ವೆಂಟಿಲೇಟರ್ ಲಭ್ಯತೆಯನ್ನು 10 ಪಟ್ಟು ಹೆಚ್ಚಿಸಲು ಕ್ರಮ: ಸಚಿವ ಡಾ.ಸುಧಾಕರ್

Update: 2021-04-23 16:49 GMT

ಬೆಂಗಳೂರು, ಎ.23: ಬೆಂಗಳೂರಿನಲ್ಲಿ ವೆಂಟಿಲೇಟರ್ ಲಭ್ಯತೆಯನ್ನು 10 ಪಟ್ಟು ಹೆಚ್ಚಿಸಲು ಮುಖ್ಯಮಂತ್ರಿಗಳು ಸೂಚಿಸಿದ್ದು, ಇದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೊತೆಗೆ ಬೆಂಗಳೂರಿನ ಆಸ್ಪತ್ರೆಗಳ ಆವರಣದಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆ ಬರಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಆಕ್ಸಿಜನ್, ಹಾಸಿಗೆ, ಐಸಿಯು ಹಾಸಿಗೆ, ವೆಂಟಿಲೇಟರ್ ಕೊರತೆಯಾಗುತ್ತಿದೆ. 15 ದಿನದೊಳಗೆ ಕನಿಷ್ಠ 2 ಸಾವಿರ ಐಸಿಯು ಹಾಸಿಗೆಯ ಮೇಕ್ ಶಿಫ್ಟ್ ಆಸ್ಪತ್ರೆ ಮಾಡಲಾಗುವುದು. 2 ಸಾವಿರದ ಪೈಕಿ 800ಕ್ಕೆ ವೆಂಟಿಲೇಟರ್ ಅಳವಡಿಕೆಯಾಗಲಿದೆ. ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲೇ ಮೇಕ್ ಶಿಫ್ಟ್ ನಲ್ಲಿ 250 ಹಾಸಿಗೆಯ ಐಸಿಯು, ಇನ್ನೊಂದು ಹೊಸ ಕಟ್ಟಡದಲ್ಲಿ 150-200 ಹಾಸಿಗೆಯ ಐಸಿಯು ಮಾಡಲಾಗುತ್ತಿದೆ. 250 ಹಾಸಿಗೆಯ ಐಸಿಯುನಲ್ಲಿ 100ಕ್ಕೆ ವೆಂಟಿಲೇಟರ್ ಅಳವಡಿಸಲಾಗಿರುತ್ತದೆ. ಬೌರಿಂಗ್, ನಿಮ್ಹಾನ್ಸ್, ರಾಜೀವ್ ಗಾಂಧಿ ಮೊದಲಾದ ಕಡೆ ಮೇಕ್ ಶಿಫ್ಟ್ ಆಸ್ಪತ್ರೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರೆಮ್‍ಡೆಸಿವಿರ್ ಔಷಧಿಗಳು ನಿರಂತರ ಪೂರೈಕೆಯಾಗುತ್ತಿದೆ. ಹೆಚ್ಚುವರಿಯಾಗಿ 25 ಸಾವಿರ ಪಡೆಯಲು ಕೇಂದ್ರ ರಾಸಾಯನಿಕ ಸಚಿವ ಡಿ.ವಿ. ಸದಾನಂದಗೌಡ ಅವಕಾಶ ಮಾಡಿಕೊಟ್ಟಿದ್ದಾರೆ. ಬಯೋಕಾನ್ ಮುಖ್ಯಸ್ಥೆ ಕಿರಣ್ ಮುಜುಮದಾರ್ ಷಾ ಅವರೊಂದಿಗೂ ಚರ್ಚಿಸಿದ್ದು, 10 ದಿನದೊಳಗೆ 10 ಸಾವಿರ ವೈಲ್ ಕೊಡುವುದಾಗಿ ಹೇಳಿದ್ದಾರೆ. ಈ ತಿಂಗಳಲ್ಲೇ 50-60 ಸಾವಿರ ವೈಲ್ ನೀಡುವುದಾಗಿ ತಿಳಿಸಿದ್ದಾರೆ. ವಿದೇಶದಿಂದ ಒಂದೇ ಬಾರಿಗೆ 2 ಲಕ್ಷ ರೆಮ್ಡೆಸಿವಿರ್ ವೈಲ್ ತರಿಸಿಕೊಳ್ಳಲು ಸಿದ್ಧತೆ ಮಾಡುತ್ತಿದ್ದೇವೆ. ಇದಕ್ಕಾಗಿ ಕೇಂದ್ರ ಸರಕಾರದ ಅನುಮತಿ ಬೇಕಿದೆ. ಇಷ್ಟು ದೊರೆತರೆ, 15-20 ದಿನಕ್ಕೆ ಸಾಲುತ್ತದೆ ಎಂದು ತಿಳಿಸಿದರು.

ಕೆಲ ದೇಶಗಳಲ್ಲಿ 3 ಅಲೆ ಕೂಡ ಬಂದಿದ್ದು, ಒಂದೂವರೆ ತಿಂಗಳು ಲಾಕ್ ಡೌನ್ ಮಾಡಲಾಗಿದೆ. ಆದರೆ ನಮ್ಮಲ್ಲಿ ಎಲ್ಲ ಚಟುವಟಿಕೆಗೆ ಅವಕಾಶ ಮಾಡಿಕೊಟ್ಟು ಕೊರೋನ ನಿಯಂತ್ರಿಸಲಾಗುತ್ತಿದೆ. ಈಗ ಎಲ್ಲ ಚಟುವಟಿಕೆಗೆ ಅವಕಾಶ ನೀಡಿ, ಸೋಂಕು ನಿಯಂತ್ರಿಸಿ ಎಂದರೆ ಹೇಗೆ? ಈ ವಿಚಾರದಲ್ಲಿ ರಾಜಕೀಯ ಬೆರೆಸಬಾರದು ಎಂದರು.

ಪ್ರಧಾನಿಗಳ ಸಭೆಯಲ್ಲಿ ಸೂಚನೆ: ಪ್ರಧಾನಿಗಳು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಭೆಯಲ್ಲಿ, ಮನೆ ಆರೈಕೆ ವ್ಯವಸ್ಥೆ ಬಲಪಡಿಸಲು ಸೂಚನೆ ದೊರೆತಿದೆ. ಎಲ್ಲರೂ ಆಸ್ಪತ್ರೆಗೆ ಹೋಗುವುದರಿಂದ ವೈದ್ಯಕೀಯ ಸಿಬ್ಬಂದಿಗೆ ಹೊರೆ ಹೆಚ್ಚಿದೆ. ಟೆಲಿ ಕಾಲಿಂಗ್‍ನಿಂದ ಮಾರ್ಗದರ್ಶನ, ಚಿಕಿತ್ಸೆ ನೀಡಬೇಕೆಂದು ಸೂಚಿಸಿದ್ದಾರೆ. ರಾಜ್ಯದಲ್ಲಿ ಕೈಗೊಂಡ ಬಿಗಿ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿವರಿಸಿದ್ದಾರೆ ಎಂದರು.

ಈ ತಿಂಗಳ ಕೊನೆಗೆ ದಿನಕ್ಕೆ 1 ಸಾವಿರ ಟನ್ ಆಕ್ಸಿಜನ್ ನೀಡಬೇಕು. ಮೇ 1 ರಿಂದ 1,500 ಟನ್ ಪ್ರತಿ ದಿನ ಆಕ್ಸಿಜನ್ ನೀಡಬೇಕು. 2 ಲಕ್ಷ ವೈಲ್ ರೆಮ್‍ಡಿಸಿವಿರ್ ಅಮದಿಗೆ ಅನುಮರಿ ಕೊಡಬೇಕೆಂದು ಮುಖ್ಯಮಂತ್ರಿಗಳು ಪ್ರಧಾನಿಯವರಿಗೆ ಕೋರಿದ್ದಾರೆ ಎಂದು ತಿಳಿಸಿದರು.

1912ಗೆ ಕರೆ ಮಾಡಿ: ಮನೆ ಆರೈಕೆಯಲ್ಲಿರುವ ಕೋವಿಡ್ ರೋಗಿಗಳಿಗೆ ಹೆಚ್ಚು ಸಮಸ್ಯೆಯಾದರೆ 1912 ಗೆ ಕರೆ ಮಾಡಿದರೆ ಮಾರ್ಗದರ್ಶನ ದೊರೆಯುತ್ತದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News