ಪ್ರೇಯಸಿ ಮೇಲೆ ಸಂಶಯಪಟ್ಟು ಆಕೆಗೆ ಚೂರಿಯಿಂದ ಇರಿದ ಯುವಕ
Update: 2021-04-23 23:49 IST
ಮೈಸೂರು,ಎ.23: ಪ್ರೇಯಸಿಯ ಮೇಲೆ ಸಂಶಯಪಟ್ಟು ಪ್ರಿಯಕರ ಆಕೆಗೆ ಚೂರಿಯಿಂದ ಇರಿದಿರುವ ಘಟನೆ ನಗರದ ಶ್ರೀ ಹರ್ಷ ರಸ್ತೆಯಲ್ಲಿ ನಡೆದಿದೆ.
ನಂಜನಗೂಡಿನ ಶ್ರೀರಾಂಪುರದ 26 ವರ್ಷದ ಯುವತಿ ಪ್ರಿಯಕರನಿಂದ ಹಲ್ಲೆಗೊಳಗಾದವಳು. ಹೆಚ್.ಡಿ. ಕೋಟೆ ತಾಲೂಕಿನ ಅಂತರಸಂತೆಯ ನಿವಾಸಿ ರಮೇಶ್ ಹಲ್ಲೆ ಆರೋಪಿ.
ಮೈಸೂರಿನ ಖಾಸಗಿ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಹಾಗೂ ರಮೇಶ್ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ. ರಮೇಶ್ ಆಕೆಗೆ ಬರುತ್ತಿದ್ದ ಮೆಸೇಜ್ ಗಳನ್ನು ತನ್ನ ಮೊಬೈಲ್ ಗೆ ಬರುವಂತೆ ಮಾಡಿಕೊಂಡಿದ್ದ. ಈ ನಡುವೆ ಯುವತಿ ಕೆಲ ಯುವಕರ ಜೊತೆ ಚಾಟ್ ಮಾಡಿದ್ದರಿಂದ ಆಕೆಯ ವಿರುದ್ಧ ತಿರುಗಿ ಬಿದ್ದ ರಮೇಶ್ ಆಕೆಯ ನಡತೆಯ ಬಗ್ಗೆ ಶಂಕೆ ವ್ಯಕ್ತಪಡಿಸಿ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ.
ಘಟನೆ ನಡೆದ ಸ್ಥಳದಲ್ಲಿದ್ದ ಸ್ಥಳೀಯರೇ ರಮೇಶ್ ನನ್ನು ಪೊಲೀಸರಿಗೆ ಒಪ್ಪಿಸಿದ್ದು, ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.