಾರದಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದ್ದು, ಸಾವಿನ ಸಂಖ್ಯೆಯೂ ಮಿತಿ ಮೀರಲಿದೆ. ಮೇ ಮೊದಲನೆ ವಾರದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಪ್ರತಿನಿತ್ಯ 35 ಸಾವಿರಕ್ಕೂ ಹೆಚ್ಚಾಗಲಿದೆ. ಅದೇ ರೀತಿಯಲ್ಲಿ ಸಾವಿನ ಸಂಖ್ಯೆಯೂ ರಾಜ್ಯದಲ್ಲಿ 200ರ ಗಡಿಯನ್ನು ದಾಟಲಿದೆ ಎಂದು ತಜ್ಞರ ಸಮಿತಿ ಅಂದಾಜಿಸಿದ್ದು, ಈ ಒತ್ತಡವನ್ನು ನಿರ್ವಹಿಸಲು ನಮ್ಮಲ್ಲಿ ಆಸ್ಪತ್ರೆ, ಹಾಸಿಗೆ ಸೌಲಭ್ಯ ಸೇರಿದಂತೆ ವೈದ್ಯಕೀಯ ಉಪಕರಣಗಳು ಕೊರತೆ ದೊಡ್ಡ ಮಟ್ಟದಲ್ಲಿದೆ ಎಂದು ಎಚ್ಚರಿಕೆಯನ್ನು ನೀಡಿತ್ತು.

ಅದೇ ರೀತಿಯಲ್ಲಿ ತಾಂತ್ರಿಕ ಸಲಹಾ ಸಮಿತಿ ರಾಜ್ಯದಲ್ಲಿ ಕೋವಿಡ್ ಎರಡನೆ ಅಲೆಯ ವೇಗಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮಗಳ ಜೊತೆಗೆ ಆಸ್ಪತ್ರೆಗಳ ಸಿದ್ಧತೆ ಮಾಡಿಕೊಳ್ಳುವ ಕುರಿತು ಶಿಫಾರಸ್ಸು ಮಾಡಿತ್ತು. ಆದರೆ, ಸರಕಾರ ತಾಂತ್ರಿಕ ಸಮಿತಿ ಶಿಫಾರಸ್ಸು ಅಲಕ್ಷ್ಯ ಮಾಡಿದ್ದರಿಂದ ಕೋವಿಡ್ ಅನಾಹುತ ಸಾವುಗಳ ಏರಿಕೆಗೆ ಕಾರಣ ಎಂದು ಆಡಳಿತಾರೂಢ ಬಿಜೆಪಿ ಮುಖಂಡರೇ ಟೀಕಿಸುತ್ತಿದ್ದಾರೆ.

ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸನ್ನು ಆಧರಿಸಿಯೇ ತುರ್ತುನಿಗಾ ಘಟಕದಲ್ಲಿರುವ ಕೋವಿಡ್ ಸೋಂಕಿತರಿಗೆ ಆನ್‌ಲೈನ್ ಏಕೀಕೃತ್ಯ ವ್ಯವಸ್ಥೆಯ ಮೂಲಕ ಚಿಕಿತ್ಸೆ ಒದಗಿಸಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಗೆ ಹೋಲಿಕೆ ಮಾಡಿದರೆ ಸಾವಿನ ಸಂಖ್ಯೆ (ಶೇ.1.2ರಷ್ಟಿದೆ) ಅತ್ಯಂತ ಕಡಿಮೆ ಇದೆ. ಸೋಂಕಿತರ ಸಂಪರ್ಕ ಕೊಂಡಿ ತಪ್ಪಿಸಿದರೆ ಮೇ ಅಂತ್ಯ ಅಥವಾ ಜೂನ್ ತಿಂಗಳ ಅಂತ್ಯದ ವೇಳೆಗೆ ಸೋಂಕಿನ ಪ್ರಕರಣಗಳು ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ತಜ್ಞರ ಅಭಿಪ್ರಾಯವಾಗಿದೆ.

ವೈದ್ಯಕೀಯ ಸೌಕರ್ಯಗಳ ಕೊರತೆ ಇರುವುದರಿಂದ ಸೋಂಕಿನ ನಿಯಂತ್ರಣಕ್ಕೆ ಜನಜಾಗೃತಿಯ ಜೊತೆಗೆ ಸೋಂಕಿನ ಚೈನ್ ಲಿಂಕ್ ತಪ್ಪಿಸಲು ಹದಿನಾಲ್ಕು ದಿನಗಳ ಕಠಿಣ ‘ಲಾಕ್‌ಡೌನ್’ ಜಾರಿ ಮಾಡಬೇಕೆಂದು ಸಮಿತಿ ಶಿಫಾರಸ್ಸು ಮಾಡಿತ್ತು ಆದರೆ, ರಾಜ್ಯ ಸರಕಾರ ಆರ್ಥಿಕತೆ ನೆಪದಲ್ಲಿ ಕಠಿಣ ಕ್ರಮಕ್ಕೆ ಮೀನಾಮೇಷ ಎಣಿಸಿತು.

‘ರಾಜ್ಯದಲ್ಲಿ ಕೊರೋನ ಸೋಂಕು ನಿಯಂತ್ರಣಕ್ಕೆ ತಜ್ಞರ ಸಮಿತಿ ವರದಿ ನೀಡಿದ್ದರೂ ಕ್ರಮ ವಹಿಸದೆ ಒತ್ತಡಕ್ಕೆ ಮಣಿದು ಸಿನಿಮಾ ಮಂದಿರ ಶೇ.50ರಷ್ಟು ಸೀಟಿನ ಬದಲಿಗೆ ನೂರರಷ್ಟು ಸೀಟಿಗೆ ಅವಕಾಶ ನೀಡಿತು. ಅದರ ಪರಿಣಾಮ ಅದಕ್ಕೆ ಬೆಲೆ ತೆರಬೇಕಾಗಿದೆ. ಮೃತರಿಗೆ ಉತ್ತಮ ರೀತಿಯಲ್ಲಿ ಅಂತಿಮ ಕ್ರಿಯಾ ವಿಧಿಗಳನ್ನು ಪೂರೈಸಲು ಸಾಧ್ಯವಾಗದೆ ಇರುವ ಕಾರಣ ಸ್ವಾಭಾವಿಕವಾಗಿ ಆಕ್ರೋಶಗೊಂಡಿದ್ದಾರೆ. ಈಗಿರುವ ವ್ಯವಸ್ಥೆಗಳಲ್ಲಿನ ಸಣ್ಣಪುಟ್ಟ ಬದಲಾವಣೆ ಮಾಡಿದರೆ ಮೃತರಿಗೆ ಒಳ್ಳೆಯ ರೀತಿಯ ವಿದಾಯ ನೀಡಲು ಮತ್ತು ಈಗ ಉಂಟಾಗಿರುವ ಎಲ್ಲ ಗೊಂದಲಗಳನ್ನು ಪರಿಹರಿಸಲು ಸಾಧ್ಯವಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ.

ಕೊರೋನ ಉಲ್ಬಣಗೊಂಡಿರುವುದು ಸರಕಾರದ ನಿರ್ಲಕ್ಷ್ಯ, ನಿಷ್ಕ್ರಿಯತೆ ಮತ್ತು ದುರಾಡಳಿತದಿಂದ. ತಮ್ಮ ವೈಫಲ್ಯ ಮುಚ್ಚಿಹಾಕಲು ಪೊಲೀಸರ ಕೈಗೆ ಲಾಠಿ ಕೊಟ್ಟು ಬೀದಿಗಿಳಿಸಿದರೆ ಕೊರೋನ ಓಡಿಹೋಗುವುದೇ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ? ಇದೇನು ಚುನಾಯಿತ ಸರಕಾರವೋ? ಹುಚ್ಚರ ಸಂತೆಯೋ? ಕ್ಷಣ ಕ್ಷಣಕ್ಕೂ ಬದಲಾಗುವ ನಿರ್ಧಾರ-ಮಾರ್ಗಸೂಚಿಗಳು, ಅಘೋಷಿತ ಲಾಕ್‌ಡೌನ್, ಅಮಾಯಕ ಜನತೆ ಮೇಲೆ ದೌರ್ಜನ್ಯ.. ಏನಿದು ಸಿಎಂ ಯಡಿಯೂರಪ್ಪ ಅವರೇ, ಆಡಳಿತ ನಡೆಸಲಾಗದಿದ್ದರೆ ಕುರ್ಚಿಬಿಟ್ಟು ತೊಲಗಿ, ಜನರನ್ನು ಏಕೆ ಗೋಳು ಹೋಯ್ಕೋಳ್ತಿರೀ?’ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮೇ ತಿಂಗಳ ಮೊದಲನೆ ವಾರದಲ್ಲಿ ಸೋಂಕಿತರ ಸಂಖ್ಯೆ 35 ಸಾವಿರದ ಗಡಿದಾಟುವ ಸಾಧ್ಯತೆಯಿದ್ದು, ಸೋಂಕಿನಿಂದ ಸಾವಿನ ಸಂಖ್ಯೆಯೂ 200ರ ಗಡಿದಾಟಲಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News