×
Ad

ಪಲ್ಸ್ ಪೋಲಿಯೋ ಮಾದರಿ ಎಲ್ಲರಿಗೂ ಉಚಿತ ಕೊರೋನ ಲಸಿಕೆ ನೀಡಿ: ಸರಕಾರಕ್ಕೆ ಕುಮಾರಸ್ವಾಮಿ ಮನವಿ

Update: 2021-04-24 15:04 IST

ಬೆಂಗಳೂರು, ಎ.24: ಮೇ ತಿಂಗಳ 1 ರಿಂದ ‌18 ವರ್ಷ ಮೇಲ್ಪಟ್ಟವರಿಗೆ ಕೊರೋನ ಲಸಿಕೆ ನೀಡಲು ಕೇಂದ್ರ ಸರಕಾರ ತೆಗೆದುಕೊಂಡಿರುವ ತೀರ್ಮಾನದಂತೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಆರುವರೆ ಕೋಟಿ ಜನತೆಗೂ ಉಚಿತವಾಗಿ ಲಸಿಕೆಯನ್ನು ನೀಡುವ ಮೂಲಕ ನೆರವಿಗೆ ಧಾವಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, 'ಈಗಾಗಲೇ ಜಾರ್ಖಂಡ್, ಗೋವಾ, ಛತ್ತೀಸ್‌ಘಡ, ಉತ್ತರ ಪ್ರದೇಶ, ಅಸ್ಸಾಂ, ಮಧ್ಯಪ್ರದೇಶ, ಕೇರಳ, ಬಿಹಾರ ಮತ್ತು ಸಿಕ್ಕಿಂನಲ್ಲಿ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಲಾಗಿದೆ. ಈಗ ಕರ್ನಾಟಕ ರಾಜ್ಯದಲ್ಲಿಯೂ ಸಹ ಇದೇ ಕ್ರಮ ಅನುಸರಿಸಬೇಕು‌ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ‌ನನ್ನ ಕೋರಿಕೆ. ಈಗಿನ ಸಂದರ್ಭದಲ್ಲಿ ಜನರು ಹಣ ಕೊಟ್ಟು ಲಸಿಕೆ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಸರಕಾರವೇ ಮುಂದೆ ಬಂದು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡುವ ತೀರ್ಮಾನವನ್ನು ಪ್ರಕಟಿಸಬೇಕೆಂಬುದು ನನ್ನ ‌ಆಗ್ರಹವಾಗಿದೆ' ಎಂದು ಅವರು ತಿಳಿಸಿದ್ದಾರೆ.

ಸುಮಾರು ಒಂದು ಕೋಟಿ ಡೋಸ್ ಲಸಿಕೆ ಕೊಳ್ಳಲು 400 ಕೋಟಿ ರೂ. ಮೀಸಲಿಡಲಾಗಿದೆ. ಸರಿಸುಮಾರು 2.50 ಲಕ್ಷ ಕೋಟಿ ಬಜೆಟ್ ಮಂಡನೆ ಮಾಡುವ ಸರಕಾರಕ್ಕೆ ಕನಿಷ್ಠ ಪಕ್ಷ 2 ಸಾವಿರ ಕೋಟಿ ಹಣವನ್ನು ಲಸಿಕೆ ಖರೀದಿ ಮಾಡಲು ಮೀಸಲಿಡುವುದರಿಂದ ಬೊಕ್ಕಸಕ್ಕೆ ಭಾರೀ ಹೊರೆಯಾಗದು. ಬಡವ-ಬಲ್ಲಿದನೆಂಬ ತಾರತಮ್ಯ ತೋರದೆ ರಾಜ್ಯದ ಎಲ್ಲಾ ಜನತೆಗೆ ಉಚಿತವಾಗಿ ಲಸಿಕೆ ನೀಡುವ ಮಹತ್ವದ ನಿರ್ಧಾರ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಈ ಮೂಲಕ ಆಗ್ರಹಿಸುತ್ತೇನೆ ಎಂದು ಅವರು ವಿನಂತಿಸಿದ್ದಾರೆ.

ರಾಜ್ಯದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡುವಂತೆ ಒಂದುವರೆ ತಿಂಗಳ ಹಿಂದೆಯೇ ಸರ್ಕಾರಕ್ಕೆ ಸಲಹೆ ನೀಡಿದ್ದೆ. ಪಲ್ಸ್ ಪೋಲಿಯೋ ಲಸಿಕೆ ನೀಡಿದ ಮಾದರಿಯಲ್ಲಿ ಎಲ್ಲರಿಗೂ ಉಚಿತವಾಗಿ ಕೊರೋನ ಲಸಿಕೆ ನೀಡುವ ನಿರ್ಧಾರ ಕೈಗೊಂಡರೆ ಅದು ಅಭಿನಂದನಾರ್ಹ ಎಂದು ಕುಮಾರಸ್ವಾಮಿ ಸರಕಾರಕ್ಕೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News