ಹಾಸ್ಟೆಲ್ ವಿದ್ಯಾರ್ಥಿಗಳನ್ನು ಬಲವಂತವಾಗಿ ಹೊರ ಕಳುಹಿಸಬಾರದು: ಶಿಕ್ಷಣ ಸಚಿವ ಸುರೇಶ್‍ ಕುಮಾರ್

Update: 2021-04-23 17:22 GMT

ಬೆಂಗಳೂರು, ಎ.23: ಕೋವಿಡ್ ಸಂದರ್ಭದಲ್ಲಿ ಹಾಸ್ಟೆಲ್‍ಗಳಲ್ಲಿರುವ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಬಲವಂತವಾಗಿ ಹೊರಕಳಿಸಬಾರದು. ಅವರಿಚ್ಛೆಯಂತೆ ಹಾಸ್ಟೆಲ್‍ಗಳಲ್ಲಿಯೇ ಇರುವಂತೆ ಕ್ರಮ ಕೈಗೊಳ್ಳಬೇಕೆಂದು ಶಿಕ್ಷಣ ಸಚಿವ ಸುರೇಶ್‍ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಸಮಾಜಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲುಗೆ ಪತ್ರ ಬರೆದಿರುವ ಅವರು, ಕೋವಿಡ್ ಸಂದರ್ಭದಲ್ಲೂ ವಿದ್ಯಾರ್ಥಿಗಳು ತಾವು ಹಾಸ್ಟೆಲ್‍ನಲ್ಲಿಯೇ ಉಳಿಯುತ್ತೇವೆಂದು ನಿಶ್ಚಯಿಸಿರುವುದು ಮೆಚ್ಚುಗೆಯ ಸಂಗತಿಯಾಗಿದೆ. ಇದಕ್ಕೆ ವಿದ್ಯಾರ್ಥಿಗಳ ಪೋಷಕರ ಬೆಂಬಲವೂ ಸಿಕ್ಕಿರುವುದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಅನೇಕ ಶಾಲಾ ಕಾಲೇಜು ವಿದ್ಯಾರ್ಥಿಗಳು ವಿವಿಧ ಇಲಾಖೆಗಳ ಆಶ್ರಯದಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ನಿಲಯಗಳ ವಾಸಿಗಳಾಗಿದ್ದಾರೆ. ಇವರುತಮ್ಮ ವ್ಯಾಸಂಗಕ್ಕೆ ಸಂಪೂರ್ಣವಾಗಿ ಸಾರ್ವಜನಿಕ ವಿದ್ಯಾರ್ಥಿನಿಲಯಗಳನ್ನೇ ನೆಚ್ಚಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೋವಿಡ್ ಸಂದರ್ಭದಲ್ಲಿ ಆ ವಿದ್ಯಾರ್ಥಿಗಳನ್ನು ಹಾಸ್ಟೆಲ್‍ನಿಂದ ಹೊರಗುಳಿಯುವಂತೆ ಮಾಡುವುದು ಸರಿಯಾದ ಕ್ರಮವಲ್ಲವೆಂದು ಅವರು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಸಜ್ಜಾಗುತ್ತಿರುವ ಈ ಸಮಯದಲ್ಲಿ ಅವರನ್ನು ಹಾಸ್ಟೆಲ್‍ನಿಂದ ಹೊರಹೋಗುವಂತೆ ನಿರ್ದೇಶನ ಮಾಡುತ್ತಿರುವುದು ಅವರ ಆತ್ಮವಿಶ್ವಾಸಕ್ಕೆ ಧಕ್ಕೆ ತರುವಂತಾಗುತ್ತದೆ. ಹೀಗಾಗಿ ಸಚಿವ ಶ್ರೀರಾಮುಲು ವಿದ್ಯಾರ್ಥಿಗಳು ಹಾಸ್ಟೆಲ್‍ನಲ್ಲಿಯೇ ಉಳಿಯುವಂತೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News